- ಸಿಸಿಬಿ ಪೊಲೀಸರಿಂದ ಹೆಬ್ಬಾಳ್‍ನಲ್ಲಿ ದಾಳಿ: ಯುವತಿ ರಕ್ಷಣೆ, ಓರ್ವ ಪಿಂಪ್ ಸೆರೆ, ಪರಾರಿಯಾಗಿರುವ ಸಹಚರನಿಗೆ ಶೋಧ
ಮೈಸೂರು: ವೇಶ್ಯಾವಾಟಿಕೆ ದಂಧೆ ವಿರುದ್ಧ ಎಡಮುರಿ ಕಟ್ಟಿರುವ ಪೊಲೀಸರು, ಕಾರ್ಯಾಚರಣೆ ಮುಂದುವರಿಸಿದ್ದು, ಮೈಸೂರಿನ ಹೆಬ್ಬಾಳಿನಲ್ಲಿ ಮನೆಯೊಂದರಲ್ಲಿ ಯುವತಿ ರಕ್ಷಿಸಿ, ಪಿಂಪ್ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಇಂದು ಮಧ್ಯಾಹ್ನ ದಾಳಿ ನಡೆಸಿದ ಇನ್ಸ್‍ಪೆಕ್ಟರ್ ರಾಜಶೇಖರ್ ಹಾಗೂ ಸಿಬ್ಬಂದಿ, ಹೆಬ್ಬಾಳು ಮುಖ್ಯರಸ್ತೆಯ ಮನೆಯೊಂದನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದ್ದನ್ನು ಭೇದಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದು, ಓರ್ವ ಪಿಂಪ್‍ನನ್ನು ಬಂಧಿಸಲಾಗಿದೆ. ಯುವತಿಯನ್ನು ರಕ್ಷಿಸಿರುವ ಪೊಲೀಸರು, 5 ಸಾವಿರ ರೂ.ನಗದು ಹಾಗೂ ಸ್ಥಳದಲ್ಲಿ ದೊರೆತ ಇತರ ವಸ್ತುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶನಿವಾರ ಹೆಬ್ಬಾಳಿನ 80ಅಡಿ ರಸ್ತೆ ಹಾಗೂ ಹೂಟಗಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ನೆಪದಲ್ಲಿ ಯುವತಿಯರನ್ನಿಟ್ಟುಕೊಂಡು ವೇಶ್ಯಾ ವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿದ ಬೆನ್ನಲ್ಲೇ ಸಿಸಿಬಿ ಪೊಲೀಸರು ಇಂದೂ ಕಾರ್ಯಾಚರಣೆ ಮುಂದುವರಿಸಿ ರುವುದರಿಂದ ಬ್ಯೂಟಿ ಪಾರ್ಲರ್, ಸ್ಪಾಗಳಂತಹ ಉದ್ದಿಮೆದಾರರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರ ಕಾರ್ಯಾಚರಣೆ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳೂ ಸ್ಪಾಗಳ ಮೇಲೆ ಸೋಮವಾರ ದಾಳಿ ನಡೆಸಿದ್ದು, ಉದ್ದಿಮೆ ರಹದಾರಿ ಪಡೆದು ಬೇರೆ ಉದ್ಯಮ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.