6 ದಿನದಲ್ಲಿ ಕೆಆರ್‌ಎಸ್‌ಗೆ 2 ಲಕ್ಷ ಪ್ರವಾಸಿಗರ ಭೇಟಿ
ಮೈಸೂರು

6 ದಿನದಲ್ಲಿ ಕೆಆರ್‌ಎಸ್‌ಗೆ 2 ಲಕ್ಷ ಪ್ರವಾಸಿಗರ ಭೇಟಿ

October 23, 2018

ಮೈಸೂರು:  3ಡಿ ಮ್ಯಾಪಿಂಗ್ ಮೂಲಕ ವಿದ್ಯುದ್ದೀಪಾಲಂಕಾರ ಮಾಡಿರುವುದರಿಂದ ಆಕರ್ಷಕವಾಗಿ ಕಂಗೊಳಿಸುತ್ತಿರುವ ಕೃಷ್ಣರಾಜಸಾಗರ (ಕೆಆರ್‌ಎಸ್‌) ಬೃಂದಾವನಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಕಳೆದ 6 ದಿನಗಳಲ್ಲಿ 2 ಲಕ್ಷ ಮಂದಿ ಕೆಆರ್‌ಎಸ್‌ಗೆ ಭೇಟಿ ನೀಡಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮ (ಅಓಓ)ದ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 10 ರಿಂದ 19ರವರೆಗೆ ಮೈಸೂರಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮಗಳು ಇದ್ಧ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ವಿದ್ಯುದೀಪಾಲಂಕಾರ, 3 ಡಿ ಮ್ಯಾಪಿಂಗ್ ಮತ್ತು ಧ್ವನಿ ಬೆಳಕು ವಿಶೇಷ ಕಾರ್ಯಕ್ರಮ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಿಂದ 21ರವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡಿ ಸೌಂದರ್ಯ ವೀಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 24ರವರೆಗೂ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 9.30 ಗಂಟೆವರೆಗೂ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು ವಿದ್ಯುದ್ದೀಪಾಲಂಕಾರ ವಿಶೇಷ ಸೌಲಭ್ಯವಿರುತ್ತದೆ. ತದನಂತರ ವಾರದ ದಿನಗಳಲ್ಲಿ ರಾತ್ರಿ 7 ರಿಂದ 8 ಗಂಟೆಯವರೆಗೆ ಮತ್ತು ಪ್ರತಿ ಶನಿವಾರ ಮತ್ತು ಭಾನುವಾರಗಳಂದು ರಾತ್ರಿ 7 ರಿಂದ 9ಗಂಟೆವರೆಗೆ ಬೃಂದಾವನದ ಸಂಗೀತ ಕಾರಂಜಿ ಕಾರ್ಯನಿರ್ವಹಿಸಲಿದೆ.

ಕೆಆರ್‌ಎಸ್‌ಗೆ ಸಾಮಾನ್ಯವಾಗಿ ಕೇರಳ ರಾಜ್ಯದ ಪ್ರವಾಸಿಗರು ಹೆಚ್ಚಾಗಿ ಬರುವುದು ವಾಡಿಕೆ. ಆದರೆ ಈ ಭಾರಿ ಕೇರಳದಲ್ಲಿ ಅತೀವೃಷ್ಟಿಯಿಂದಾಗಿ ಕೇರಳ ಪ್ರವಾಸಿಗರು ಕಡಿಮೆಯಾಗಿದ್ದರಾದರೂ, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶ-ವಿದೇಶಗಳಿಂದಲೂ ಬೃಂದಾವನಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿರುವುದರಿಂದ ಅವರ ರಕ್ಷಣೆ ಹಾಗೂ ಸೌಲಭ್ಯ ಒದಗಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿ ಗಳು ಹಾಗೂ ಸಿಬ್ಬಂದಿ ನಿರತರಾಗಿದ್ದಾರೆ.

ಕೆಆರ್‌ಎಸ್‌ ಮತ್ತು ಶ್ರೀರಂಗಪಟ್ಟಣ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಆರ್‌ಎಸ್‌ನಲ್ಲಿ ಭಾರೀ ಭದ್ರತೆ ಒದಗಿಸಿ ಕಟ್ಟೆಚ್ಚರ ವಹಿಸಿದ್ದಾರೆ. ವಾಹನ ಪಾರ್ಕಿಂಗ್ ಸ್ಥಳದಲ್ಲಿ ತಪಾಸಣಾ ಕೆಲಸ ವನ್ನು ಪೊಲೀಸರು ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದಾರೆ.

Translate »