ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಡುಗಡ್ಡೆಯಲ್ಲಿ ಸಿಲುಕಿದ್ದ ಮತ್ತೊಬ್ಬನ ರಕ್ಷಣೆ
ಮಂಡ್ಯ

ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಡುಗಡ್ಡೆಯಲ್ಲಿ ಸಿಲುಕಿದ್ದ ಮತ್ತೊಬ್ಬನ ರಕ್ಷಣೆ

July 15, 2018

ಮಂಡ್ಯ:  ಕೆಆರ್‌ಎಸ್‌ನಿಂದ ಹೆಚ್ಚು ವರಿ ನೀರು ಬಿಟ್ಟ ಬೆನ್ನಲ್ಲೇ ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಯುವಕರಿಬ್ಬರ ಪೈಕಿ ಓರ್ವ ರಕ್ಷಿಸಲ್ಪಟ್ಟು, ಮತ್ತೊಬ್ಬ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಂದ್ರವನ ಆಶ್ರಮ ಸಮೀಪದ ಗೂಳಿತಿಟ್ಟು ಬಳಿ ಇಂದು ಸಂಜೆ 5 ಗಂಟೆ ಯಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಮಹಾದೇವ ಬಿನ್ ವೆಂಕಟಯ್ಯ (28) ಎಂಬ ಯುವಕನನ್ನೇ ರಕ್ಷಿಸಲಾಗಿದ್ದು ಮತ್ತೊಬ್ಬನ ಮಾಹಿತಿ ತಿಳಿದು ಬಂದಿಲ್ಲ.

ಕಾವೇರಿ ನದಿಯಲ್ಲಿ ನೀರು ಹೆಚ್ಚಳವಾದ ಪರಿಣಾಮ ನದಿಯ ಮಧ್ಯೆ ಬಂಡೆಯಲ್ಲಿ ಕುಳಿತಿದ್ದ ಮಹಾದೇವ ಪ್ರವಾಹ ಬಂದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನದಿಯ ಮಧ್ಯೆ ಮರವನ್ನು ಹಿಡಿದು ಕೊಂಡು ಒದ್ದಾಡುತ್ತಿದ್ದ.

ಇದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳ ಮತ್ತು ಪೊಲೀಸರು, ಸ್ಥಳಿಯ ಮೀನುಗಾರರು ಸ್ಥಳಕ್ಕೆ ಹೋಗಿ ಆತನನ್ನು ರಕ್ಷಿಸಿದ್ದಾರೆ.

ಮತ್ತೊಬ್ಬ ನದಿಯಲ್ಲಿ ಕೊಚ್ಚಿ ಹೋಗಿದ್ದು, ಯಾರೆಂಬುದು ತಿಳಿದು ಬಂದಿಲ್ಲ. ಕೊಚ್ಚಿ ಹೋಗಿರುವ ಅಪರಿಚಿತ ವ್ಯಕ್ತಿಗಾಗಿ ಅಗ್ನಿ ಶಾಮಕದಳ ಸಿಬ್ಬಂದಿ ಶೋಧಕಾರ್ಯ ಮುಂದುವರಿಸಿದ್ದಾರೆ. ಆತನ ಬೈಕ್ ನದಿ ಮಧ್ಯ ಭಾಗದಲ್ಲಿ ದೊರೆತಿದೆ. ಈತ ಮೈಸೂರು ಮೂಲದವನಿರಬಹುದೆಂದು ಶಂಕಿಸಲಾಗಿದೆ.

Translate »