ಜಂಬೂ ಸವಾರಿಯಂದು ಹಿನಕಲ್  ಫ್ಲೈಓವರ್ ಮೇಲೆ ಲಘು ವಾಹನ ಸಂಚಾರ
ಮೈಸೂರು

ಜಂಬೂ ಸವಾರಿಯಂದು ಹಿನಕಲ್  ಫ್ಲೈಓವರ್ ಮೇಲೆ ಲಘು ವಾಹನ ಸಂಚಾರ

September 18, 2018

ಮೈಸೂರು: ಮೈಸೂರು-ಹುಣಸೂರು ಮುಖ್ಯರಸ್ತೆಯ ಹಿನಕಲ್ ರಿಂಗ್‍ರಸ್ತೆ ಜಂಕ್ಷನ್‍ನಲ್ಲಿ 19.80 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ (ಫ್ಲೈಓವರ್) ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ದಸರೆಯೊಳಗೆ ಮೈಸೂರಿನ ಮೊದಲ ಫ್ಲೈಓವರ್ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

ಮೈಸೂರು ನಗರದ ಮೊದಲ ಫ್ಲೈ ಓವರ್ ಎಂಬ ಕೀರ್ತಿಗೆ ಪಾತ್ರವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇದರ ನಿರ್ಮಾಣ ವನ್ನು 2016ರ ಏಪ್ರಿಲ್ 27ರಂದು ಕೈಗೆತ್ತಿ ಕೊಂಡಿತ್ತು. ಕಾಮಗಾರಿ ಆರಂಭವಾಗಿ ಎರಡು ವರ್ಷ ಐದು ತಿಂಗಳು ಕಳೆದರೂ ಪೂರ್ಣಗೊಳ್ಳದೆ ಇರುವುದರಿಂದ ಸ್ಥಳೀ ಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸಂಸದ ಪ್ರತಾಪಸಿಂಹ ಫೆ.24 ರಂದು ಕಾಮಗಾರಿ ಪರಿಶೀಲಿಸಿ, ಜುಲೈ ಅಂತ್ಯಕ್ಕೆ ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ನಂತರ ಆಗಸ್ಟ್‍ನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ದಸರೆ ವೇಳೆಗೆ ಕಾಮಗಾರಿ ಪೂರ್ಣ ಗೊಂಡು ವಾಹನ ಸಂಚಾರಕ್ಕೆ ಫ್ಲೈಓವರ್ ಮುಕ್ತವಾಗಲಿದೆ ಎಂದು ಹೇಳಿದ್ದರು. ಆದರೆ ದಸರಾ ಆರಂಭಕ್ಕೆ ಕೇವಲ 23 ದಿನಗಳಿದ್ದು, ಮೇಲ್ಸೇತುವೆ ಕಾಮಗಾರಿ ಈಗ ಶೇ.80 ರಷ್ಟು ಪೂರ್ಣಗೊಂಡಿದ್ದು, ದಸರೆ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುವುದು ಅನುಮಾನವಾಗಿದೆ. ಕಾಮಗಾರಿ ನಿರತ ಸಿಬ್ಬಂದಿ ಮಾತ್ರ ದಸರೆಯ ವೇಳೆಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು, ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ರಿಂಗ್ ರಸ್ತೆಗೆ ಅಡ್ಡಲಾಗಿ ಪ್ರಮುಖ ಭಾಗದಲ್ಲಿ ಸಿಮೆಂಟ್ ಬ್ಲಾಕ್‍ಗಳನ್ನು ಅಳವಡಿಸಲಾಗಿದೆ. ರಿಂಗ್ ರಸ್ತೆ ಜಂಕ್ಷನ್ ನಿಂದ ಎರಡು ಬದಿಯ ತಲಾ 20 ಮೀಟರ್ (ಒಟ್ಟು 40 ಮೀ) ಕಾಮಗಾರಿ ನಡೆಸಬೇಕಾ ಗಿದೆ. ಇದಕ್ಕಾಗಿ ಎರಡು ಬದಿಯಲ್ಲೂ ಬೀಮ್ ಅಳವಡಿಸಲಾಗಿದ್ದು, ಇಲ್ಲಿಗೆ ಸೀಮೆಂಟ್ ಬ್ಲಾಕ್‍ಗಳನ್ನು ಅಳವಡಿಸಿ, ನಂತರ ಕಾಂಕ್ರಿಟ್ ಹಾಕಿ ಭದ್ರಪಡಿಸಬೇಕಿದೆ. ನಾಳೆ (ಸೆ.18) ಯಿಂದ ಬಾಕಿ ಇರುವ 40 ಮೀಟರ್ ಸ್ಥಳದಲ್ಲಿ ಸಿಮೆಂಟ್ ಬ್ಲಾಕ್‍ಗಳನ್ನು ಕ್ರೇನ್ ನೆರವಿನಿಂದ ಅಳವಡಿಸುವ ಕಾರ್ಯ ನಡೆಯಲಿದ್ದು, 2 ದಿನದಲ್ಲಿ ಅದು ಪೂರ್ಣಗೊಳ್ಳಲಿದೆ. ಬಳಿಕ ಫ್ಲೈಓವರ್ ಮೇಲೆ ಕಾಂಕ್ರಿಟ್ ಹಾಕಲಾಗು ತ್ತದೆ. ಇದಾದ ನಂತರ 21 ದಿನ ಕ್ಯೂರಿಂಗ್ ಮಾಡಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಮನಗಂಡಿರುವ ಮುಡಾ ಅಧಿಕಾರಿಗಳು, ವಿಜಯದಶಮಿಗೆ (ಜಂಬೂಸವಾರಿ) ಇನ್ನು 30 ದಿನ ಇರುವುದನ್ನು ಲೆಕ್ಕಾಚಾರ ಮಾಡಿ ಮೇಲ್ಸೇತುವೆ ವಿಜಯ ದಶಮಿಯಂದು ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗ ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೇಲ್ಸೇತುವೆಗೆ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಮತ್ತು ಮುಡಾ ದಿಂದ ಶೇ.40ರಷ್ಟು ಅನುದಾನ ನೀಡಿದೆ. ರಿಂಗ್ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಹುಣಸೂರು, ಕೊಡಗು, ಕೆ.ಆರ್.ನಗರ, ಪಿರಿಯಾಪಟ್ಟಣ, ಹಾಸನ, ಮಂಗಳೂರು ಸೇರಿದಂತೆ ಇನ್ನಿತರೆಡೆಗೆ ಹೋಗುವ ವಾಹನ ಗಳು ಪರದಾಡುವಂತಾಗಿತ್ತು. ರಿಂಗ್‍ರಸ್ತೆ ಯನ್ನು ದಾಟುವಾಗ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಗ್ರೇಡ್ ಸೆಪ ರೇಟರ್ 510 ಮೀಟರ್ ಉದ್ದ, 17.20 ಮೀಟರ್ ಎತ್ತರವಿದ್ದು, ಮೇಲ್ಸೇತುವೆಯ ಅಗಲ 7.50 ಮೀಟರ್. ಎರಡು ಬದಿ ಯಲ್ಲೂ 6 ಮೀಟರ್ ಅಗಲದ ಸರ್ವಿಸ್ ರಸ್ತೆ ನಿರ್ಮಿ ಸುವ ಯೋಜನೆಯನ್ನು ಮುಡಾ ಹೊಂದಿದೆ.

ದಸರೆಗೂ ಮುನ್ನ: ಮೇಲ್ಸೇತುವೆಯ ಕಾಮಗಾರಿಗೆ ಸಂಬಂಧಿಸಿದಂತೆ ಮುಡಾ ಎಂಜಿನಿಯರ್ ಒಬ್ಬರು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಸಂಸದರ ಸೂಚನೆಯ ಮೇರೆಗೆ ದಸರೆ ಒಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇದರಿಂದ ತ್ವರಿತಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ. ಪ್ರತಿ ದಿನ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. ದಸರೆಗೂ ಮುನ್ನ ವಾಹನ ಸಂಚಾರಕ್ಕೆ ಇದನ್ನು ಮುಕ್ತಗೊಳಿಸಬೇಕು ಎಂಬುದು ನಮ್ಮ ಉದ್ದೇಶ. ಎರಡು ದಿನದಲ್ಲಿ ಸಿಮೆಂಟ್ ಬ್ಲಾಕ್‍ಗಳನ್ನು ಜೋಡಿಸಲಾಗುತ್ತದೆ. ಎರಡು ದಿನದಲ್ಲಿ ಸೀಮೆಂಟ್ ಬ್ಲಾಕ್‍ಗಳನ್ನು ಜೋಡಿಸಿದ ನಂತರ, ಕಾಂಕ್ರಿಟ್ ಹಾಕಲಾಗುತ್ತದೆ. ನಂತರ 21 ದಿನ ಕ್ಯೂರಿಂಗ್ ಮಾಡಲೇಬೇಕು. ಈ ಎಲ್ಲಾ ಲೆಕ್ಕಾಚಾರ ಮಾಡಿ, ಜಂಬೂಸವಾರಿ ದಿನ ದಂದು ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ 2 ವಾರದಲ್ಲಿ ಬಸ್ಸು, ಲಾರಿಗಳು ಹೀಗೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಆಲೋಚನೆಯಿದೆ ಎಂದು ವಿವರಿಸಿದರು.

ಧೂಳಿನ ಸಮಸ್ಯೆಯಿಂದ ತತ್ತರಿಸಿದ್ದೇವೆ: ಫ್ಲೈಓವರ್ ಕಾಮಗಾರಿ ಕುರಿತಂತೆ ಸ್ಥಳೀಯ ವ್ಯಾಪಾರಿಗಳು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ಮೇಲ್ಸೇತುವೆಯ ಕಾಮಗಾರಿಯಿಂದಾಗಿ ನಾವು ತತ್ತರಿಸಿದ್ದೇವೆ. ಇದೂವರೆಗೆ ಮೂರ್ನಾಲ್ಕು ಬಾರಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗಡುವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನೀಡುತ್ತಾ ಬಂದಿ ದ್ದರು. ಕಾಮಗಾರಿ ಮಂದಗತಿಯಲ್ಲಿ ಸಾಗು ತ್ತಿರುವ ಹಿನ್ನೆಲೆಯಲ್ಲಿ ಧೂಳಿನ ಸಮಸ್ಯೆ ಕಾಡುತ್ತಿದೆ. ಇದರಿಂದ ಸ್ಥಳೀಯ ಜನರು ಮತ್ತು ವ್ಯಾಪಾರಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ದಸರೆ ಒಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಸಂತೋಷ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

Translate »