ದುಂಡಾಕಾರದ `ಗಾಜಿನ ಮನೆ’ ಕಾಮಗಾರಿ ಪೂರ್ಣ
ಮೈಸೂರು

ದುಂಡಾಕಾರದ `ಗಾಜಿನ ಮನೆ’ ಕಾಮಗಾರಿ ಪೂರ್ಣ

September 21, 2018

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರೆಗೆ ಬರುವ ಪ್ರವಾಸಿಗರಿಗೆ ಈ ಬಾರಿಯ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ದುಂಡಾಕಾರದ ಗಾಜಿನ ಮನೆ. ಬರೋಬ್ಬರಿ 20 ತಿಂಗಳ ಕಾಮಗಾರಿ ಬಳಿಕ ಕೆಲವು ಸಣ್ಣಪುಟ್ಟ ಕಾಮ ಗಾರಿ ಹೊರತುಪಡಿಸಿ ಸುಂದರ `ಗಾಜಿನ ಮನೆ’ ಸಿದ್ಧವಾಗಿದೆ. ಮುಂದಿನ ತಿಂಗಳು ಅ.10ರಿಂದ 19 ರವರೆಗೆ ನಡೆಯಲಿರುವ 10 ದಿನಗಳ ದಸರಾ ಮಹೋತ್ಸವಕ್ಕೆ ಇದು ಪ್ರವಾಸಿಗರಿಗೆ ನೋಡಲು ಸಿಗಲಿದೆ.

ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದ (ಆರು ಗೇಟ್ ಅಥವಾ ಹಾರ್ಡಿಂಜ್ ಸರ್ಕಲ್) ಬಳಿಯಿರುವ ಕುಪ್ಪಣ್ಣ ಪಾರ್ಕ್‍ನಲ್ಲಿ ಸಂಪೂರ್ಣ ಗಾಜಿನಿಂದಲೇ ನಿರ್ಮಿಸಿರುವ ದುಂಡಾಕಾರದ ಗಾಜಿನ ಮನೆಯ ಮೇಲ್ತುದಿಯಲ್ಲಿ ಡೂಮ್ ನಿರ್ಮಾಣಕ್ಕೆ ಅಗತ್ಯವಿರುವ ಗಾಜಿನ ತುಂಡುಗಳ ಅಲಭ್ಯತೆ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿತ್ತು. ನಿರ್ಮಾಣದ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ನಿಖಿತಾ ಬಿಲ್ಡ್ ಟೆಕ್, ಗಾಜಿನ ಮನೆಯ ಹೊರ ಆವರಣದ ಕೆಲ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸುತ್ತಿದ್ದು, ಅದೂ ಕೂಡ ಇನ್ನೆರಡು ಮೂರು ದಿನಗಳಲ್ಲಿ ಮುಗಿಯಲಿದೆ ಎನ್ನುತ್ತಾರೆ ಗುತ್ತಿಗೆದಾರರು.

ಗಾಜಿನ ಅರಮನೆಯ ಒಳಾವರಣದಲ್ಲಿ ವಿದ್ಯುತ್ ದೀಪ, ಫ್ಯಾನ್, ಎಕ್ಸಾಸ್ಟ್ ಫ್ಯಾನ್‍ಗಳನ್ನು ಅಳವಡಿ ಸುವ ಕಾರ್ಯವೂ ಭರದಿಂದ ಸಾಗಿದೆ. ಅರಮನೆಯ ಮೇಲುಗಡೆ ಡೂಮ್ ಬಳಿ ಪಕ್ಷಿಗಳು ಒಳಹೋಗ ದಂತೆ ಮೆಷ್ ಅಳವಡಿಸಲಾಗಿದೆ. ಆ ಮೂಲಕ ಒಳಗಿನ ಬಿಸಿಗಾಳಿ ಹೊರ ಹೋಗಲು ಅನುಕೂಲ ವಾಗುವಂತೆ ಅಲ್ಲಿ 16 ಎಕ್ಸಾಸ್ಟ್ ಫ್ಯಾನ್ ಹಾಗೂ 15 ಫೋಕಸ್ ಲೈಟ್‍ಗಳನ್ನು ಅಳವಡಿಸಲಾಗಿದೆ.

ಮೈಸೂರಿನ ಪಾರಂಪರಿಕ ಕಟ್ಟಡಗಳ ಶೈಲಿಯಲ್ಲಿಯೇ ನಿರ್ಮಾಣಗೊಂಡಿರುವ ಗಾಜಿನ ಅರಮನೆಯ ಹೊರ ಆವರಣದಲ್ಲಿ ಮುಖ್ಯ ದ್ವಾರದ ಬಳಿ ಪಾಥ್‍ವೇ ನಿರ್ಮಾಣವೂ ಭರದಿಂದ ಸಾಗಿದೆ. ಅದರ ನಡುವೆ ಫೌಂಟೆನ್ ಒಂದನ್ನು ನಿರ್ಮಿಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ಈ ಕಾಮಗಾರಿಯೂ ಪೂರ್ಣಗೊಳ್ಳಲಿದ್ದು, ಬಹುಶಃ ಪಿತೃಪಕ್ಷ ಆರಂಭಕ್ಕೂ ಮುನ್ನ ಅಂದರೆ ಈ ಹುಣ್ಣಿಮೆಯ ಒಳಗಾಗಿ ಶುಭ ದಿನ ನೋಡಿ ಗುತ್ತಿಗೆದಾರ ಗಾಜಿನ ಅರಮನೆಯನ್ನು ತೋಟಗಾರಿಕೆ ಇಲಾಖೆ ಸುಪರ್ದಿಗೆ ಒಪ್ಪಿಸಲಿದ್ದಾರೆಂದು ಹೇಳಲಾಗಿದೆ.

ಗಾಜಿನ ಮನೆಗೆ SAINT-GOBAIN GLASS ಬಳಸಿದ್ದು, ಮಧ್ಯ ಪದರದಲ್ಲಿ 1.52 ಎಂಎಂ ಅಳತೆಯ ಪಿವಿಸಿ ಪಿಲ್ಮ್ ಉಳ್ಳ 13.52 ಎಂಎಂ ದಪ್ಪದ ಒಡೆಯದ ಗಾಜು ಬಳಸಲಾಗಿದೆ. ನಾಲ್ಕು ದಿಕ್ಕಿನಲ್ಲಿ ದೊಡ್ಡ ಸೆನ್ಸಾರ್‍ಯುಕ್ತ ಗಾಜಿನ ದ್ವಾರಗಳಿವೆ. ತಳಮಟ್ಟದಿಂದ 21 ಮೀಟರ್ ಎತ್ತರ, 36 ಮೀಟರ್ ಸುತ್ತಳತೆ, 18 ಮೀಟರ್ ಡೂಮ್, 6 ಮೀಟರ್ ಎತ್ತರದ ಗೋಡೆ ಎಲ್ಲವೂ ಗಾಜಿನಲ್ಲಿಯೇ ನಿರ್ಮಾಣವಾಗಿದೆ.

ಮೈಸೂರಿಗೆ ಬರುವ ಪ್ರವಾಸಿಗರು ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋ ಹನ ಅರಮನೆ, ಸಂತ ಫಿಲೋಮಿನಾ ಚರ್ಚ್ ಇನ್ನಿ ತರೆ ಪ್ರವಾಸಿ ತಾಣಗಳನ್ನು ನೋಡುವುದರ ಜೊತೆಗೆ ಈ ಸುಂದರ ಗಾಜಿನ ಮನೆಯೂ ನೋಡಲು ಸಿಗಲಿದೆ. ಒಟ್ಟಾರೆ 7.45 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಬೆಂಗಳೂರಿನ ನಿಖಿತಾ ಬಿಲ್ಡ್ ಟೆಕ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

Translate »