ಬ್ಲಾಕ್‍ಮೇಲ್ ಆರ್‍ಟಿಐ ಕಾರ್ಯಕರ್ತರ ಮೇಲೆ ಪೊಲೀಸರ ಹದ್ದಿನ ಕಣ್ಣು ನೈಜ ಕಾರ್ಯಕರ್ತರಿಗಿಲ್ಲ ಸಮಸ್ಯೆ
ಮೈಸೂರು

ಬ್ಲಾಕ್‍ಮೇಲ್ ಆರ್‍ಟಿಐ ಕಾರ್ಯಕರ್ತರ ಮೇಲೆ ಪೊಲೀಸರ ಹದ್ದಿನ ಕಣ್ಣು ನೈಜ ಕಾರ್ಯಕರ್ತರಿಗಿಲ್ಲ ಸಮಸ್ಯೆ

July 23, 2018

ಮೈಸೂರು: ಆರ್‍ಟಿಐ ಮೂಲಕ ಬೇರೊಬ್ಬರ ಅಥವಾ ಅಧಿಕಾರಿಗಳ ದಾಖಲಾತಿಗಳನ್ನು ಪಡೆದು ಬ್ಲಾಕ್ ಮೇಲ್ ಮಾಡುತ್ತಿದ್ದವರ ಮೇಲೆ ಇದೀಗ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದೆ.

ಹೌದು. ಕಳೆದ ನಾಲ್ಕೈದು ತಿಂಗಳಿಂದ ಈಚೇಗೆ ರಾಜ್ಯಾದ್ಯಂತ ಆರ್‍ಟಿಐ ಮೂರ್ನಾಲ್ಕು ಕಾರ್ಯಕರ್ತರ ಬರ್ಬರ ಹತ್ಯೆಯಾದ ಹಿನ್ನೆಲೆಯಲ್ಲಿ ಎಸಿಬಿ, ಸಿಸಿಬಿ ಪೊಲೀಸರು, ಗೌಪ್ಯವಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಕೆಲ ಆರ್‍ಟಿಐ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿಗಳ ಕಚೇರಿ, ಮುಡಾ, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳಲ್ಲಿ ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಆರ್‍ಟಿಐ ಮೂಲಕ ಕೇಳುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೆಸರೇ ಳಲಿಚ್ಚಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ್ದಾರೆ.

ಸರ್ಕಾರ ಅಥವಾ ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿರುವ ಆರ್‍ಟಿಐ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಆರ್‍ಟಿಐ ಮೂಲಕ ಮೂರನೇ ವ್ಯಕ್ತಿಗಳು ಅಂದರೆ, ಅಧಿಕಾರಿಗಳು, ಬಿಲ್ಡರ್‍ಗಳು ಸೇರಿದಂತೆ ಇತರೆ ಆರ್ಥಿಕ ವಹಿವಾಟು ನಡೆಸುತ್ತಿದ್ದ ವ್ಯಕ್ತಿಗಳ ಮಾಹಿತಿ ಯನ್ನು ಎಸಿಬಿ ಇಲ್ಲವೇ ಲೋಕಾಯುಕ್ತದಲ್ಲಿ ದೂರು ದಾಖಲಿಸುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದವರಿಗೆ ಎಸಿಬಿ ಮತ್ತು ಸಿಸಿಬಿ ಪೊಲೀಸರು ಮೂರು ತಿಂಗಳಿಂದ ಗೌಪ್ಯವಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಕರಣವೊಂದರಲ್ಲಿ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಎಸಿಬಿ ಪೊಲೀಸರು ವಿಚಾರಣೆಗೆ ಕರೆದು, ಇಲ್ಲಿಯವರೆಗೆ ಆರ್‍ಟಿಐ ಮೂಲಕ ಮಾಹಿತಿ ಪಡೆದ ಅರ್ಜಿ ಗಳ ಸಂಖ್ಯೆ, ಈ ದಾಖಲಾತಿಗಳು ಯಾರಿಗಾಗಿ? ಎಂಬ ಮಾಹಿತಿಯನ್ನು ಕಲೆಹಾಕಿದ್ದಾರೆ. ಇದರಿಂದ ಸರ್ಕಾರಕ್ಕೆ ಅಥವಾ ಸಾರ್ವಜನಿಕರಿಗೆ ಆಗಿರುವ ಲಾಭ-ನಷ್ಟದ ಬಗ್ಗೆ ಕೂಲಂ ಕುಷವಾಗಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದರು.

ಈ ಪರಿಣಾಮ ಸರ್ಕಾರಿ ಕಚೇರಿಗಳಲ್ಲಿ ಅದರಲ್ಲೂ ಮುಡಾ, ಜಿಲ್ಲಾಧಿಕಾರಿಗಳ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆರ್‍ಟಿಐ ಮೂಲಕ ಸಲ್ಲಿಕೆಯಾಗುತ್ತಿದ್ದ ಶೇ.40ರಷ್ಟು ಅರ್ಜಿಗಳು ಕಡಿಮೆಯಾಗಿವೆ ಎನ್ನುತ್ತಿದೆ ಅಧಿಕಾರಿ ವಲಯ.

ಮಾಹಿತಿ ಹಕ್ಕು ಅಧಿನಿಯಮ 8(1)(ಐ) ಕಲಂ ಏನು ಹೇಳುತ್ತದೆ: ವರ್ಗಾವಣೆ ಪತ್ರ, ಜಾತಿ ಪರಿಶೀಲನಾ ವರದಿ, ಜನನ ಮತ್ತು ಮರಣ ಪ್ರಮಾಣ ಪತ್ರ, ವಿಚಾರಣಾ ವರದಿ, ಪೊಲೀಸ್ ಸ್ಟೇಷನ್ ಹೌಸ್ ಡೈರಿ, ವೆಹಿಕಲ್ ಲಾಂಗ್ ಬುಕ್, ಪೊಲೀಸ್ ಕಂಟ್ರೋಲ್ ರೂಂ ಮಾಹಿತಿ ಪುಸ್ತಕ, ಮಹಜರ್ ರಿಪೋರ್ಟ್, ಪೊಲೀಸ್ ಎಫ್‍ಐಆರ್, ಸರ್ಕಾರ ನೀಡಿರುವ ವಸತಿ ಗೃಹಗಳ ಮಾಹಿತಿ, ಮಂತ್ರಿ ಪರಿಷತ್ತಿನ, ಕಾರ್ಯದರ್ಶಿಗಳ ಮತ್ತು ಇತರೆ ಅಧಿಕಾರಿಗಳ ಚರ್ಚೆಗಳ ದಾಖಲೆಗಳು ಸೇರಿದಂತೆ ಸಚಿವ ಸಂಪುಟ ಕಾಗದ ಪತ್ರಗಳು ಹಾಗೂ ಸಂಚಿವ ಸಂಪುಟ ನಿರ್ಣಯಗಳು ಮತ್ತು ಅದರ ಮೇಲಿನ ಚರ್ಚೆಗಳ ವಿವರ ಸೇರಿದಂತೆ ಆರ್‍ಟಿಐ ಅರ್ಜಿಗಳಲ್ಲಿ ಒಟ್ಟು 28 ದಾಖಲಾತಿ ಪತ್ರಗಳ ಮಾಹಿತಿ ನೀಡುವಂತಿಲ್ಲ.

Translate »