ದಸರಾ ವಸ್ತುಪ್ರದರ್ಶನ  ಗುತ್ತಿಗೆ ಕೇಳುವವರೇ ಇಲ್ಲ ಮರು ಟೆಂಡರ್‌ಗೆ ನಿರ್ಧಾರ
ಮೈಸೂರು

ದಸರಾ ವಸ್ತುಪ್ರದರ್ಶನ  ಗುತ್ತಿಗೆ ಕೇಳುವವರೇ ಇಲ್ಲ ಮರು ಟೆಂಡರ್‌ಗೆ ನಿರ್ಧಾರ

September 21, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪ್ರವಾ ಸಿಗರ ಆಕರ್ಷಣೀಯ ಕೇಂದ್ರಬಿಂದುವಾಗಲಿ ರುವ ದಸರಾ ವಸ್ತು ಪ್ರದರ್ಶನ ಟೆಂಡರ್‌ಗೆ ನಿರಾಸಕ್ತಿ ವ್ಯಕ್ತವಾಗಿದ್ದು, ಟೆಂಡರ್ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಯಾವುದೇ ಅರ್ಜಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯಲು ವಸ್ತು ಪ್ರದರ್ಶನ ಪ್ರಾಧಿಕಾರ ನಿರ್ಧರಿಸಿದೆ.

ದಸರಾ ವಸ್ತು ಪ್ರದರ್ಶನ ಪ್ರವೇಶ ಶುಲ್ಕ, ವಾಹನಗಳ ನಿಲುಗಡೆ ಶುಲ್ಕ, ಮನರಂಜನೆ ವಿಭಾಗ, 136 ವಾಣಿಜ್ಯ ಮಳಿಗೆಗಳು, ಫುಡ್‍ಮೇಳ ಒಳಗೊಂಡಂತೆ ವಸ್ತು ಪ್ರದರ್ಶನದ ಆವರಣದಲ್ಲಿರುವ ಖಾಲಿ ಸ್ಥಳವನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಿ ಈ ಬಾರಿ 6,99,30,000 ರೂ ಗಳಿಗೆ ಟೆಂಡರ್ ಮೊತ್ತ ನಿಗದಿ ಮಾಡಲಾಗಿತ್ತು. ಆದರೆ ಟೆಂಡರ್ ಸಲ್ಲಿಸಲು ಕೊನೆಯ ದಿನವಾದ ಬುಧವಾರದವರೆಗೂ ಯಾರೊಬ್ಬರೂ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಮರು ಟೆಂಡರ್ ಕರೆಯಲು ತೀರ್ಮಾನಿಸಿದ್ದಾರೆ. ಕಳೆದ ಸಾಲಿನಲ್ಲಿ 6.66 ಕೋಟಿ ರೂ.ಗೆ ಟೆಂಡರ್ ನೀಡಲಾಗಿತ್ತು. ಬೆಂಗಳೂರಿನ ಫನ್‍ವರ್ಡ್ ಸಂಸ್ಥೆ ಟೆಂಡರ್ ಪಡೆದಿತ್ತು.

34 ಸರ್ಕಾರಿ ಮಳಿಗೆ: ಈ ಬಾರಿ ದಸರಾ ವಸ್ತು ಪ್ರದರ್ಶನದಲ್ಲಿ 34 ಸರ್ಕಾರಿ ಮಳಿಗೆಗಳು ತಲೆ ಎತ್ತಲಿವೆ. ದಸರಾ ಉದ್ಘಾಟನೆಯ ದಿನದಂದೇ ವಸ್ತುಪ್ರದರ್ಶನ ದಲ್ಲಿನ ಎಲ್ಲಾ ಮಳಿಗೆಗಳು ಪ್ರವಾಸಿಗರು ವೀಕ್ಷಣೆಗೆ ಲಭ್ಯವಾಗಬೇಕೆಂಬ ಹಿನ್ನೆಲೆಯಲ್ಲಿ ಜುಲೈ 31 ಹಾಗೂ ಸೆ.14ರಂದು ಪ್ರಾಧಿಕಾರದ ವತಿಯಿಂದ ಎಲ್ಲಾ ಜಿಲ್ಲೆಗಳ ಜಿ.ಪಂಗಳಿಗೆ ಪತ್ರ ಬರೆಯಲಾಗಿತ್ತು. 7 ಜಿಲ್ಲೆಗಳು ಮಳಿಗೆ ಸ್ಥಾಪನೆಗೆ ಕಾಮಗಾರಿ ಆರಂಭಿಸಿವೆ. ಇದು ಒಳ್ಳೆಯ ಬೆಳವಣಿಗೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ಎನ್.ಎಂ.ಶಶಿಕುಮಾರ್ ತಿಳಿಸಿದ್ದಾರೆ.

ಉನ್ನತ ಶಿಕ್ಷಣದ ಮಾಹಿತಿಗಾಗಿ: ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಇತ್ತೀಚೆಗೆ ವಿವಿಧ ವಿಶ್ವವಿದ್ಯಾನಿಲಯಗಳ ಕುಲ ಪತಿಗಳೊಂದಿಗೆ ಸಭೆ ನಡೆಸಿ ದಸರಾ ವಸ್ತು ಪ್ರದರ್ಶನದಲ್ಲಿ ವಿವಿಗಳ ಸಾಧನೆ ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವುದಕ್ಕಾಗಿ ಮಳಿಗೆ ಸ್ಥಾಪಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನದ ಆವರಣದಲ್ಲಿ ವಿವಿಗಳ ಮಳಿಗೆಗಳಿಗಾಗಿ ಪ್ರತ್ಯೇಕ ಸ್ಥಳವನ್ನು ಕಾಯ್ದಿರಿಸಲಾಗಿದೆ. ಆದರೆ ಇದುವರೆಗೂ ಯಾವೊಂದು ವಿವಿಯೂ ಮಳಿಗೆ ಸ್ಥಾಪಿಸುವುದಾಗಿ ಮಾಹಿತಿ ನೀಡಿಲ್ಲ.

Translate »