ಮೂವರ ಅಮಾನತು: ಪಾರುಪತ್ತೆದಾರ್ ವಿರುದ್ಧ ಗೋಪಾಲಕ ದೂರು ದಾಖಲು
ಮೈಸೂರು

ಮೂವರ ಅಮಾನತು: ಪಾರುಪತ್ತೆದಾರ್ ವಿರುದ್ಧ ಗೋಪಾಲಕ ದೂರು ದಾಖಲು

September 21, 2018

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗಣಕೀಕೃತ ಟಿಕೆಟ್ ನೀಡುವಾಗ ನಡೆದ 6.79 ಲಕ್ಷ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿಯು ಇಂದು ಮೂವರನ್ನು ಅಮಾನತುಗೊಳಿಸಿದೆ. ಅದೇ ವೇಳೆ ದೇವಸ್ಥಾನದ ಪಾರುಪತ್ತೆದಾರ್ ವಿರುದ್ಧ ಗೋಪಾಲಕ ಕೆ.ಆರ್.ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಟಿಕೆಟ್ ವಿತರಿಸುವ ಗಣಕಯಂತ್ರದಲ್ಲಿ 2018ನೇ ವರ್ಷ ಎಂಬುದನ್ನು 2008 ಎಂದು ಬದಲಿಸಿ, 6.79 ಲಕ್ಷ ರೂ. ಅವ್ಯವಹಾರ ನಡೆಸಲಾಗಿತ್ತು. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವ್ಯವಸ್ಥಾಪನಾ ಸಮಿತಿ ಸಭೆ ನಡೆದಿದ್ದು, ಅವ್ಯವಹಾರಕ್ಕೆ ಕಾರಣಕರ್ತರಾದ ಪಾರುಪತ್ತೆದಾರ ಎಂ.ಡಿ.ರಾಜು, ಗೋಪಾಲಕ ಆನಂದ, ಮತ್ತೋರ್ವ ನೌಕರ ಪ್ರಕಾಶ್ ಅವರನ್ನು ವಿಚಾರಣೆ ಕಾಯ್ದಿರಿಸಿ ಇಂದು ಅಮಾನತುಪಡಿಸಲಾಗಿದೆ.

ಪೊಲೀಸರಿಗೆ ದೂರು: ಅದೇ ವೇಳೆ ಪಾರುಪತ್ತೆದಾರ ಎಂ.ಡಿ.ರಾಜು ತನ್ನ ಪಾಸ್‍ವರ್ಡ್ ಅನ್ನು ದುರುಪಯೋಗ ಪಡಿಸಿಕೊಂಡು ಟಿಕೆಟ್ ವಿತರಿಸಿ 1,13,700 ರೂ.ಗಳನ್ನು ಕಬಳಿಸಿದ್ದಾರೆ ಎಂದು ಗೋಪಾಲಕ ಆನಂದ, ಕೆ.ಆರ್.ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ದೂರಿಗೆ ಎನ್‍ಸಿಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣದ ವಿವರ: ಪಾರುಪತ್ತೆದಾರನಾದ ಎಂ.ಡಿ. ರಾಜು ಚಾಮುಂಡಿ ಬೆಟ್ಟ ದೇವಸ್ಥಾನದ ಟಿಕೆಟ್ ವಿತರಣಾ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅದೇ ವೇಳೆ ವಿಶೇಷ ಕೌಂಟರ್‍ಗಳಲ್ಲಿ ಟಿಕೆಟ್ ವಿತರಣೆ ಮಾಡುವ ಕೆಲಸವನ್ನು ಆನಂದ ಮತ್ತು ಪ್ರಕಾಶ್ ಅವರಿಗೆ ವಹಿಸಲಾಗಿತ್ತು. ಆನಂದ ಮತ್ತು ಪ್ರಕಾಶ್ ಅವರಿಗೆ ಅಷ್ಟೇನು ಕಂಪ್ಯೂಟರ್ ಜ್ಞಾನ ಇಲ್ಲದ ಕಾರಣ ಪಾಸ್‍ವರ್ಡ್‍ಗಳನ್ನು ಎಂ.ಡಿ.ರಾಜು ಅವರೇ ಕ್ರಿಯೆಟ್ ಮಾಡಿಕೊಟ್ಟು ಹೇಗೆ ಟಿಕೆಟ್ ವಿತರಿಸಬೇಕು ಎಂಬುದನ್ನು ಕೂಡ ಹೇಳಿಕೊಟ್ಟಿದ್ದರಂತೆ. ಒಂದು ದಿನ ಆನಂದ ಕರ್ತವ್ಯಕ್ಕೆ ಹಾಜರಾಗಿ ಟಿಕೆಟ್ ನೀಡಲು ಆರಂಭಿಸಿದಾಗ 2018ನೇ ವರ್ಷಕ್ಕೆ ಬದಲಾಗಿ 2008 ಎಂದು ಬರುತ್ತಿದ್ದುದನ್ನು ಗಮನಿಸಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ.

ಅದರ ಬಗ್ಗೆ ಪರಿಶೀಲಿಸಿದಾಗ ಉದ್ದೇಶಪೂರ್ವಕವಾಗಿಯೇ ವರ್ಷವನ್ನು ಬದಲಾಯಿಸಲಾಗಿದೆ. ಹೀಗೆ ವರ್ಷವನ್ನು ಬದಲಾಯಿಸಿ ದಾಸೋಹ ಸೇವೆ ಸೇರಿದಂತೆ ಹಲವು ಸೇವೆಗಳ ಟಿಕೆಟ್‍ಗಳನ್ನು ವಿತರಿಸಿ 6.79 ಲಕ್ಷ ರೂ. ಕಬಳಿಸಲಾಗಿದೆ ಎಂಬುದು ಗೊತ್ತಾಗಿದೆ.

ಆನಂದ ಮತ್ತು ಪ್ರಕಾಶ್‍ನ ಪಾಸ್‍ವರ್ಡ್‍ಗಳನ್ನು ದುರುಪಯೋಗಪಡಿಸಿಕೊಂಡು ಎಂ.ಡಿ.ರಾಜು ಈ ಕೃತ್ಯವೆಸಗಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಮೂವರಿಗೂ ಸೆ.1ರಂದು ನೋಟೀಸ್ ನೀಡಲಾಗಿತ್ತು. ಈ ವೇಳೆ ಎಂ.ಡಿ.ರಾಜು ತಾನು ದುರುಪಯೋಗಪಡಿಸಿಕೊಂಡಿದ್ದ ಹಣವನ್ನು ದೇವಸ್ಥಾನಕ್ಕೆ ಪಾವತಿಸಿದ್ದಾನೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈಗ ವ್ಯವಸ್ಥಾಪನಾ ಸಮಿತಿ ಸಭೆ ನಡೆದು ಮೂವರನ್ನು ಅಮಾನತುಪಡಿಸಲಾಗಿದೆ.

ಈ ಮಧ್ಯೆ ತನ್ನ ಪಾಸ್‍ವರ್ಡ್ ಅನ್ನು ದುರುಪಯೋಗ ಪಡಿಸಿಕೊಂಡು ಎಂ.ಡಿ.ರಾಜು 1,13,700 ರೂ.ಗಳನ್ನು ಕಬಳಿಸಿದ್ದಾರೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ ಗೋಪಾಲಕ ಆನಂದ ತಾನು ಎಂ.ಡಿ.ರಾಜು ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲು ಪೂರ್ವಾನುಮತಿ ಕೋರಿ ನಂತರ ಕೆ.ಆರ್.ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಸರ್ಕಾರಿ ನೌಕರನ ವಿರುದ್ಧ ದೂರು ಬಂದರೆ ಅದನ್ನು ಎನ್‍ಸಿಆರ್ ಮಾಡಿಕೊಂಡು ನ್ಯಾಯಾಧೀಶರ ಅನುಮತಿ ಪಡೆದ ನಂತರ ಎಫ್‍ಐಆರ್ ದಾಖಲಿಸಬೇಕು ಎಂಬ ನಿಯಮದಂತೆ ಪೊಲೀಸರು ಈ ಪ್ರಕರಣದ ಎನ್‍ಸಿಆರ್ ದಾಖಲಿಸಿದ್ದಾರೆ.

Translate »