ವಿಜೃಂಭಣೆಯ ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ವಿಜೃಂಭಣೆಯ ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

July 23, 2018

ಮೈಸೂರು: ಹಲವು ವರ್ಷಗಳ ನಂತರ ನಾಡಿನ ಎಲ್ಲಾ ಅಣೆಕಟ್ಟುಗಳು ಭರ್ತಿಯಾಗಿದ್ದು, ನಾಡು ಸಮೃದ್ಧಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಮೈಸೂರಿನ ಜನತೆ ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ದಸರಾ ಆಚರಿಸುವುದಕ್ಕೆ ಸಹಕಾರ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ, ನೂತನ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಮಳೆ ಪ್ರಮಾಣವೂ ಕಡಿಮೆಯಿತ್ತು. ಬರಗಾಲದಿಂದ ರೈತರು ತತ್ತರಿಸಿದ್ದರು. ಆದರೆ ಮೈಸೂರಿನಲ್ಲಿ ಕುಮಾರಪರ್ವ ಯಾತ್ರೆ ನಡೆಸಿದ ದಿನ ಆರಂಭವಾದ ಮಳೆ, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೂ ಸುರಿದ ಮಳೆ ಇಂದಿಗೂ ನಿಂತಿಲ್ಲ. ಕೆಆರ್‍ಎಸ್, ಕಬಿನಿ ಸೇರಿದಂತೆ ಬಹುತೇಕ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ತುಂಬಿ ತುಳುಕುತ್ತಿವೆ. ನದಿಗಳ ಮೂಲಕ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಬಿಡಲಾಗುತ್ತಿದೆ. ತಮಿಳುನಾಡು ಸರ್ಕಾರವೂ ಅಣೆಕಟ್ಟೆಯಿಂದ ಸಮುದ್ರಕ್ಕೆ ನೀರು ಬಿಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ನನ್ನ ಗೆಲುವು ನಿಮ್ಮ ಗೆಲುವೇ: ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನನಗೆ ಅಭೂತಪೂರ್ವ ಗೆಲುವು ತಂದು ಕೊಟ್ಟಿದ್ದೀರಿ. ನಾನೇ ಅಭ್ಯರ್ಥಿ ಎಂದು ಒಕ್ಕಲಿಗ ಸಮುದಾಯದ ಎಲ್ಲರೂ ಶ್ರಮಿಸಿ ಗೆಲುವು ತಂದುಕೊಟ್ಟಿದ್ದೀರಿ.

ಈ ಗೆಲುವು ನನ್ನ ಗೆಲುವಲ್ಲ. ಅದು ನಿಮ್ಮೆಲ್ಲರ ಗೆಲುವು ಎಂದು ಹೇಳಿದ ಅವರು, ಈ ಚುನಾವಣೆಯಲ್ಲಿ ಪಿರಿಯಾಪಟ್ಟಣದಿಂದ ಮಾಗಡಿವರೆಗೂ ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಹೆಚ್ಚಿನ ಪ್ರಮಾಣದಲ್ಲಿ ಜೆಡಿಎಸ್‍ಗೆ ಮತ ಹಾಕಿದ್ದಾರೆ. ಈ ಹಿಂದೆ ಯಾವಾಗಲೂ ಒಕ್ಕಲಿಗ ಸಮುದಾಯದ ಮತ ಇಷ್ಟು ಪ್ರಮಾಣದಲ್ಲಿ ಒಂದೇ ಪಕ್ಷಕ್ಕೆ ಚಲಾವಣೆಯಾಗಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರಿನ ಕಾರ್ಯಕ್ರಮವೇ ಪ್ರೇರಣೆ: ಕಳೆದ ವರ್ಷ ಮೈಸೂರಿನಲ್ಲಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷಗಳಲ್ಲಿರುವ ಒಕ್ಕಲಿಗ ಸಮುದಾಯ ನಾಯಕರುಗಳು ಪಾಲ್ಗೊಂಡಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ನಮ್ಮ ಸಮುದಾಯ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸರ್ಕಾರದ ವತಿಯಿಂದ ಕೆಂಪೇಗೌಡರ ಜಯಂತಿಯನ್ನು ಮಾಡಬೇಕು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಸಿದ್ದರಾಮಯ್ಯ ಅವರು ಕೆಂಪೇಗೌಡ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವುದಕ್ಕೆ ಕ್ರಮ ಕೈಗೊಂಡರಲ್ಲದೆ, ಪ್ರಾಧಿಕಾರ ರಚಿಸಿ 10 ಕೋಟಿ ರೂ ಅನುದಾನ ನೀಡಿದ್ದಾರೆ. ಅಧ್ಯಯನ ಪೀಠವನ್ನು ಸ್ಥಾಪಿಸಿದ್ದಾರೆ. ಇದಕ್ಕಾಗಿ ಅವರನ್ನು ನಾವು ಅಭಿನಂದಿಸುತ್ತೇವೆ ಎಂದು ಹೇಳಿದರು.

ಕಪ್ಪು ಚುಕ್ಕೆಯಿಲ್ಲದ ಆಡಳಿತ: ಪ್ರಧಾನಿಯಾಗಿ ಹೆಚ್.ಡಿ.ದೇವೇಗೌಡರು 11 ತಿಂಗಳು ನಡೆಸಿದ ಆಡಳಿತ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ, ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಆಡಳಿತಾವಧಿಯಲ್ಲಿ ಯಾವುದೆ ಕಪ್ಪುಚುಕ್ಕೆಯಿಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಶೋಭೆ ತರುವ ಸಂಗತಿಯಾಗಿದೆ ಎಂದರು.

ನಿಮ್ಮೊಂದಿಗೆ ನಾವಿದ್ದೇವೆ: ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಿವೇಶನಕ್ಕೆ ಮನವಿ ಸಲ್ಲಿಸಲಾಗಿದೆ. ಸಂಘ ಹಾಗೂ ಸಮುದಾಯದ ಏಳಿಗೆಗೆ ನಾವು ಸದಾ ಸಿದ್ಧರಿದ್ದೇವೆ. ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಾದ ಸಹಕಾರವನ್ನು ನಾವು ನೀಡುತ್ತೇವೆ. ಮೈಸೂರು ಭಾಗದಿಂದ ಶಾಸಕರಾಗಿ ಆಯ್ಕೆಯಾಗಿರುವ ಒಕ್ಕಲಿಗ ಸಮುದಾಯದ ಎಲ್ಲರೂ ಸಂಘದ ಏಳಿಗೆಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಆದರ್ಶವಾಗಿಟ್ಟುಕೊಳ್ಳಿ: ಇಂದು ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿಜ್ಞಾನ, ವೈದ್ಯಕೀಯ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಏಳಿಗೆ ಸಾಧಿಸುವತ್ತ ಗಮನ ಹರಿಸಬೇಕು. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ರಾಷ್ಟ್ರಕವಿ ಕುವೆಂಪು, ಹೆಚ್.ಡಿ.ದೇವೇಗೌಡ, ಸ್ವಾಮಿ ವಿವೇಕಾನಂದ, ಬುದ್ದ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹಾನ್ ನಾಯಕರನ್ನು ಆದರ್ಶವಾಗಿಟ್ಟುಕೊಂಡು ಶ್ರೇಯಸ್ಸು ಸಾಧಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ, ಶಾಸಕರುಗಳಾದ ಎಲ್.ನಾಗೇಂದ್ರ, ನರೇಂದ್ರ, ಕೆ.ಮಹದೇವು, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ನಿವೃತ್ತ ಅಭಿಯಂತರ ಎ.ಸಿ.ಲಿಂಗೇಗೌಡ, ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಮಹದೇವು, ಕೃಷಿಕ್ ಫೌಂಡೇಷನ್ ಸಂಸ್ಥೆಯ ಪ್ರೊ.ಬಿ.ಕೆ.ಶಿವಣ್ಣ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಪೃಥ್ವಿಕ್ ಶಂಕರ್, ಅರ್ಜುನ ಪ್ರಶಸ್ತಿ ಪುರಸ್ಕøತ ವಿ.ಆರ್.ರಘುನಾಥ್ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಮೈ-ಚಾ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮಹಾಲಿಂಗಂ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಪ್ರಶಾಂತ್‍ಗೌಡ, ಉಪಾಧ್ಯಕ್ಷ ಎಂ.ಎನ್.ಚಂದ್ರಶೇಖರ್, ಪದಾಧಿಕಾರಿಗಳಾದ ನಾಗರಾಜು, ಅಂಚಿ ಸಣ್ಣಸ್ವಾಮಿಗೌಡ, ಗೌರವ ಸದಸ್ಯ ಎನ್.ಪ್ರಸನ್ನ, ರಾಜ್ಯ ಸಂಘದ ನಿರ್ದೇಶಕ ಪಿ.ವೆಂಕಟೇಶ್ ಪಾಪಣ್ಣ, ಕೆ.ಮಾದೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »