ಪ್ರಧಾನಿ ಮೋದಿ ಅವರ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕ ವಿತರಣೆ
ಮೈಸೂರು

ಪ್ರಧಾನಿ ಮೋದಿ ಅವರ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕ ವಿತರಣೆ

September 18, 2018

ಮೈಸೂರು: ದೇಶದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭವಿಷ್ಯ ಭಾರತದ ನಿರ್ಮಾತೃಗಳಾದ ವಿದ್ಯಾರ್ಥಿ ಸಮೂಹಕ್ಕೂ ಪ್ರೇರಣಾಶಕ್ತಿ ನೀಡಲು `ಎಕ್ಸಾಮ್ ವಾರಿಯರ್ಸ್’ ಪುಸ್ತಕ ರಚನೆ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನ ವಿಜಯ ವಿಠ್ಠಲ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ `ಎಕ್ಸಾಮ್ ವಾರಿಯರ್ಸ್ (ಕನ್ನಡ ಅನುವಾದದ ಪುಸ್ತಕ)’ ಪುಸ್ತಕಗಳನ್ನು ವಿತರಿಸಿ, ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮಗಳಲ್ಲಿ ದೇಶದ ವಿದ್ಯಾರ್ಥಿ ಸಮೂಹ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪರೀಕ್ಷಾ ಭಯವನ್ನು ಹೋಗಲಾಡಿಸುವಂತಹ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದರು. ಕಳೆದ ವರ್ಷ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ `ಎಕ್ಸಾಮ್ ವಾರಿಯರ್ಸ್’ ಪುಸ್ತಕ ರಚಿಸಿದರು.

ಪ್ರಸ್ತುತದ ಜಾಗತಿಕ ಇತಿಹಾಸದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ಮೋದಿ ಶಕೆ ಆರಂಭ ಗೊಂಡಿದೆ. ಈ ದೇಶದ ಅತ್ಯಂತ ಜನಪ್ರಿಯ ವ್ಯಕ್ತಿ ಎಂದರೆ ಅದು ಪ್ರಧಾನಿ ಮೋದಿಯಾಗಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೋದಿ ಅವರು ನೆಲೆಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಬಿಡುಗಡೆ: ಈ ಪುಸ್ತಕದ ಕನ್ನಡ ಅನುವಾದದ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಇದೀಗ ಕನ್ನಡಕ್ಕೆ ಅನುವಾದಗೊಂಡ ಪುಸ್ತಕ ನಿಮ್ಮ ಕೈಯಲ್ಲಿದ್ದು, ಈ ಪುಸ್ತಕ ಬಿಡುಗಡೆಯ ಔಪಚಾರಿಕ ಕಾರ್ಯಕ್ರಮವನ್ನು ಶೀಘ್ರದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು. ಮೊದಲ ತರಗತಿಯಿಂದ ಪದವಿಪೂರ್ವ ಶಿಕ್ಷಣದವರೆಗೂ ವಿದ್ಯಾರ್ಥಿಗಳಿಗೆ ಈ ಪುಸ್ತಕ ನೆರವಾಗಲಿದೆ ಎಂದರು.

ದೇಶದ ಅರ್ಥ ವ್ಯವಸ್ಥೆ ಸದೃಢಗೊಳಿಸುವುದು ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡುವ ಜೊತೆಗೆ ವಿದ್ಯಾರ್ಥಿ ಸಮೂಹದ ಬಗ್ಗೆಯೂ ಆಲೋಚಿಸುವ ವಿಶಾಲವಾದ ಮನಸ್ಸು ಮೋದಿಯವರದು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಒತ್ತಡದಿಂದ ತೊಡಗಿಕೊಳ್ಳಬಾರದು. ಬದ ಲಾಗಿ ಆಸಕ್ತಿಯಿಂದ ಕಲಿಕೆಯನ್ನು ಆನಂ ದಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದೇ ಅಂಶ ಪುಸ್ತಕದಲ್ಲಿ ಅಡಕವಾಗಿದೆ ಎಂದು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿನಲ್ಲಿ ತೊಡಗಿಸಿಕೊಂಡರೆ ಯಶಸ್ಸು ಲಭಿಸಲಿದೆ. ಎಸ್‍ಎಸ್ ಎಲ್‍ಸಿ ಬಳಿಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಈ ಮೂರರಲ್ಲಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಪ್ರವೇಶ ಪಡೆದು ಶೈಕ್ಷ ಣಿಕ ಸಾಧನೆ ಮಾಡಿ ಎಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು. ಶಾಸಕ ಎಲ್. ನಾಗೇಂದ್ರ, ಶಾಲೆಯ ಪ್ರಾಂಶುಪಾಲರಾದ ಎಸ್.ಪಿ.ಆಶಾ ಹಾಗೂ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

ಆಪರೇಷನ್ ಕಮಲ ಎಂಬುದು ವಿನಾಕಾರಣ ಆರೋಪ: ಸಿಂಹ

ಮೈಸೂರು: `ಅಪರೇಷನ್ ಕಮಲ’ ಎಂಬುದು ದುರ್ಬಲ ಮನಸ್ಸಿನ ವಿನಾಕಾರಣ ಆರೋಪವಲ್ಲದೆ ಮತ್ತೇನಿಲ್ಲ. ಹಾಗೇ ನೋಡಿದರೆ, ಸೂಟ್‍ಕೇಸ್ ಕೊಟ್ಟು ಶಾಸಕರು, ಸಂಸದರನ್ನು ಕೊಳ್ಳುವ ಕೆಟ್ಟ ಚಾಳಿ ಆರಂಭಿಸಿದ್ದೇ ಕಾಂಗ್ರೆಸ್ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

`ಎಕ್ಸಾಮ್ ವಾರಿಯರ್ಸ್’ ಪುಸ್ತಕಗಳನ್ನು ವಿತರಣೆ ಮಾಡಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅಪರೇಷನ್ ಕಮಲ ಎನ್ನುವುದು ಕಾಂಗ್ರೆಸ್‍ನ ದುರ್ಬಲ ಮನಸ್ಸಿನ ಆಧಾರರಹಿತ ಆರೋಪವಾಗಿದೆ. ಸಂಸದರು, ಶಾಸಕರನ್ನು ಖರೀದಿ ಮಾಡುವಂತಹ ಕೆಟ್ಟಚಾಳಿ ಆರಂಭಿಸಿದ್ದು ಕಾಂಗ್ರೆಸ್‍ನವರು. ನರಸಿಂಹರಾವ್ ಪ್ರಧಾನಿಯಾಗಿದ್ದ ವೇಳೆ ಸಂಸದರೊಬ್ಬರಿಗೆ ಸೂಟ್‍ಕೇಸ್ ನೀಡಿ ಖರೀದಿಸಿದ್ದು ಕಾಂಗ್ರೆಸ್. 2008ರಲ್ಲಿ ನಮ್ಮ ಪಕ್ಷದ ಸಂಸದರು ಸೇರಿದಂತೆ ಇನ್ನಿತರ ಪಕ್ಷದ ಸಂಸದರಿಗೆ ಸೂಟ್‍ಕೇಸ್ ನೀಡಿ ಖರೀದಿಸಿದ್ದು ಕೂಡ ಕಾಂಗ್ರೆಸ್. ಇಂತಹ ಕೆಟ್ಟ ಚಾಳಿಗೆ ನಾಂದಿ ಹಾಡಿದ್ದು ಕಾಂಗ್ರೆಸ್ ಪಕ್ಷ ಎಂದು ತಿರುಗೇಟು ನೀಡಿದರು.

ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪಗಳಿಗೆ ನಾನು ಉತ್ತರಿಸಲ್ಲ: ನೆರೆ ಹಾವಳಿ ಸ್ಥಿತಿಗತಿ ಅಧ್ಯಯನಕ್ಕಾಗಿ ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ತಂಡಕ್ಕೆ ಮಾಹಿತಿ ನೀಡುವ ವಿಚಾರವಾಗಿ ಕೊಡಗು ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಅವರೊಂದಿಗಿನ ಮನಸ್ತಾಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪಗಳಿಗೆ ನಾನು ಉತ್ತರಿಸಲ್ಲ ಎಂದರು.

ಮತ್ತೆ ಮಾತು ಮುಂದುವರೆಸಿದ ಅವರು, ನೆರೆ ಹಾವಳಿ ಬಳಿಕ ಕೊಡಗು ಜಿಲ್ಲೆಯಲ್ಲಿ ಹಾನಿಗೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವಾಗುವಂತಹ ಕೆಲಸ ಮಾಡಿದ್ದೇನೆ. ಕೇಂದ್ರದ ರಕ್ಷಣಾ ಸಚಿವರನ್ನು ಜಿಲ್ಲೆಗೆ ಕರೆತಂದು ನೆರೆ ಹಾವಳಿಯಿಂದ ಉಂಟಾದ ಹಾನಿ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ಈ ಎಲ್ಲವೂ ಕೊಡಗಿನ ಜನತೆಗೆ ಗೊತ್ತಿದ್ದು, ಕೊಡಗಿನಲ್ಲಿ ಜನಪ್ರಿಯ ರಾಜಕಾರಣಿ ಯಾರೆಂದು ಕೇಳಿ ನೋಡಿ, ಆಗ ನಿಮಗೆ ಕೊಡಗಿನ ಜನತೆಯೊಂದಿಗೆ ನಾನಿದ್ದೇನೆ ಎಂಬುದು ಅರಿವಾಗುತ್ತದೆ ಎಂದು ತಿಳಿಸಿದರು.

2029ರವರೆಗೆ ಮೋದಿ ಪ್ರಧಾನಿ ಆಗಿರಬೇಕು: ಇಂದು ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಅವರೇ ಬರೆದಿರುವ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ. ಸದೃಢ ಭಾರತ ನಿರ್ಮಾಣದ ಸಂಕಲ್ಪವನ್ನು ಮೋದಿಯವರು ಮಾಡಿದ್ದು, 2029ರವರೆಗೂ ಅವರೇ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವಂತಾಗಲೆಂದು ಪ್ರತಾಪ್ ಸಿಂಹ ಹಾರೈಸಿದರು.

Translate »