ಆಪರೇಷನ್ ಹದಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹದ
ಮೈಸೂರು

ಆಪರೇಷನ್ ಹದಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹದ

January 19, 2019

ಬೆಂಗಳೂರು: ಸರ್ಕಾರದ ಸ್ಥಿರತೆ ಬಗೆಗಿನ ಮಾಧ್ಯಮ ವರದಿಗಳನ್ನೇ ಬಂಡವಾಳ ಮಾಡಿ ಕೊಂಡು ಕೆಲಸ ಮಾಡದೇ ನಿದ್ರೆಗೆ ಜಾರಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ಭದ್ರಗೊಳಿಸಲು ಉಭಯ ಪಕ್ಷದ ನಾಯಕರು ಭಾರೀ ತಂತ್ರ ರೂಪಿಸಿದ್ದಾರೆ.

ಆಪರೇಷನ್ ಕಮಲ ಹತ್ತಿಕ್ಕಲು ನಗರ ದಲ್ಲೇ ಬಿಡಾರ ಹೂಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ತಮ್ಮ ಪಕ್ಷದ ಮುಖಂಡರ ಜೊತೆ ಸಮಾಲೋಚನೆ ನಂತರ ಬಿಜೆಪಿ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆ ಪಕ್ಷದ ಮುಖಂಡರು ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅದರಲ್ಲೂ 40 ದಿನಗಳಿಗೊಮ್ಮೆ ಸರ್ಕಾರ ಬೀಳಿಸುವ ಯತ್ನ ಮಾಡುತ್ತಾ ರಾಷ್ಟ್ರಾದ್ಯಂತ ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ.

ಇಂತಹ ನಡೆಯಿಂದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೆಲವು ಹಿರಿಯ ಅಧಿಕಾರಿಗಳು ದೈನಂದಿನ ಆಡಳಿತ ನಡೆಸಲೂ ಸಹಕಾರ ನೀಡುತ್ತಿರಲಿಲ್ಲ. ಸಚಿವರ ಮಾತಿರಲಿ ಮುಖ್ಯಮಂತ್ರಿಯವರ ಮಾತನ್ನೇ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು, ಕೆಲವು ಪ್ರಧಾನ ಕಾರ್ಯದರ್ಶಿಗಳು ಸುದೀರ್ಘ ರಜೆ ಮೇಲೆಯೇ ತೆರಳಿದ್ದಾರೆ. ಸರ್ಕಾರ ಬೀಳುವ ಸಂದರ್ಭದಲ್ಲಿ ಪ್ರಮುಖ ಕಡತಗಳಿಗೆ ಸಹಿ ಹಾಕಿಸಿ ಸಿಲುಕುವುದು ಏತಕ್ಕೆ ಎನ್ನುವ ಭಾವನೆ ಕೆಲವರಲ್ಲಿದ್ದರೆ, ಮತ್ತೆ ಕೆಲವರು ಬಿಜೆಪಿಯ ಹಿತೈಷಿಗಳಾಗಿದ್ದಾರೆ. ಅಂತಹವರು ಯಾವುದೇ ಕಾರ್ಯನಿರ್ವಹಿಸದೆ ರಜೆ, ಇಲ್ಲವೆ ಬೇರೆ ಸಬೂಬು ಹೇಳಿಕೊಂಡು ತಿರುಗುತ್ತಿದ್ದಾರೆ.

ಹಿರಿಯ ಅಧಿಕಾರಿಗಳ ಈ ಧೋರಣೆಯಿಂದ ಅಭಿವೃದ್ಧಿ ಸೇರಿದಂತೆ ಪ್ರಮುಖ ಕಡತಗಳು ವಿಲೇವಾರಿಯಾಗದೇ ಸಚಿವಾಲಯದಲ್ಲೇ ಕೊಳೆಯುತ್ತಿವೆ. ಇದೇ ಸ್ಥಿತಿ ಮುಂದುವರಿದರೆ, ಸರ್ಕಾರ ದಾರಿ ತಪ್ಪುತ್ತದೆ ಎಂಬ ವಿಚಾರ ಉಭಯ ಪಕ್ಷಗಳ ನಾಯಕರ ನಡುವೆ ಚರ್ಚೆಯಾಗಿದೆ. ಇದಕ್ಕೆ ಕೊನೆ ಹಾಡಲು ಆಪರೇಷನ್ ಹದ (ಹಸ್ತ ಮತ್ತು ದಳ) ಎಂಬ ಹೆಸರಿನಲ್ಲಿ ಒಂದೇ ಮಾರ್ಗ ಎಂಬ ನಿರ್ಧಾರಕ್ಕೆ ಬಂದಿದ್ದು, ಮೊದಲ ಕಂತಿನಲ್ಲಿ ಬಿಜೆಪಿಯ ನಾಲ್ಕರಿಂದ ಐವರು ಶಾಸಕರನ್ನು ಸೆಳೆದು ಸಚಿವ ಸ್ಥಾನ ಕೊಡುವುದು ತಂತ್ರವಾಗಿದೆ. ಲೋಕಸಭಾ ಚುನಾವಣೆ ನಂತರ ಮತ್ತೆ ಐವರು ಬಿಜೆಪಿ ಶಾಸಕರನ್ನು ಸೆಳೆಯಲು ನಿರ್ಧರಿಸಲಾಗಿದೆ.

ಯಾವ ಶಾಸಕರನ್ನು ಗಾಳಕ್ಕೆ ಕೆಡವಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಪೂರ್ಣ ಅಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಕಾಂಗ್ರೆಸ್ ಬದ್ಧವಾಗಿರುತ್ತದೆ ಎಂದು ವೇಣುಗೋಪಾಲ್ ಹಾಗೂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ದೆಹಲಿಯಿಂದ ಬಿಜೆಪಿ ಸದಸ್ಯರು ಹಿಂತಿರುಗು ತ್ತಿದ್ದಂತೆ ಆಪರೇಷನ್ ಹದ ಮಾಡಿ, ರಾಜೀನಾಮೆ ನೀಡಿದವರಿಗೆ ಸಚಿವ ಸ್ಥಾನ ಕಲ್ಪಿಸುವುದು ಮತ್ತು ಉಪಚುನಾವಣೆಯಲ್ಲಿ ಜಂಟಿಯಾಗಿ ಆ ಕ್ಷೇತ್ರದಲ್ಲಿ ಹೋರಾಟ ಮಾಡಿ, ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ.

ಬಹುತೇಕ ರಮೇಶ್ ಜಾರಕಿಹೊಳಿ ಸೇರಿದಂತೆ ಮೂರರಿಂದ ನಾಲ್ಕು ಕಾಂಗ್ರೆಸ್ ಶಾಸಕರು ನಮ್ಮ ಹಿಡಿತದಲ್ಲಿಲ್ಲ ಎಂದಿರುವ ವೇಣುಗೋಪಾಲ್, ಅಂತಹವರಿಗೆ ಶಿಸ್ತು ಕ್ರಮದ ಪಾಠ ಕಲಿಸೋಣ, ಇದೇ ವೇಳೆ ನಾವು ಬಿಜೆಪಿಯವರಿಗೆ ನಮ್ಮ ರಾಜಕೀಯ ಶಕ್ತಿಯನ್ನು ತೋರಿಸೋಣ ಎಂದಿದ್ದಾರೆ. ನಿಮಗೆ ಆಪ್ತರಿರುವ ಬಿಜೆಪಿ ಸದಸ್ಯರನ್ನು ಸೆಳೆದುಕೊಳ್ಳಲು ಇಂದಿನಿಂದಲೇ ಪ್ರಯತ್ನ ಮಾಡಿ, ಮುಖ್ಯಮಂತ್ರಿಯವರು ಒಂದು ಕಡೆ ಮಾಡಿದರೆ, ಮತ್ತೊಂದೆಡೆ ನಮ್ಮ ಪಕ್ಷದ ಮುಖಂಡರು ಇದರಲ್ಲಿ ತೊಡಗಿಸಿಕೊಳ್ಳಿ ಎಂದು ವೇಣುಗೋಪಾಲ್ ಸಭೆಯಲ್ಲಿದ್ದ ನಾಯಕರಿಗೆ ತಿಳಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಅಶೋಕ ಹೊಟೇಲ್‍ನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲೂ ಹಿರಿಯ ಸಚಿವರು ಮತ್ತು ನಾಯಕರುಗಳು ವೇಣುಗೋಪಾಲ್ ಅವರಿಗೆ ಇದನ್ನೇ ಸಲಹೆ ಮಾಡಿದ್ದರು.

Translate »