ಕೆಲಸಕ್ಕೆ ಹೋಗುವ ಸಲುವಾಗಿಯೇ ಪೋಷಕರು ಮಕ್ಕಳನ್ನು ಬೇಬಿ ಸಿಟ್ಟಿಂಗ್‍ಗೆ ಸೇರಿಸುತ್ತಿದ್ದಾರೆ
ಮೈಸೂರು

ಕೆಲಸಕ್ಕೆ ಹೋಗುವ ಸಲುವಾಗಿಯೇ ಪೋಷಕರು ಮಕ್ಕಳನ್ನು ಬೇಬಿ ಸಿಟ್ಟಿಂಗ್‍ಗೆ ಸೇರಿಸುತ್ತಿದ್ದಾರೆ

September 6, 2018
  • ಹೀಗಾಗಿ ತಂದೆ ತಾಯಿ-ಮಕ್ಕಳ ನಡುವೆ ಅಂತರವೇರ್ಪಡುತ್ತಿದೆ
  • ಮೈಸೂರು ವಿವಿ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಕೆ.ಎಸ್.ರವೀಂದ್ರನಾಥ್ ಬೇಸರ

ಮೈಸೂರು: ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಅಂತರ ಏರ್ಪಡುತ್ತಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾದ್ಯಾಪಕ ಡಾ.ಕೆ.ಎಸ್.ರವೀಂದ್ರನಾಥ್ ಬೇಸರ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕøತಿ ಕೇಂದ್ರ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ `ಸಮಾಜದಲ್ಲಿ ಶಿಕ್ಷಕರ ಪಾತ್ರ ಮತ್ತು ಪ್ರಾಮುಖ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕೆಲಸಕ್ಕೆ ಹೋಗುವ ಅನಿವಾರ್ಯತೆಯಿಂದಾಗಿ ತಂದೆ-ತಾಯಿ ಮಕ್ಕಳನ್ನು ಬೇಬಿ ಸಿಟ್ಟಿಂಗ್‍ಗೆ ದಾಖಲಿಸುತ್ತಿರುವುದರಿಂದ ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಏರ್ಪಡುತ್ತಿದೆ. ಇದರಿಂದಾಗಿ ತಂದೆ-ತಾಯಿಗಳ ಮೌಲ್ಯ ಕುಸಿಯುತ್ತಿದೆ. ಜೊತೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆಯೂ ಬಾಂಧವ್ಯ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರ ಮಹತ್ವವನ್ನು ತಿಳಿಸಿದ ಅವರು, ಡಾ.ಎಸ್.ರಾಧಾಕೃಷ್ಣನ್ ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಹೇಳುವ ಮೂಲಕ ಉಪಾಧ್ಯಾಯರ ಪ್ರಾಮುಖ್ಯತೆ, ಅವರಲ್ಲಿರುವ ಮಹತ್ವಕ್ಕೆ ಗೌರವ ತಂದುಕೊಟ್ಟಿದ್ದಾರೆ. ಡಾ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಅವಧಿ ಮುಗಿದ ಬಳಿಕ ತಾವು ಮತ್ತೆ ಪಾಠ ಬೋಧಿಸಲು ಹೋಗುವುದಾಗಿ ಹೇಳುವ ಮೂಲಕ ಶಿಕ್ಷಕ ವೃತ್ತಿಗೆ ಘನತೆ, ಗೌರವವನ್ನು ತಂದಿದ್ದಾರೆ ಎಂದರು.
ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಮಕ್ಕಳಿಗೆ ಪಾಠ ಬೋಧಿಸುವ ಜೊತೆಗೆ ಮಾನವೀಯತೆ ಯನ್ನೂ ಕಲಿಸುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾರ್ಪಡಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.
ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗಣ್ಯರು ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಹಂಗಾಮಿ ಕುಲಪತಿ ಪ್ರೊ.ಕೆ.ವಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಆರ್.ರಾಜಣ್ಣ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »