ಬೆಂಗಳೂರು: ಮೈತ್ರಿ ಸರ್ಕಾರದ ನೂತನ ಬಜೆಟ್‍ಗೆ ಮುನ್ನ ಯಾವುದೇ ಯೋಜನೆಗಳ ಅನುಷ್ಠಾನ ಹಾಗೂ ಅಧಿಕಾರಿಗಳ ವರ್ಗಾವಣೆ ಕುರಿತು ಮುಖ್ಯಮಂತ್ರಿಗಳ ಅನುಮತಿ ಪಡೆಯಬೇಕು ಎಂಬ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸೂಚನೆಯೊಂದನ್ನು ಹೊರಡಿಸಿದ್ದು, ಹಿಂದಿನ ಸರ್ಕಾರದಲ್ಲಿ ಲೇಖಾನುದಾನ ಪಡೆದಿರುವ ಯೋಜನೆಗಳಿಗೆ ಮಿತಿಗಿಂತ ಹೆಚ್ಚಿಗೆ ಅನುದಾನ ನೀಡಬಾರದು ಎಂದು ಸಂಬಂಧಪಟ್ಟ ಇಲಾಖಾ ಕಾರ್ಯ ದರ್ಶಿಗಳಿಗೆ ಕಟ್ಟಾದೇಶ ನೀಡಿದ್ದಾರೆ. ಯಾವುದೇ ಹೊಸ ಯೋಜನೆಗೆ ಮುಂದಿನ ಆದೇಶದವರೆಗೆ ಅನುಮತಿ ನೀಡಬಾರದು. ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಇಲಾಖಾ ಕಾರ್ಯದರ್ಶಿಗಳಿಗಲ್ಲದೆ, ಆಡಳಿತದ ಅಧೀನಕ್ಕೆ ಒಳಪಡುವ ಎಲ್ಲಾ ನಿಗಮ-ಮಂಡಳಿ, ಸಂಸ್ಥೆಗಳ ಅನುಷ್ಠಾನ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಹೊಸ ಸಮ್ಮಿಶ್ರ ಸರ್ಕಾರದ ಗುರಿ ಮತ್ತು ಉದ್ದೇಶಗಳಿಗೆ ಅನುಗುಣವಾಗಿ 2018-19ನೇ ಸಾಲಿನ ಆಯ-ವ್ಯಯ ಪತ್ರವನ್ನು ಹೊಸದಾಗಿ ಮಂಡಿ ಸುವ ಹಿನ್ನೆಲೆಯಲ್ಲಿ ಇಂತಹ ಆದೇಶ ನೀಡಲಾಗಿದೆ. ಅಧಿಕಾರಿಗಳು ಮತ್ತು ವೃಂದದಲ್ಲಿನ ಯಾವುದೇ ವರ್ಗಾವಣೆಗಳನ್ನು ಮಾಡಬಾರದು, ಅನಿವಾರ್ಯ ಪರಿಸ್ಥಿತಿಯಲ್ಲಿ ವರ್ಗಾವಣೆ ಕುರಿತು ಮುಖ್ಯಮಂತ್ರಿಗಳ ಮೂಲಕ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರಬೇಕು. ಮುಂದಿನ ಆದೇಶದವರೆಗೂ ಎಲ್ಲಾ ಇಲಾಖೆಗಳು ತಾವು ಸೂಚಿಸಿರುವ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.