`ಕರ್ನಾಟಕ ವಿವಿಗಳ ಸಮಗ್ರ ಮಾಹಿತಿ ಕಣಜ’  ಉನ್ನತ ಶಿಕ್ಷಣ ಇಲಾಖೆ ಮಳಿಗೆ
ಮೈಸೂರು

`ಕರ್ನಾಟಕ ವಿವಿಗಳ ಸಮಗ್ರ ಮಾಹಿತಿ ಕಣಜ’ ಉನ್ನತ ಶಿಕ್ಷಣ ಇಲಾಖೆ ಮಳಿಗೆ

December 2, 2018

ಮೈಸೂರು: ಕರ್ನಾಟಕದಲ್ಲಿರುವ ಎಲ್ಲಾ ವಿಶ್ವವಿದ್ಯಾನಿಲಯಗಳ ಕುರಿತ ಸಮಗ್ರ ಮಾಹಿತಿ ಮೈಸೂರಿನಲ್ಲಿ ಒಂದೇ ಸೂರಿನಡಿ ಲಭ್ಯವಾಗಲಿದೆ.

ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಇದೇ ಮೊದಲ ಬಾರಿಗೆ ಮೈದಳೆದಿರುವ ಉನ್ನತ ಶಿಕ್ಷಣ ಇಲಾಖೆ ಮಳಿಗೆಯಲ್ಲಿ ರಾಜ್ಯದ 19 ವಿಶ್ವವಿದ್ಯಾ ನಿಲಯಗಳ ಪರಿಚಯ, ಇತಿಹಾಸ, ಧ್ಯೇಯೋದ್ದೇಶ, ಸಾಧನೆಯ ಅನಾವರಣವಾಗಿದೆ. ಉನ್ನತ ಶಿಕ್ಷಣದ ಬಗ್ಗೆ ಮೂಗು ಮುರಿಯುವವರ ಮನಸ್ಸಿನಲ್ಲೂ ಹೆಚ್ಚೆಚ್ಚು ಓದಬೇಕೆಂಬ ಆಶಯವನ್ನು ಬಿತ್ತಿ ಬೆಳೆಸುವಂತೆ ಈ ಮಳಿಗೆಯನ್ನು ನಿರ್ಮಿ ಸಲಾಗಿದೆ. ಅತ್ಯಾಕರ್ಷಕ ಮಾತ್ರವಲ್ಲದೆ ಉನ್ನತ ಶಿಕ್ಷಣದ ಮಹತ್ವ ಕುರಿತಾದ ಸಮಗ್ರ ಮಾಹಿತಿ ಕಣಜವಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಒಮ್ಮೆ ಭೇಟಿ ನೀಡಲೇಬೇಕಾದ ಜ್ಞಾನ ಕೇಂದ್ರದಂತಿದೆ.

ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಿದ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಪ್ರತಿಮೆ, ಈ ಸತ್ಕಾರ್ಯಕ್ಕೆ ಹೆಗಲಾದ ಸರ್.ಎಂ. ವಿಶ್ವೇಶ್ವರಯ್ಯ, ಜ್ಞಾನ ಧಾರೆಯೊಂದಿಗೆ ವಿವಿಯನ್ನು ಮಗುವಂತೆ ಪೋಷಿಸಿದ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿಗಳು, ಎಲ್ಲಾ ವಿವಿಗಳ ಲಾಂಛನ ಗಳು ಸೇರಿದಂತೆ ಮಳಿಗೆಯ ಹೊರಭಾಗ ದಲ್ಲಿ ಉನ್ನತ ಶಿಕ್ಷಣದ ಮಹತ್ವವನ್ನು ಕಣ್ಣಿಗೆ ಕಟ್ಟುವ ಅನೇಕ ಸಂಗತಿಗಳಿವೆ. ವಿವಿಗಳ ಕುಲಾಧಿಪತಿಗಳೂ ಆದ ರಾಜ್ಯ ಪಾಲರಾದ ವಜುಭಾಯಿ ವಾಲಾ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ಭಾವಚಿತ್ರಗಳಿವೆ. `ನಹಿ ಜ್ಞಾನೇನ ಸದೃಶಂ’ ಧ್ಯೇಯ ವಾಕ್ಯವಿರುವ ಮುಖ್ಯಧ್ವಾರದಲ್ಲಿ ಮಳಿಗೆ ಪ್ರವೇಶಿಸಿದರೆ ಸರಸ್ವತಿ ವಿಗ್ರಹದೊಂದಿಗೆ ಶಿಕ್ಷಣ ಪ್ರಪಂಚ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಒಂದು ಸುತ್ತು ಹಾಕುವಷ್ಟರಲ್ಲಿ ನಿಮ್ಮ ಮನಸ್ಸಿನಲ್ಲಿ ವಿದ್ಯಾರ್ಜನೆಯ ಹಸಿವು ಹೆಚ್ಚುವುದರಲ್ಲಿ ಸಂಶಯವಿಲ್ಲ.

ಹತ್ತೊಂಬತ್ತು ವಿವಿಗಳು: `ನಹಿ ಜ್ಞಾನೇನ ಸದೃಶಂ’ ಧ್ಯೇಯವನ್ನೊಳಗೊಂಡ ಮೈಸೂರು ವಿಶ್ವವಿದ್ಯಾನಿಲಯ, `ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಧ್ಯೇಯವನ್ನೊಳ ಗೊಂಡ ಕರ್ನಾಟಕ ರಾಜ್ಯ ಮುಕ್ತ ವಿವಿ, `ಅರಿವೇ ಗುರು’ ಧ್ಯೇಯವನ್ನೊಳಗೊಂಡ ಧಾರವಾಡದ ಕರ್ನಾಟಕ ವಿವಿ, `ಜ್ಞಾನಂ ವಿಜಾನನ ಸಹಿತಂ’ ಧ್ಯೇಯವುಳ್ಳ ಬೆಂಗಳೂರು ವಿವಿ, `ಜ್ಞಾನವೇ ಬೆಳಕು’ ಧ್ಯೇಯವುಳ್ಳ ಮಂಗಳೂರು ವಿವಿ, `ಜ್ಞಾನವೇ ಅನಂತ’ ಧ್ಯೇಯವುಳ್ಳ ತುಮಕೂರು ವಿವಿ, `ವಿದ್ಯೆಯೇ ಅಮೃತ’ ಧ್ಯೇಯವುಳ್ಳ ಗುಲಬರ್ಗಾ ವಿವಿ, ಕುವೆಂಪು ವಿವಿ, ಕನ್ನಡ ವಿವಿ, ಅಕ್ಕ ಮಹಾದೇವಿ ಮಹಿಳಾ ವಿವಿ, ದಾವಣಗೆರೆ ವಿವಿ, ಕರ್ನಾಟಕ ರಾಜ್ಯ ಡಾ.ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ, ರಾಣಿ ಚೆನ್ನಮ್ಮ ವಿವಿ, ಕರ್ನಾಟಕ ಸಂಸ್ಕøತ ವಿವಿ, ಕರ್ನಾಟಕ ಜಾನಪದ ವಿವಿ, ಬೆಂಗಳೂರು ಕೇಂದ್ರ ವಿವಿ, ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಭಾಗಿಯಾಗಿವೆ.

ಪ್ರತ್ಯೇಕ ಮಳಿಗೆಗಳಲ್ಲಿ ವಿವಿಗಳ ಇತಿಹಾಸ, ಧ್ಯೇಯೋದ್ದೇಶ, ವಿಭಾಗಗಳು, ಆಡಳಿತ ಕಚೇರಿಗಳ ಪ್ರತಿರೂಪಗಳು, ಕೋರ್ಸ್‍ಗಳು, ವಿವಿಯ ಉನ್ನತಿಗೆ ಶ್ರಮಿ ಸಿದ ಮಹನೀಯರ ಭಾವಚಿತ್ರ, ಸಾಧನೆ ಗಳನ್ನು ಬಿತ್ತರಿಸುವ ಫಲಕಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ಇಲ್ಲಿ ಅನಾವರಣ ಗೊಳಿಸಲಾಗಿದೆ. ಅಲ್ಲದೆ ಎಲ್‍ಇಡಿಯಲ್ಲಿ ಡಾಕ್ಯುಮೆಂಟರಿಯಲ್ಲಿ ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಪ್ರತಿ ಮಳಿಗೆಯಲ್ಲಿರುವ ಪ್ರತಿನಿಧಿಗಳು ಕೈಪಿಡಿಯೊಂದನ್ನು ನೀಡಿ, ಅಗತ್ಯ ವಿವರಣೆ ನೀಡುತ್ತಾರೆ.

ಕೆಇಎ ಮಳಿಗೆ: ವಿಶ್ವವಿದ್ಯಾನಿಲಯಗಳ ಮಳಿಗೆಗಳ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಮಳಿಗೆಯಿದೆ. ಇದು ಎಂಡಿ, ಎಂಎಸ್, ಎಂಡಿಎಸ್, ಎಂಬಿಎ, ಎಂಸಿಎ, ಎಂ.ಟೆಕ್, ಎಂಬಿಬಿಎಸ್, ಬಿಡಿಎಸ್, ಬಿ.ಎಸ್ಸಿ(ಎಜಿ) ಸೇರಿದಂತೆ ವೃತ್ತಿಪರ ಕೋರ್ಸ್‍ಗಳಿಗೆ ಪಾರದರ್ಶಕ ಪ್ರವೇಶ ಕಲ್ಪಿಸುವ ಸರ್ಕಾ ರದ ಏಕೈಕ ಸಂಸ್ಥೆಯಾಗಿದ್ದು, ಮಳಿಗೆ ಯಲ್ಲಿ ಸಂಪೂರ್ಣ ವಿವರ ಲಭ್ಯವಿದೆ. ಅಲ್ಲದೆ ಒಂದೆಡೆ ಮಾತನಾಡಿದರೆ ಎಲ್ಲಾ ಮಳಿಗೆಗಳಿಗೂ ಕೇಳಿಸುವಂತೆ ಅತ್ಯಾ ಧುನಿಕ ಸ್ಟುಡಿಯೋ ನಿರ್ಮಿಸಲಾಗಿದೆ.

ಜ್ಞಾನ ವಿಕಾಸದ ಹಾದಿ: ಉನ್ನತ ಶಿಕ್ಷಣ ಇಲಾಖೆ ಮಳಿಗೆ ಮಧ್ಯಭಾಗದಲ್ಲಿ ಕತ್ತಲಿನಿಂದ ಬೆಳಕಿನಡೆಗೆ ಪರಿಕಲ್ಪನೆ ಕಲಾಕೃತಿಗಳ ಮೂಲಕ ಮಾನವನ ಜ್ಞಾನ ವಿಕಾಸದ ಹಾದಿಯನ್ನು ತಿಳಿಸಿರುವುದು ಅತ್ಯಾಕರ್ಷಕವಾಗಿದೆ. ಅಕ್ಷರ ಜ್ಞಾನವಿರದ ಮಾನವ ಹೇಗೆ ಹಂತಹಂತವಾಗಿ ಜ್ಞಾನ ವಂತನಾದ ಎಂಬುದನ್ನು ಕಣ್ಮುಂದೆ ಕಟ್ಟಲಾಗಿದೆ. ಕಲ್ಲುಗಳ ಮೇಲೆ, ಮರಳಿನ ಮೇಲೆ, ತಾಳೆಗರಿಗಳಲ್ಲಿ, ಸ್ಲೇಟು-ಬಳಪದಲ್ಲಿ ಹೀಗೆ ಕಾಲಾನುಸಾರ ಕಲಿತು, ಇದೀಗ ಪುಸ್ತಕದ ಜೊತೆಗೆ ಮೊಬೈಲ್, ಕಂಪ್ಯೂಟರ್, ಬಾಹ್ಯಾಕಾಶ ಶಿಕ್ಷಣ ಮಾಧ್ಯಮಗಳಲ್ಲಿ ವಿದ್ಯಾರ್ಜನೆ ಮಾಡುವ ಹಂತ ತಲುಪಿರುವುದನ್ನು ಕಲಾಕೃತಿಗಳು ಪ್ರತಿಬಿಂಬಿಸುತ್ತವೆ. `ಮಾನವ ಕುಲದ ಯಾತ್ರೆಯಲ್ಲಿ ಸಂಜ್ಞಾ ಪರ್ವ ಆರಂಭ’, `ಮೌನ ಮಾತಾಗಿ ಮಾತು ಚಿತ್ತಾರವಾಗಿ’, `ಬೆಂಕಿ ಬೆಳಕಾಗಿ ಬೆಳಕು ಅರಿವಿನ ದಾರಿ ತೆರೆದಿಟ್ಟಿತು’, `ಅರಿವಿನ ಆರಂಭಕ್ಕೆ ಗುರುಕುಲದ ಪ್ರೇರಣೆ’, `ಮರಳಿನ ಮೇಲೆ ಓಂಕಾರ, ಕಲ್ಲಿನ ಮೇಲೆ ಶ್ರೀಕಾರ, ಕನ್ನಡದ ಮೊದಲ ಹಲ್ಮಿಡಿ ಶಿಲಾ ಶಾಸನ’, `ಶಿಲೆಯಿಂದ ಓಲೆಗೆ ಸರಸ್ವತಿಯ ಪಯಣ’, `ತಾಳೆಗರಿಗಳ ಮೇಲೆ ಸಾಹಿತ್ಯದ ಮಾಲೆ’, `ಓಲೆಯಿಂದ ಶಾಲೆಗೆ ಸ್ಲೇಟು-ಬಳಪದ ಬಳಕೆ’, `ಹಲಗೆ ಬಳಪದ ಸರಿಸಿತು ಕಾಗದದ ಸಾಂಗತ್ಯ’, `ಹರಿವ ನದಿಯ ಹರಿವಲ್ಲಿ ಲೇಖನಿಯ ಸಾಮ್ರಾಜ್ಯ’, `ಬೆರಳ ತುದಿಗೇ ಅರಿವು ಬಂದೊದಗಿತು’, `ಕಂಪ್ಯೂಟರಿನ ಮಾಯಾಲೋಕ ವಿಶ್ವವನ್ನೇ ಕಣ್ಣೆದುರು ತಂದಿರಿಸಿತು’, `ವಿಶ್ವವಿದ್ಯಾನಿಲಯಗಳು ಮೈದಳೆದವು, ಜ್ಞಾನ ದಾಸೋಹದಲ್ಲಿ ಮುನ್ನಡೆದವು’, `ಎಲ್ಲವನು ಮೀರಿ ನಭದೆಡೆಗೆ ಹಾರಿ, ಹೊಸ ಅರಿವ ಹುಡುಕಾಟ ಶುರುವಾ ಯಿತು, ಕತ್ತಲೆಯ ಗರ್ಭದಲ್ಲಿ ಹುದುಗಿದ್ದ ಬೆಳಕನ್ನು ಬಗೆವ ಮನುಜನ ಕನಸು ನಿಜ ವಾಯಿತು’. ಹೀಗೆ ಕಲಾಕೃತಿಗಳ ನಡುವಿ ರುವ ಸಾಲುಗಳು ಶಿಕ್ಷಣ ಹಾದಿಯಲ್ಲಿನ ಹೆಜ್ಜೆ ಗುರುತುಗಳನ್ನು ತಿಳಿಸುವಂತಿವೆ.

ಇದು ಕಲಾ ಲೋಕವೂ ಹೌದು: ಇದು ಜ್ಞಾನ ಪ್ರಪಂಚ ಮಾತ್ರವಲ್ಲ ಕಲಾ ಲೋಕವೂ ಹೌದು. 19 ವಿವಿಗಳ ಮಳಿಗೆ ಸೇರಿದಂತೆ ಒಟ್ಟು 22 ಮಳಿಗೆಗಳು ಒಂದ ಕ್ಕಿಂತ ಒಂದು ವಿಭಿನ್ನ ಹಾಗೂ ಆಕರ್ಷಕ ವಾಗಿವೆ. ವಿವಿಗಳ ಪ್ರಧಾನ ಕಾರ್ಯ ಸ್ಥಾನಗಳಿರುವ ಜಿಲ್ಲೆಗಳ ಸಂಸ್ಕøತಿ ಬಿಂಬಿಸುವಂತೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಜಾನಪದ ವಿವಿ ಮಳಿಗೆ ಜಾನಪದದ ಪುಟ್ಟ ಪ್ರಪಂಚದಂತಿದೆ. ಸಂಗೀತ ವಿವಿ ಮಳಿಗೆಯಲ್ಲಿ ವೀಣೆ ಮಾದರಿ ಕಟ್ಟಡದ ಪ್ರತಿರೂಪ, ತುಮ ಕೂರು ವಿವಿ ಮಳಿಗೆಯಲ್ಲಿ ತೆಂಗಿನ ಮರದಿಂದ ಪುಸ್ತಕಗಳು ಮೂಡಿಬರು ವಂತೆ ರೂಪಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ಮಳಿಗೆಯಲ್ಲಿ ವಿವಿಧೋದ್ದೇಶ ಯಂತ್ರೋಪಕರಣ ಮಾದರಿ ಪ್ರದರ್ಶಿಸ ಲಾಗಿದೆ. ಹೀಗೆ ಎಲ್ಲಾ ಮಳಿಗೆಗಳೂ ವಿಶೇಷತೆಯಿಂದ ಕೂಡಿವೆ.

Translate »