ಜಂಬೂಸವಾರಿ ಪುಷ್ಪಾರ್ಚನೆ ಕೊನೆ ತಾಲೀಮು 3 ಗಂಟೆ ತಡ
ಮೈಸೂರು, ಮೈಸೂರು ದಸರಾ

ಜಂಬೂಸವಾರಿ ಪುಷ್ಪಾರ್ಚನೆ ಕೊನೆ ತಾಲೀಮು 3 ಗಂಟೆ ತಡ

October 18, 2018

ಮೈಸೂರು: ಜಂಬೂ ಸವಾರಿಯ ಪುಷ್ಪಾರ್ಚನೆಯ ಅಂತಿಮ ತಾಲೀಮು ಬುಧವಾರ ಅರಮನೆಯ ಆವರಣದಲ್ಲಿ 3 ಗಂಟೆ ತಡವಾಗಿ ನಡೆಯಿತು.

ಅಂಬಾರಿ ಆನೆ ಅರ್ಜುನನಿಗೆ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪುಷ್ಪಾರ್ಚನೆ ಮಾಡಿದರು. ಎಂದಿನಂತೆ ಜಂಬೂಸವಾರಿಯ ಮೆರವಣಿಗೆಯಲ್ಲಿ ಬಲರಾಮ ಮುಂಚೂಣಿಯಲ್ಲಿ ಸಾಗಿದನು. ನಂತರ ಅಭಿಮನ್ಯು ಹಿಂದೆ ಗಜಪಡೆ ಇತರೆ ಸದಸ್ಯರು ಹೆಜ್ಜೆ ಹಾಕುತ್ತಿದ್ದಂತೆ ಪೊಲೀಸ್ ತುಕಡಿಗಳು ಶಿಸ್ತಿನಿಂದ ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದವು.

ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವಾದನ ತಂಡದ ಸದಸ್ಯರು ರಾಷ್ಟ್ರಗೀತೆ ನುಡಿಸಿದರು. ಫಿರಂಗಿದಳದ 30 ಸಿಬ್ಬಂದಿ 7 ಫಿರಂಗಿ ಬಳಸಿ 3 ಸುತ್ತಿನಲ್ಲಿ 21 ಬಾರಿ ಕುಶಾಲ ತೋಪು ಸಿಡಿಸಿದರು. ಅಶ್ವಾರೋಹಿ ದಳದ 2 ತುಕಡಿ ಗಳು ಹಾಗೂ ಪೊಲೀಸ್ ತುಕಡಿಗಳು ರಾಷ್ಟ್ರಗೀತೆಗೆ ಗೌರವ ವಂದನೆ ಸಲ್ಲಿಸಿದವು.

3 ಗಂಟೆ ತಡ: ಕೊನೆಯ ತಾಲೀಮು ಬೆಳಿಗ್ಗೆ 8 ಗಂಟೆಗೆ ನಡೆಯಬೇಕಾಗಿತ್ತು. ಇದಕ್ಕಾಗಿ ಅರ್ಜುನ ನೇತೃತ್ವದ ಎಲ್ಲಾ ಆನೆಗಳನ್ನು ಅರಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪಾಲ್ಗೊಳ್ಳಬೇಕಾಗಿತ್ತು. ಆದರೆ ಮೈಸೂರಿನಲ್ಲಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿಗೆ ಆಯುಕ್ತರು ತೆರಳಿದ್ದ ಕಾರಣ ತಾಲೀಮು ವಿಳಂಬವಾಯಿತು. ಬಿಸಿಲಿನಲ್ಲಿ ಕಾದು ನಿಂತಿದ್ದ ಆನೆಗಳು ಸುಸ್ತಾಗಿ ನೆರಳಿ ನತ್ತ ಧಾವಿಸಲು ತವಕಿಸುತ್ತಿದ್ದವು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಆನೆಗಳನ್ನು ವರಾಹ ಗೇಟ್ ಬಳಿಯಿರುವ ಮರದ ನೆರಳಿನತ್ತ ಕರೆದೊಯ್ದರು. ನಂತರ 10.45ಕ್ಕೆ ಪೊಲೀಸ್ ಆಯುಕ್ತರು ಬಂದೊಡನೆ ತಾಲೀಮು ಆರಂಭವಾಯಿತು.

Translate »