ಮಾವುತ, ಕಾವಾಡಿಗಳು, ಅರಮನೆ ಸಿಬ್ಬಂದಿಗೆ ಪಂಚಕರ್ಮ ಚಿಕಿತ್ಸೆ
ಮೈಸೂರು

ಮಾವುತ, ಕಾವಾಡಿಗಳು, ಅರಮನೆ ಸಿಬ್ಬಂದಿಗೆ ಪಂಚಕರ್ಮ ಚಿಕಿತ್ಸೆ

September 18, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ 12 ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಇವುಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬ ದವರಿಗಾಗಿ ಆಯುಷ್ ಇಲಾಖೆ ಪಂಚ ಕರ್ಮ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಇಂಗ್ಲೀಷ್ ಮೆಡಿಸಿನ್ ಪಡೆಯಲು ಹಿಂದೇಟು ಹಾಕುವ ಮಾವುತರು, ಕಾವಾಡಿಗಳು ಹಾಗೂ ಕುಟುಂಬದ ಸದಸ್ಯರು ಪಂಚ ಕರ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯ ಇಲಾಖೆ ಕೋರಿಕೆ ಮೇರೆಗೆ ಕಳೆದ 7 ವರ್ಷದಿಂದ ಜಿಲ್ಲಾ ಆಯುಷ್ ಇಲಾಖೆಯು ಅರಮನೆ ಆವರಣದಲ್ಲಿ ಪಂಚಕರ್ಮ ಚಿಕಿತ್ಸಾ ಕೇಂದ್ರ ತೆರೆದು, ದಸರಾ ಆನೆಗಳ ಮಾವುತರು, ಕಾವಾಡಿ ಗಳು ಹಾಗೂ ಅವರ ಕುಟುಂಬ ಸದಸ್ಯರ, ಅರಮನೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಒತ್ತಡ ನಿವಾರಣೆ, ಮಂಡಿ, ಕಾಲು, ಬೆನ್ನು ನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಪದ್ಧತಿಯ ಮೂಲಕ ಚಿಕಿತ್ಸೆ ನೀಡುತ್ತಾ ಬಂದಿದೆ. ಈ ಬಾರಿಯೂ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದ್ದು, ಸೆ.5ರಿಂದ ಅಕ್ಟೋಬರ್ 20ರವರೆಗೆ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಮಾವುತರು, ಕಾವಾಡಿ ಗಳಿಗೆ ಈ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.

ಯಾವ ಯಾವ ಸಮಸ್ಯೆಗಳಿಗೆ: ಕಳೆದ ಬಾರಿ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ದಿನವೊಂದಕ್ಕೆ 20ರಿಂದ 25ರ ಸರಾಸರಿ ಯಲ್ಲಿ 680 ಮಂದಿ ಚಿಕಿತ್ಸೆ ಪಡೆದು ಕೊಂಡಿದ್ದರು. ಬಹುತೇಕರು ಚರ್ಮ ರೋಗ, ಸಂಧಿವಾತ, ಕೆಮ್ಮು, ಶ್ವಾಸ ಕೋಶದ ಸಮಸ್ಯೆಗಳು, ಮಂಡಿನೋವು, ಬೆನ್ನು ನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದದ್ದು ಕಂಡು ಬಂದಿತ್ತು. ಇದನ್ನು ಮನಗಂಡು ಈ ಬಾರಿ ಚರ್ಮ ರೋಗ, ಸಂಧಿವಾತ, ಜ್ವರ, ಸ್ತ್ರೀರೋಗಗಳು, ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪಂಚಕರ್ಮ, ಸ್ವೇದ (ಸ್ಟೀಮ್) ಮತ್ತು ಆಯುರ್ವೇದ ಚಿಕಿತ್ಸೆ ನೀಡಲು ಜಿಲ್ಲಾ ಆಯುಷ್ ಇಲಾಖೆ ಸಿದ್ಧತೆ ಮಾಡಿಕೊಂಡು, ಅಗತ್ಯವುಳ್ಳವರಿಗೆ ಚಿಕಿತ್ಸೆ ನೀಡಿ ಉಚಿತ ಔಷಧಿ ಸಹ ನೀಡ ಲಾಗುತ್ತಿದೆ. ಈ ಚಿಕಿತ್ಸಾ ಶಿಬಿರದಲ್ಲಿ ಸ್ನೇಹ ಪಾನ, ಅಭ್ಯುಂಗ, ಮಹಾನಾರಾಯಣ (ನೋವು ನಿವಾರಕ ತೈಲ), ಕ್ಷೀರ ತೈಲ, ಹೆಡ್ ಮಸಾಜ್, ಅಸಾವಾ (ಕಷಾಯ), ಹರಿಷ್ಟಗಳು (ಮೂಲ ಔಷಧಿಯ ದ್ರಾವಣ) ಸೇರಿದಂತೆ ವಿವಿಧ ಆಯು ರ್ವೇದ ಗಿಡ ಮೂಲಿಕೆಗಳಿಂದ ತಯಾರಿಸಿ ರುವ ದ್ರಾವಣ, ಚೂರ್ಣ, ಪೌಡರ್ ಸೇರಿದಂತೆ ಔಷಧಿಗಳನ್ನು ಈ ಶಿಬಿರದಲ್ಲಿ ನೀಡಲಾಗುತ್ತದೆ.

ಸೌಲಭ್ಯಗಳು: ಪ್ರಮುಖವಾಗಿ ಒತ್ತಡ ನಿವಾರಣೆಗೆ ಪಂಚಕರ್ಮ ಚಿಕಿತ್ಸೆ ನೀಡಲು ಈ ಕೇಂದ್ರವನ್ನು ಆರಂಭಿಸಲಾಗಿರುವುದ ರಿಂದ ಕೇಂದ್ರದಲ್ಲಿ ಒಂದು ಪಂಚಕರ್ಮ ಟೇಬಲ್, ಸ್ಟೀಮ್ ಯಂತ್ರ, ಸಿಲಿಂಡರ್ ಯುಕ್ತ ಸ್ಟೌವ್, ಡ್ರೆಸಿಂಗ್ ಮೆಟೀರಿಯಲ್, ತೂಕ ಮತ್ತು ಅಳತೆಯ ಸಾಧನ, ರಕ್ತದೊತ್ತಡ ಪರೀಕ್ಷಾ ಯಂತ್ರ ಸೇರಿದಂತೆ ರೋಗಿಗಳ ತಪಾಸಣೆಗೆ ಅಗತ್ಯವಾಗಿರುವ ಯಂತ್ರೋಪಕರಣಗಳಿವೆ.

ಮಸಾಜ್ ಸೌಲಭ್ಯವೂ ಲಭ್ಯ: ಈ ಕೇಂದ್ರ ದಲ್ಲಿ ಮಾವುತರು, ಕಾವಾಡಿಗಳಿಗೆ ಮಸಾಜ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಬಿದ್ದು ಕಾಲು ಅಥವಾ ಕೈ ಉಳುಕಿಸಿ ಕೊಂಡರೆ, ಕತ್ತು ಉಳುಕಿದರೂ ಮಸಾಜ್ ಮಾಡುವ ಮೂಲಕ ಸರಿ ಮಾಡಲಾಗು ತ್ತಿದೆ. ಇದಕ್ಕಾಗಿ ಸ್ಟಿಮ್ ಬಾಕ್ಸ್, ಮಸಾಜ್‍ಗೆ ಮಂಚದ ವ್ಯವಸ್ಥೆ ಮಾಡಲಾಗಿದೆ.

Translate »