ಓಪನ್ ಸ್ಟ್ರೀಟ್ ಫೆಸ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ
ಮೈಸೂರು, ಮೈಸೂರು ದಸರಾ

ಓಪನ್ ಸ್ಟ್ರೀಟ್ ಫೆಸ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ

October 18, 2018

ಮೈಸೂರು: ಅಕ್ಟೋಬರ್ 13 ರಂದು ನಡೆದ ಓಪನ್ ಸ್ಟ್ರೀಟ್ ಫೆಸ್ಟ್‌ನಲ್ಲಿ ಪುಂಡರಿಂದ ಲೈಂಗಿಕ ದೌರ್ಜನ್ಯ ಕ್ಕೊಳಗಾದ ಯುವತಿಯರು, ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಾರ್ಯಕ್ರಮ ಆಯೋಜಕರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಪೊಲೀಸರು ಮಾತ್ರ ಅಂತಹ ಘಟನೆ ನಡೆದ ಬಗ್ಗೆ ಸಿಸಿ ಟಿವಿ ಕ್ಯಾಮರಾಗಳ ಫುಟೇಜ್‍ನಲ್ಲಿ ಪುರಾವೆ ಇಲ್ಲ ಎನ್ನುತ್ತಿದ್ದಾರೆ.

ಲೈಂಗಿಕ ಕಿರುಕುಳ ಅನುಭವಿಸಿದ ಹಲವು ಮಹಿಳೆಯರು ಹಾಗೂ ಯುವತಿಯರು ‘ಮೈಸೂರು ಮಿತ್ರ’ ಕಚೇರಿಗೂ ದೂರವಾಣಿ ಕರೆ ಮಾಡಿ ತಮಗಾದ ಹಿಂಸೆ, ಅವಮಾನ ಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಅಂತಹ ಘಟನೆಗಳು ಕಣ್ಣೆದುರೇ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದರೇ ಹೊರತು ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ.

ಪುಂಡ-ಪೋಕರಿಗಳು ಎಗ್ಗಿಲ್ಲದೇ ಯುವತಿ ಯರನ್ನು ಮುಟ್ಟುವುದು, ರೇಗಿಸುವ ಕೃತ್ಯಗಳನ್ನು ನಿರ್ಭಯವಾಗಿ ನಡೆಸಿದರು. ಸ್ಟ್ರೀಟ್ ಫೆಸ್ಟ್ ನೋಡಲು ಬಂದಿದ್ದ ವಿದೇಶಿ ಮಹಿಳೆಗೂ ಇದೇ ಕೆಟ್ಟ ಅನುಭವವಾಯಿತೆಂದು ಅವರು ಗಂಭೀರ ಆರೋಪ ಮಾಡಿದರು. ಆದರೆ ಈ ಬಗ್ಗೆ ಸ್ಪಷ್ಟೀ ಕರಣ ನೀಡಿರುವ ನಗರ ಪೊಲೀಸ್ ಕಮೀಷ್ನರ್, ಕಾರ್ಯಕ್ರಮಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಸಿಸಿ ಕ್ಯಾಮರಾಗಳಲ್ಲೂ ಘಟನೆ ಬಗ್ಗೆ ಸುಳಿವು ಸಿಕ್ಕಿಲ್ಲ. ಆ ಬಗ್ಗೆ ಯಾರಾದರೂ ದೂರು ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಏಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದಿಲ್ಲ, ತನಿಖೆ ನಡೆಸುವುದಿಲ್ಲ. ಯಾರಾದರೂ ದೂರು ನೀಡಿದರೆ ಮಾತ್ರವೇ ಪ್ರಕರಣ ದಾಖಲಿ ಸುವರೇ? ಎಂದು ದೂರವಾಣಿ ಕರೆ ಮಾಡಿದ ಮಹಿಳೆಯರು ಪ್ರಶ್ನಿಸಿದ್ದಾರೆ

ಪೊಲೀಸರದ್ದು ತಪ್ಪು ಕಾರ್ಯತಂತ್ರವೇ?

ಮೈಸೂರು: ಓಪನ್ ಸ್ಟ್ರೀಟ್ ಫೆಸ್ಟ್ ಕಾರ್ಯಕ್ರಮ ಆಯೋಜನೆ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರು ಸರಿಯಾದ ಕಾರ್ಯತಂತ್ರ ರೂಪಿಸಿಲ್ಲ ಎಂದು ಹಲವು ಮಹಿಳೆಯರು ದೂರಿದ್ದಾರೆ. ಮೊದಲನೆಯದಾಗಿ ಸೂಕ್ತ ರೀತಿಯಲ್ಲಿ ವಿದ್ಯುದ್ದೀಪಗಳ ವ್ಯವಸ್ಥೆ ಮಾಡಿರಲಿಲ್ಲ. ಪುಂಡರ ಹಾವಳಿಯಿದ್ದ ಕಡೆ ಪೊಲೀಸರು, ಗಮನ ಹರಿಸಲಿಲ್ಲ. ಎರಡನೆಯದಾಗಿ ರಾತ್ರಿ 8 ಗಂಟೆಯಾದ ಮೇಲೆ ಪೊಲೀಸರು ಸ್ಟ್ರೀಟ್ ಫೆಸ್ಟ್‍ಗೆ ಪ್ರವೇಶ ಸ್ಥಗಿತಗೊಳಿಸಬೇಕಾಗಿತ್ತು. ಮೂರನೆಯದಾಗಿ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸದ ಕಾರಣ ಜನರು ಸ್ಥಳದಲ್ಲಿ ತಿರುಗಾಡುವುದನ್ನು ಮುಂದುವರಿಸಿದ್ದರು. ಫೆಸ್ಟ್ ಮುಗಿಯುತ್ತಿದ್ದಂತೆಯೇ ಪೊಲೀಸರು ಲೈಟ್‍ಗಳನ್ನು ಆಫ್ ಮಾಡಲು ಸೂಚನೆ ನೀಡಿದ ನಂತರವಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಸಂತ್ರಸ್ತರು ದೂರು ನೀಡಲು ಸ್ಥಳದಲ್ಲಿ ಸಂಬಂಧಿಸಿದವರು ಲಭ್ಯವಿರಲಿಲ್ಲ. ಪೊಲೀಸರು ಸರಿಯಾಗಿ ಪರಿಸ್ಥಿತಿ ನಿಯಂತ್ರಿಸದಿದ್ದ ಮೇಲೆ ಯುವ ದಸರಾ ನಡೆಯುವ ಮಹಾರಾಜ ಕಾಲೇಜು ಮೈದಾನದ ಬಳಿಯೇ ಓಪನ್ ಸ್ಟ್ರೀಟ್ ಫೆಸ್ಟ್ ಅನ್ನು ಏಕೆ ಏರ್ಪಡಿಸಬೇಕಿತ್ತು? ಎಂದು ಸಂತ್ರಸ್ತ ಮಹಿಳೆಯರು ಪ್ರಶ್ನಿಸಿದ್ದಾರೆ.

Translate »