ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧ್ಯಾಪಕರ  ನೇಮಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಅನಾರೋಗ್ಯ
ಮೈಸೂರು

ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧ್ಯಾಪಕರ ನೇಮಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಅನಾರೋಗ್ಯ

December 2, 2018

ಮೈಸೂರು: ವಿವಿ ಗಳಿಗೆ ಅಧ್ಯಾಪಕರನ್ನು ನೇಮಕ ಮಾಡಬೇ ಕೆಂದು ತೀರ್ಮಾನಿಸಿದ್ದು, ಈ ವೇಳೆ ಕಠಿಣ ತೀರ್ಮಾನ ಕೈಗೊಳ್ಳಬೇಕಿದೆ. ಒಂದು ವೇಳೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧ್ಯಾಪಕರನ್ನು ನೇಮಿಸಿದರೆ ಶಿಕ್ಷಣ ಕ್ಷೇತ್ರ ಅನಾರೋಗ್ಯಕ್ಕೆ ತುತ್ತಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಳವಳ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ, ಮೈವಿವಿ ಹಿರಿಯ ವಿದ್ಯಾರ್ಥಿ ಗಳ ಸಂಘ ಹಾಗೂ ಡಾ..ಎಸ್.ಆರ್. ನಿರಂ ಜನ ಅಭಿನಂದನಾ ಸಮಿತಿ ವತಿಯಿಂದ ಶನಿ ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೀವ ವಿಜ್ಞಾನ ಸಂಶೋಧನಾ ಕ್ಷೇತ್ರದ ಕೊಡುಗೆಗಾಗಿ ರಾಷ್ಟ್ರೀಯ ವಿಜ್ಞಾನ ಅಕಾ ಡೆಮಿ ಫೆಲೋ ಆಗಿ ನೇಮಕಗೊಂಡಿರುವ ಗುಲ್ಬರ್ಗಾ ವಿವಿ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅವರನ್ನು ಅಭಿನಂದಿಸಿ ಮಾತ ನಾಡಿದ ಅವರು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧ್ಯಾಪಕರ ನೇಮಕ ಮಾಡಿದರೆ ಶಿಕ್ಷಣ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಇದ ರಿಂದ ಆರೋಗ್ಯಕರ ಶಿಕ್ಷಣ ನೀಡಲು ಸಾಧ್ಯವಿಲ್ಲ. ಹಾಗಾಗಿ ಮೆರಿಟ್ ಆಧಾರದ ಮೇಲೆ ಉತ್ತಮ ಅಧ್ಯಾಪಕರನ್ನು ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.

ಇಂದು ವಿಜ್ಞಾನ ಕ್ಷೇತ್ರದಲ್ಲಿ ಹಲವು ಸಂಶೋ ಧನೆಗಳು ನಡೆಯುತ್ತಿದ್ದು, ಪ್ರಸ್ತುತ ವಿದ್ಯ ಮಾನಕ್ಕೆ ಅನುಗುಣವಾದ, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಸಂಶೋಧನೆಗಳು ನಡೆಯಬೇಕು. ನಾವು ಮಾಡಿದ ಸಂಶೋಧನೆಗಳು ಅಭಿವೃದ್ಧಿಗೆ ಪೂರಕವಾಗಿರಬೇಕು. ಎಲ್ಲರನ್ನು ತಲುಪು ವಂತಾಗಬೇಕು. ಅಂತಹ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಂಶೋಧಕರಿಗೆ ಸಲಹೆ ನೀಡಿದರು.

ಆದರೆ, ಸಂಶೋಧನೆಗಳನ್ನು ಜನರಿಗೆ ತಲುಪಿಸದೆ ಬೀರು-ಶೋಕೇಸ್‍ಗಳಲ್ಲಿ ಅಡಗಿ ಸಿಟ್ಟಿದ್ದಾರೆ. ಹಾಗಾಗದೆ, ಸಂಶೋಧನಾ ಪ್ರಬಂಧಗಳನ್ನು ಗ್ರಂಥಾಲಯಗಳಲ್ಲಿರಿಸಿ ಇಂದಿನ ಯುವ ಸಮೂಹ ಓದುವಂತೆ ಮಾಡುವ ಮೂಲಕ ಕಾರ್ಯಗತಗೊಳಿಸಬೇಕು. ಜತೆಗೆ ವಿವಿಗಳು ಅತ್ಯುತ್ತಮ ಗ್ರಂಥಾಲಯ ಗಳನ್ನು ನಿರ್ಮಿಸಿ, ಪ್ರತಿಯೊಬ್ಬ ವಿದ್ಯಾರ್ಥಿ ಕಡ್ಡಾಯವಾಗಿ ಗ್ರಂಥಾಲಯದಲ್ಲಿ ಕುಳಿತು ಅಧ್ಯಯನ ಮಾಡುವಂತೆ ಮಾಡಬೇಕಿದೆ. ಪಠ್ಯಕ್ರಮದ ವೇಳೆಯಲ್ಲೇ 1 ಗಂಟೆ ಗ್ರ್ರಂಥಾ ಲಯದ ಸಮಯವನ್ನು ನಿಗದಿ ಮಾಡಿ ದರೆ ಒಳ್ಳೆಯದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ರೈತರು ತಮ್ಮ ಜಮೀನನ್ನು ಮಾರಾಟ ಮಾಡಿ, ಬಂದ ಹಣ ವನ್ನು ಉಳಿತಾಯ ಮಾಡದೆ, ಲಾಭದಾ ಯಕ ಉದ್ದೇಶಕ್ಕೂ ಬಳಸುತ್ತಿಲ್ಲ. ಆದರೆ, ತಮ್ಮ ಮಕ್ಕಳು ಉನ್ನತ ಉದ್ಯೋಗ ಪಡೆಯ ಬೇಕೆಂದು ವಿದ್ಯಾವಂತರನ್ನಾಗಿ ಮಾಡುತ್ತಿ ದ್ದಾರೆ. ಆದರೂ ಕೆಲಸ ಸಿಗದೆ ನಿರುದ್ಯೋಗಿ ಗಳಾಗುತ್ತಿದ್ದಾರೆ. ಇವೆಲ್ಲವನ್ನು ಮನಗಂಡು ಯಾವುದೇ ಕಾರಣಕ್ಕೂ ನಿರುದ್ಯೋಗಿಗಳಾಗ ಬಾರದು. ಪ್ರತಿಯೊಬ್ಬರೂ ಉದ್ಯೋಗವಂತ ರಾಗಬೇಕೆಂದು ಗುಣಾತ್ಮಕ, ಮೌಲ್ಯಾಧಾರಿತ, ಉದ್ಯೋಗಾಧಾರಿತ ಶಿಕ್ಷಣ ನೀಡಬೇಕೆಂದು ಆಲೋಚಿಸಿದ್ದೇನೆ. ಅದಕ್ಕಾಗಿ 2 ಬಾರಿ ಕುಲ ಪತಿಗಳೊಂದಿಗೆ ಸಭೆ ನಡೆಸಿ, ವಿವಿಗಳು 5 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಸಲಹೆ ನೀಡಿದ್ದೇನೆ. ಇದರಿಂದ ಗ್ರಾಮೀಣ ಭಾಗದ ಜನರ ಶೈಕ್ಷಣಿಕ ಮಟ್ಟ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊದಲು ಅಧ್ಯಾಪಕರಿಗೆ ತರಬೇತಿ ಅವಶ್ಯ: ವಿದ್ಯಾರ್ಥಿಗಳು ಉತ್ತಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಅವರಿಗೆ ಕೌಶಲ್ಯ ತರಬೇತಿ ನೀಡಬೇಕೆಂಬ ಯೋಜನೆ ಹಾಕಿಕೊಂಡಿ ದ್ದೇನೆ. ಅದಕ್ಕೂ ಮೊದಲು ಅಧ್ಯಾಪಕರಿಗೆ ಕೌಶಲ್ಯ ತರಬೇತಿ ನೀಡುವ ಅವಶ್ಯಕತೆ ಯಿದೆ. ಏಕೆಂದರೆ, ಈಗ ಅಧ್ಯಾಪಕರಿಗಿಂತ ವಿದ್ಯಾರ್ಥಿಗಳೇ ಹೆಚ್ಚು ವಿಷಯ ತಿಳಿದು ಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಗೊತ್ತಿರು ವಷ್ಟು ವಿಷಯಗಳು ಅಧ್ಯಾಪಕರಿಗೇ ಗೊತ್ತಿಲ್ಲ. ಅಂತಹ ಪರಿಸ್ಥಿತಿ ಶಿಕ್ಷಣ ಕ್ಷೇತ್ರದಲ್ಲಿದೆ ಎಂದರು.

ಗೌರವದಿಂದ ಮಾತನಾಡಿಸುವುದಿಲ್ಲ: ಕೆಲವರು ಕುಲಪತಿಗಳಾದರೂ ಅವ ರನ್ನು ಗೌರವದಿಂದ ಮಾತನಾಡಿಸು ವವರು ಕಡಿಮೆ. ಆದರೆ, ಕೆಲವರು ಕುಲಪತಿ ಸ್ಥಾನದಿಂದ ನಿವೃತ್ತರಾದರೂ ಅತ್ಯಂತ ಗೌರವದಿಂದ ಕಾಣುತ್ತಾರೆ. ಕಾರಣ ಅವರ ಪ್ರಾಮಾಣಿಕ ಸೇವೆ. ಇಂತ ವರ ಸಾಲಿಗೆ ನಿರಂಜನ್ ಸೇರುತ್ತಾರೆ ಎಂದರು.

ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಗುಲ್ಬರ್ಗ ವಿವಿಯ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅವರು ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಫಲೋ ಷಿಪ್ ಪಡೆದಿರುವುದು ಮೈವಿವಿ ಘನತೆ ಹೆಚ್ಚಿಸಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ನಮ್ಮ ಸ್ಥಳೀಯರಾಗಿದ್ದು, ಮೈಸೂರು ವಿವಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ ಎಂದು ಭಾವಿಸಿದ್ದೇನೆ. ಹಿಂದೆ ಇದ್ದ ಉನ್ನತ ಶಿಕ್ಷಣ ಸಚಿವರು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಪ್ರೊ.ಎಸ್. ಆರ್. ನಿರಂಜನ ಮತ್ತು ದಂಪತಿಯನ್ನು ಅಭಿ ನಂದಿಸಲಾಯಿತು. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಹೆಚ್.ಎ. ರಂಗ ನಾಥ್, ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಡಾ.ಎಸ್.ಆರ್. ನಿರಂಜನ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ, ಕಾರ್ಯದರ್ಶಿ ಪ್ರೊ.ಎನ್.ಕೆ. ಲೋಕ ನಾಥ್ ಮತ್ತಿತರರು ಉಪಸ್ಥಿತರಿದ್ದರು.

Translate »