`ಗಾಜಿನ ಮನೆ’ಯೊಳಗೆ ಅರಳಲಿದೆ `ಕಮಲ ದೇವಸ್ಥಾನ’
ಮೈಸೂರು

`ಗಾಜಿನ ಮನೆ’ಯೊಳಗೆ ಅರಳಲಿದೆ `ಕಮಲ ದೇವಸ್ಥಾನ’

September 21, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಗಾಜಿನ ಮನೆಯೊಳಗೆ ಅರಳಲಿರುವ ಕಮಲ ದೇವಸ್ಥಾನ. ನವದೆಹಲಿಯಲ್ಲಿರುವ ಕಮಲ ದೇವಸ್ಥಾನದ ಹೂವಿನ ಮಾದರಿಯನ್ನು ಇದು ಹೋಲಲಿದೆ.

1986ರ ಡಿಸೆಂಬರ್‌ನಲ್ಲಿ ಬಹಾಯಿ ಪೂಜಾ ಮನೆಯಾಗಿ ಸಮರ್ಪಿಸಲ್ಪಟ್ಟ ಕಮಲ ದೇವಸ್ಥಾನದ ಹೂವಿನ ಮಾದರಿ ಈ ಬಾರಿ ಪ್ರವಾಸಿಗರನ್ನು ಸೆಳೆಯಲಿದೆ.

ಪ್ರತೀ ವರ್ಷ ದಸರಾ ಮಹೋತ್ಸವ ಸಂದರ್ಭದಲ್ಲಿ ಕುಪ್ಪಣ್ಣ ಪಾರ್ಕ್‍ನಲ್ಲಿ ಒಂದಲ್ಲ ಒಂದು ಹೂವಿನ ಮಾದರಿಯನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಅ.10ರಿಂದ 19ರವರೆಗೆ ನಡೆಯುವ ಫಲ-ಪುಷ್ಪ ಪ್ರದರ್ಶನದಲ್ಲಿ `ಕಮಲ ದೇವಸ್ಥಾನ’ದ ಮಾದರಿಯನ್ನು ನಿರ್ಮಿಸಲು ಮೈಸೂರು ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಬಿಟ್ಟರೆ ಹೆಚ್ಚಿನ ಆಕರ್ಷಣೆ ಎಂದರೆ ಕುಪ್ಪಣ್ಣ ಪಾರ್ಕ್‍ನಲ್ಲಿ 10 ದಿನ ಗಳ ಕಾಲ ನಡೆಯುವ ಫಲ-ಪುಷ್ಪ ಪ್ರದರ್ಶನ. ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದ ಬಳಿಯಿರುವ (ಆರು ಗೇಟ್ ವೃತ್ತ ಅಥವಾ ಹಾರ್ಡಿಂಜ್ ಸರ್ಕಲ್) ಕುಪ್ಪಣ್ಣ ಪಾರ್ಕ್‍ನಲ್ಲಿ ನೂತನ ವಾಗಿ ನಿರ್ಮಿಸಿರುವ ಗಾಜಿನ ಮನೆಯ ಒಳಭಾಗದಲ್ಲಿ ಈ ಮಾದರಿಯನ್ನು ನಿರ್ಮಿಸಲಾಗುತ್ತಿದೆ.

ಈ ಕುರಿತು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇ ಶಕಿ ಹಬೀಬಾ ನಿಶಾತ್, ತಂಪಾದ ವಾತಾ ವರಣ ಒದಗಿಸುವ ಗಾಜಿನ ಮನೆಯಲ್ಲಿ ಹೂವುಗಳ ತಾಜಾತನ ದೀರ್ಘಕಾಲ ಉಳಿಯಲಿದೆ. ಸಾವಿರಾರು ಗುಲಾಬಿ ಹೂವು, ಆರ್ಕಿಡ್ ಮತ್ತು ಕಮಲದ ಹೂವುಗಳನ್ನು ಬಳಸಿ ಈ ಕಮಲ ದೇವಸ್ಥಾನದ ಮಾದರಿ ನಿರ್ಮಿಸಲಾಗುವುದು ಎಂದರು.

ಫಲ-ಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಮತ್ತು ಮಳಿಗೆಗಳ ಗುತ್ತಿಗೆಯನ್ನು ಮೈಸೂರು ಮೂಲದ ಪ್ರಮುಖ ಸಂಸ್ಥೆಯೊಂದಕ್ಕೆ 70.5 ಲಕ್ಷ ರೂ.ಗಳಿಗೆ ನೀಡಲಾಗುತ್ತಿದೆ ಎಂದು ಹಬೀಬಾ ಅವರು ಬಹಿರಂಗಗೊಳಿಸಿದರು.

Translate »