ಹೆಚ್‍ಐವಿ ಸೋಂಕಿತರಿಗೆ ನೆವಿರಿಪಿನ್  ಮಾತ್ರೆ ಪೂರೈಕೆ ಸ್ಥಗಿತಕ್ಕೆ ಆಕ್ಷೇಪ
ಮೈಸೂರು

ಹೆಚ್‍ಐವಿ ಸೋಂಕಿತರಿಗೆ ನೆವಿರಿಪಿನ್  ಮಾತ್ರೆ ಪೂರೈಕೆ ಸ್ಥಗಿತಕ್ಕೆ ಆಕ್ಷೇಪ

September 19, 2018

ಮೈಸೂರು:  ಹೆಚ್‍ಐವಿ ಸೋಂಕಿತ ಗರ್ಭೀಣಿಯರಿಗೆ ಜನಿಸಿದ ಮಕ್ಕಳು ಹಾಗೂ ಇನ್ನಿತರ ಸೋಂಕಿತರಿಗೆ ಜೀವರಕ್ಷಕ ನೆವಿರಿಪಿನ್ ಮಾತ್ರೆಗಳನ್ನು ರಾಜ್ಯ ಸರ್ಕಾರ ಆಗಸ್ಟ್ ತಿಂಗಳಲ್ಲಿಯೇ ಸ್ಥಗಿತಗೊಳಿಸಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಆನಂದ ಜ್ಯೋತಿ ನೆಟ್‍ವರ್ಕ್ ಮೈಸೂರು ಫಾರ್ ಪೀಪಲ್ ಲೀವಿಂಗ್ ವಿತ್ ಎಚ್‍ಐವಿ ಅಂಡ್ ಏಡ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಚಂದ್ರಶೇಖರ್ ದೂರಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್‍ಐವಿ ಸೋಂಕಿತ ಪೋಷಕರಿಂದ ಜನಿಸಿದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಸೋಂಕಿನಿಂದ ನರಳುವಂತಾಗುತ್ತಿದೆ. ರೋಗ ಹರಡ ದಂತೆ ತಡೆಯಬಲ್ಲ ಚಿಕಿತ್ಸೆ ಲಭ್ಯವಿದ್ದರೂ ರಾಜ್ಯದಲ್ಲಿ ಈ ಔಷಧ ಸಮರ್ಪಕವಾಗಿ ಪೂರೈಕೆಯಾಗದೆ ಸ್ಥಗಿತಗೊಳಿಸಿರುವು ದರಿಂದ ಸೋಂಕು ಪೀಡಿತ ಮಕ್ಕಳು ಜೀವಭಯ ಎದುರಿಸುತ್ತಿವೆ. ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿಯೇ ನೆವಿರಿಪಿನ್ ಔಷಧಿ ಹಾಗೂ ಮಾತ್ರೆಗಳ ಸರಬರಾಜು ಸ್ಥಗಿತಗೊಂಡಿದೆ. ಯಾವುದೇ ಎಆರ್‍ಟಿ ಕೇಂದ್ರಗಳಲ್ಲಿಯೂ ಈ ಔಷಧಿ ಲಭ್ಯವಿಲ್ಲ. ಇದರಿಂದಾಗಿ ಹಲವು ತಾಯಂದಿರಲ್ಲಿ ಆತಂಕ ಮನೆ ಮಾಡಿದೆ. ಔಷಧಿ ಅಲಭ್ಯವಾಗಿ 20 ದಿನಗಳಾದರೂ ಕೆಎಸ್ ಎಪಿಎಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಸಂಸ್ಥೆಯೂ ಈ ಸಂಬಂಧ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.

ಕೂಡಲೇ ಸರ್ಕಾರ ಹೆಚ್‍ಐವಿ ಪೀಡಿತರಿಗೆ ಅಗತ್ಯವಾಗಿರುವ ನೆವಿರಿಪಿನ್ ಮಾತ್ರೆ ಮತ್ತು ಔಷಧಿಯ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಹೆಚ್‍ಐವಿ ಗಂಭೀರತೆಯನ್ನು ಅಧಿಕಾರಿಗಳು ಅರಿತು ಕೊಳ್ಳಬೇಕು. ರೋಗಿಗಳು ಹಾಗೂ ಸೋಂಕು ಪೀಡಿತ ಮಕ್ಕಳ ಹಿತ ಕಾಯುವ ನಿಟ್ಟಿನಲ್ಲಿ ಕೂಡಲೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಔಷಧಿಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು. 2 ತಿಂಗಳಿಂದ ಎಚ್‍ಐವಿ ಬಾಧಿತರು ತೆಗೆದುಕೊಳ್ಳುತ್ತಿ ರುವ ನೆವಿರಿಪಿನ್ ಮಾತ್ರೆಗಳು ಕೂಡ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಎಚ್‍ಐವಿ ಬಾಧಿತರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿವೆ.
ಈ ಸಮಸ್ಯೆಯನ್ನು ಕೂಡಲೇ ಪರಿ ಹರಿಸದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಆನಂದ ಜ್ಯೋತಿ ಸಂಸ್ಥೆಯ ಕಾಂತರಾಜು, ಸೋಮಶೇಖರ್, ವೆಂಕಟೇಶ್, ಶೋಭಾ, ಲಕ್ಷ್ಮೀ ಇದ್ದರು.

Translate »