ವಿಧಾನಸೌಧ ಕಾರಿಡಾರ್‌ನಲ್ಲಿ ಸುಮ್ಮನೆ ಸುತ್ತಾಡಬೇಡಿ: ವಿಸಿ, ರಿಜಿಸ್ಟ್ರಾರ್‌ಗಳಿಗೆ ಸಚಿವ ಜಿಟಿಡಿ ತಾಕೀತು
ಮೈಸೂರು

ವಿಧಾನಸೌಧ ಕಾರಿಡಾರ್‌ನಲ್ಲಿ ಸುಮ್ಮನೆ ಸುತ್ತಾಡಬೇಡಿ: ವಿಸಿ, ರಿಜಿಸ್ಟ್ರಾರ್‌ಗಳಿಗೆ ಸಚಿವ ಜಿಟಿಡಿ ತಾಕೀತು

September 21, 2018

ಬೆಂಗಳೂರು: ವಿಧಾನಸೌಧಕ್ಕೆ ಭೇಟಿ ನೀಡಬೇಕಾದರೆ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಪಡೆಯಬೇಕೆಂದು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ರಿಜಿಸ್ಟ್ರಾರ್ ಹಾಗೂ ಇತರ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವರು ತಾಕೀತು ಮಾಡಿದ್ದಾರೆ. ವಿಧಾನ ಸೌಧದ ಕಾರಿಡಾರ್‌ಗಳಲ್ಲಿ ವಿಶ್ವ ವಿದ್ಯಾಲಯಗಳ ಉಪ ಕುಲಪತಿಗಳು, ರಿಜಿಸ್ಟ್ರಾರ್‌ಗಳು ಮತ್ತು ಇತರ ಅಧಿಕಾರಿಗಳು ಸುಮ್ಮನೆ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವ ಜಿ.ಟಿ. ದೇವೇಗೌಡ ಆದೇಶ ನೀಡಿ, ಅಧಿಕೃತ ಕೆಲಸವಿದ್ದರೆ ಮಾತ್ರ ವಿಧಾನಸೌಧಕ್ಕೆ ಬರಬೇಕು.

ಅದು ಕೂಡ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿಯೇ ಬರಬೇಕು ಎಂದು ಆದೇಶ ನೀಡಿದ್ದಾರೆ. ‘ನನ್ನ ಕಚೇರಿಗೆ ಮತ್ತು ವಿಧಾನಸೌಧ ಕಾರಿಡಾರ್‌ಗಳಿಗೆ ಅನಗತ್ಯವಾಗಿ ವಿಸಿಗಳು, ರಿಜಿಸ್ಟ್ರಾರ್‌ಗಳು ಭೇಟಿ ನೀಡುತ್ತಿರುತ್ತಾರೆ ಎಂದು ಸಾಕಷ್ಟು ಬಾರಿ ನನಗೆ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ವಿಸಿ, ರಿಜಿಸ್ಟ್ರಾರ್‌ಗಳು ಮತ್ತು ಅಧಿಕಾರಿಗಳು ವಿಧಾನಸೌಧಕ್ಕೆ ಬರಬೇಕು. ಅನಗತ್ಯವಾಗಿ ಬರಬೇಡಿ ಎಂದು ತಾಕೀತು ಮಾಡಿದ್ದೇನೆ’ ಎಂದಿದ್ದಾರೆ. ಕೆಲವು ಉಪ ಕುಲಪತಿಗಳು ವಿಧಾನಸೌಧದ ಸಚಿವರ ಕಚೇರಿಗೆ ಭೇಟಿ ನೀಡಿ ರಿಜಿಸ್ಟ್ರಾರ್‌ಗಳ ವರ್ಗಾವಣೆ ವಿಚಾರದಲ್ಲಿ ಮತ್ತು ವಿವಿಗಳ ಸಿಂಡಿಕೇಟ್ ಸದಸ್ಯರ ಹುದ್ದೆಗಳಿಗೆ ಆಕಾಂಕ್ಷಿಗಳಿಗೆ ಲಾಬಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಸಚಿವರಿಗೆ ಕೇಳಿಬಂದಿದೆ.

ನೇಮಕ: ರಾಜ್ಯದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ ಸಿಂಡಿಕೇಟ್‍ಗಳಿಗೆ ಅ.15ರೊಳಗೆ ಸದಸ್ಯರ ನೇಮಕ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದು, ಯಾವುದೇ ವ್ಯಕ್ತಿ ಅನರ್ಹ ಎಂದು ಕಂಡುಬಂದರೆ ಅವರನ್ನು ನಾಮ ನಿರ್ದೇಶನ ಮಾಡುವುದಿಲ್ಲ. ಸಿಂಡಿಕೇಟ್ ಸದಸ್ಯರ ಹುದ್ದೆ ನೇಮಕಕ್ಕೆ ಲಾಬಿ ಮತ್ತು ಒತ್ತಡ ಸಾಕಷ್ಟು ನಡೆಯುತ್ತಿದೆ. ಆದರೆ ಇದರಲ್ಲಿ ಯಾವುದೇ ರಾಜಕೀಯ ಪ್ರಭಾವ ಬೀರುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದವನು ಎಂದು ನಾನು ನೋಡುವುದಿಲ್ಲ. ಅವರು ಸಿಂಡಿಕೇಟ್ ಸದಸ್ಯರ ಹುದ್ದೆಗೆ ಅರ್ಹನಾಗಿರ ಬೇಕಷ್ಟೆ ಎಂದು ಜಿ ಟಿ ದೇವೇಗೌಡ ಹೇಳಿದ್ದಾರೆ. ಹಿಂದಿನ ಸರ್ಕಾರ ಮಾಡಿದ್ದ ನಾಮ ನಿರ್ದೇಶನವನ್ನು ಈಗಿನ ಸರ್ಕಾರ ಹಿಂತೆಗೆದುಕೊಂಡಿದ್ದರಿಂದ ಕೆಲವು ವಿಶ್ವವಿದ್ಯಾಲಯಗಳು ಸಿಂಡಿಕೇಟ್ ಸಭೆಗಳನ್ನು ನಡೆಸಲು ತೊಂದರೆ ಅನುಭವಿಸುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ದೇವೇಗೌಡ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಅಕ್ಟೋ ಬರ್ 15ರೊಳಗೆ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Translate »