ಪಂಜಿನ ಕವಾಯತಿನಲ್ಲಿ ವಿದ್ಯುನ್ಮಾನ ಬಾಣ-ಬಿರುಸು ಪ್ರದರ್ಶನಕ್ಕೆ ಚಿಂತನೆ
ಮೈಸೂರು

ಪಂಜಿನ ಕವಾಯತಿನಲ್ಲಿ ವಿದ್ಯುನ್ಮಾನ ಬಾಣ-ಬಿರುಸು ಪ್ರದರ್ಶನಕ್ಕೆ ಚಿಂತನೆ

July 23, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ಹೆಚ್ಚು ಆಕರ್ಷಕವಾಗಿ ಆಚರಿಸುವುದಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಬನ್ನಿಮಂಟಪದ ಕವಾಯತ್ ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತು ಪ್ರದರ್ಶನದಲ್ಲಿ ಜೂಡೋ, ಮಾರ್ಷಲ್ ಆಟ್ರ್ಸ್ ನೊಂದಿಗೆ ಹೊಗೆ ರಹಿತ ಪರಿಸರ ಸ್ನೇಹಿ ವಿದ್ಯುನ್ಮಾನ ಬಾಣ-ಬಿರುಸು ಪ್ರದರ್ಶಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಲೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ದಸರಾ ಮಹೋತ್ಸವದ ಆಕರ್ಷಣೆಗೆ ಹೊಸ ಆಲೋಚನೆಗಳೊಂದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಹೊಸ ಚಿಂತನೆ ಹಾಗೂ ಹೊಸತನದೊಂದಿಗೆ ಮಿತವ್ಯಯಕ್ಕೆ ಆದ್ಯತೆ ನೀಡಿ ಈ ಬಾರಿಯ ದಸರಾ ಆಚರಿಸಲು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಕಾರ್ಯಕಾರಿ ಸಮಿತಿ ಸಭೆ ನಡೆದ ನಂತರ ಉಪ ಸಮಿತಿಗಳನ್ನು ರಚಿಸಲಾಗುವುದು. ಆ ಮೂಲಕ ಸಿದ್ದತೆಗಳನ್ನು ಸಕಾಲಕ್ಕೆ ಮಾಡುವುದಕ್ಕೆ ಸಹಕಾರಿಯಾಗಲಿದೆ. ನವರಾತ್ರಿ ಆರಂಭಕ್ಕೂ ಮುನ್ನ ಯಾವುದೆ ಕೆಲಸಗಳು ತರಾತುರಿಯಲ್ಲಿ ನಡೆಯದಂತೆ ಕ್ರಮಕೈಗೊಳ್ಳಲಾಗುವುದು ಎಂದರು.

ದಸರೆಯ ಆಕರ್ಷಕ ಕೇಂದ್ರ ಬಿಂದುವಾದ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶಿಷ್ಟ ಹಾಗೂ ವಿಭಿನ್ನವಾಗಿರುವಂತೆ ಕ್ರಮ ಕೈಗೊಳ್ಳಬೇಕು. ನೃತ್ಯದೊಂದಿಗೆ ಜೂಡೋ, ಮಾರ್ಷಲ್ ಆಟ್ರ್ಸ್ ಬಳಸಿಕೊಂಡು ಕಾರ್ಯಕ್ರಮ ನಡೆಸಬಹುದಾಗಿದೆ. ಕಾಮನ್ ವೆಲ್ತ್ ಕ್ರೀಡೆ ಹಾಗೂ ಇನ್ನಿತರ ಕ್ರೀಡಾ ಕೂಟದಲ್ಲಿ ಫೈರೋ ಟೆಕ್ನೀಷಿಯನ್‍ಗಳು ಹೊಗೆ ರಹಿತ ಪರಿಸರ ಸ್ನೇಹಿ ವಿದ್ಯುನ್ಮಾನ ಪಟಾಕಿಗಳನ್ನು ಬಳಸುತ್ತಾರೆ. ಇದನ್ನು ಈ ಬಾರಿ ಪಂಜಿನ ಕವಾಯತ್‍ನಲ್ಲಿ ಬಳಸಿಕೊಳ್ಳಬಹುದು. ಈ ರೀತಿಯ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ದಸರಾ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರವಾಸಿಗರು ಭಾಗವಹಿಸಲು ಕಾರ್ಯಕ್ರಮವನ್ನು ರೂಪಿಸಿಕೊಂಡು ದಸರಾದ 15 ದಿನ ಮೊದಲು ಆಹ್ವಾನ ಪತ್ರಿಕೆಗಳು ಸಿದ್ಧಗೊಂಡು ವಿತರಣೆಯಾಗಬೇಕು. ಇದಕ್ಕಾಗಿ ಕಾರ್ಯಕ್ರಮ ಯೋಜನೆಗಳ ರೂಪು-ರೇಷುಗಳನ್ನು ಸಿದ್ಧಮಾಡಿಕೊಳ್ಳುವಂತೆ ಸಲಹೆ ನೀಡಿದರು.

ದಸರಾ ದೀಪಾಲಂಕಾರದ ಸಂದರ್ಭದಲ್ಲಿ ಮರಗಳಿಗೆ ಹಾಗೂ ಪಕ್ಷಿಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ದೀಪಾಲಂಕಾರದಿಂದ ಯಾವುದೇ ಜೀವಕ್ಕೂ ತೊಂದರೆಯಾಗದಂತೆ ಪರಿಸರ ಸ್ನೇಹಿ ದೀಪಾಲಂಕಾರ ಮಾಡಲಾಗುತ್ತದೆ. ದಸರಾ ಚಲನಚಿತ್ರೋತ್ಸವದಲ್ಲಿ ಕಳೆದ ಬಾರಿ ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಈ ಬಾರಿ ಕಾರ್ಯಾಗಾರಗಳನ್ನು ಆಯೋಜಿಸಿ, ಪರಿಣಿತರಿಂದ ಚಲನಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ ಹಾಗೂ ಛಾಯಗ್ರಾಹಣ ಮುಂತಾದ ವಿಷಯಗಳ ಬಗ್ಗೆ ತಿಳಿಸಿ ಎಂದರು.

ಸಭೆಯಲ್ಲಿ ಜಿ.ಪಂ ಸಿಇಓ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಡಿಸಿಪಿ ವಿಕ್ರಂ ಅಮ್ಟೆ, ಮುಡಾ ಆಯುಕ್ತ ಕಾಂತರಾಜು, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಡಿಸಿಎಫ್ ಸಿದ್ರಾಪಪ್ಪ ಚಳ್ಕಾಪುರೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Translate »