ಪ್ರಜ್ವಲ್ ಪ್ರಚಾರ ಜೋರು, ಬಿಜೆಪಿ ಅಭ್ಯರ್ಥಿ ಯಾರು?
ಹಾಸನ

ಪ್ರಜ್ವಲ್ ಪ್ರಚಾರ ಜೋರು, ಬಿಜೆಪಿ ಅಭ್ಯರ್ಥಿ ಯಾರು?

March 15, 2019

ಹಾಸನ: ತಂಬಾಕು, ಕಾಫಿ, ಆಲೂಗಡ್ಡೆ, ಗರ್ಕಿನ್ ಸೌತೆಯ ಕೃಷಿ ಕ್ಷೇತ್ರದಲ್ಲೀಗ `ಮತ’ ಕುಯಿಲಿಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಬೇಲೂರು, ಹಳೇಬೀಡಿನ ಚನ್ನಕೇಶವ ದೇವಾಲಯ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಗೊರೂರಿನ ಹೇಮಾವತಿ ಅಣೆಕಟ್ಟೆ, ಸಕಲೇಶ ಪುರದ ಮುಂಜರಾಬಾದ್ ಕೋಟೆ ಪ್ರವಾಸಿಗರನ್ನು ಸೆಳೆಯುತ್ತಿದ್ದರೆ, ರಾಜಕಾರಣಿಗಳ ಚಿತ್ತವೆಲ್ಲಾ ಹಳ್ಳಿ-ನಗರಗಳತ್ತ ಕೇಂದ್ರೀಕೃತವಾಗಿರುವುದು ಸದ್ಯ ಗಮನ ಸೆಳೆಯುತ್ತಿರುವ ಸಂಗತಿ.

ಅಲ್ಪಾವಧಿಗಾದರೂ ದೇಶಕ್ಕೆ ಪ್ರಧಾನಿಯನ್ನು ನೀಡಿದ ದೇಶದ ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಲ್ಲೀಗ ರಾಜಕೀಯದ ಕಾವು ಹೆಚ್ಚಲಾರಂ ಭಿಸಿದೆ. ಸದ್ಯ ಮೈತ್ರಿ ಪಕ್ಷಗಳ ಪರವಾಗಿ ಜೆಡಿಎಸ್ ಮಾತ್ರ ಅಭ್ಯರ್ಥಿಯನ್ನು ಘೋಷಿಸಿದ್ದರೆ, ಬಿಜೆಪಿ ಇನ್ನಷ್ಟೇ ಪಟ್ಟಿ ಬಿಡುಗಡೆ ಮಾಡಬೇಕಿದೆ. ಮಾ.18 ರಂದು ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಹೊರ ಬೀಳುವ ಸಾಧ್ಯತೆ ಇದೆ.

ತಾತನ ತವರು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿ ರುವ ಪ್ರಜ್ವಲ್ ರೇವಣ್ಣ, ಮೂಡಲಹಿಪ್ಪೆಯಿಂದಲೇ ಚುನಾವಣಾ ಪ್ರಚಾರವನ್ನು ಮೊದಲಿಟ್ಟಿದ್ದಾರೆ. ತಾತ ಹೆಚ್.ಡಿ.ದೇವೇಗೌಡ ಅವರ ಆಶೀರ್ವಾದ ಪಡೆದು ಭಾರೀ ಮಹತ್ವಾಕಾಂಕ್ಷೆಯಿಂದಲೇ ಕಣಕ್ಕಿಳಿ ದಿರುವ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನದ ಮತದಾರರು ಹೇಗೆ ಸ್ಪಂದಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇನ್ನೊಂದೆಡೆ, ಕಾಂಗ್ರೆಸ್ ಮನೆಯಿಂದ ಅದಾಗಲೇ ಒಂದು ಕಾಲು ಹೊರಗಿಟ್ಟಿರುವ ಮಾಜಿ ಸಚಿವ ಎ.ಮಂಜು, ಬಿಜೆಪಿ ಸೇರುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ‘ಕುಟುಂಬ ರಾಜಕಾರಣ ಕೊನೆಗೊ ಳ್ಳಲಿ’ ಎಂಬ ಘೋಷಣೆಯೊಂದಿಗೇ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಕುಡಿಗೆ ಸವಾಲೊಡ್ಡಲು ಮುಂದಾಗಿರುವ ಮಂಜು ಅವ ರೆದುರಿಗೆ ಜಾತಿ ರಾಜಕಾರಣದ ಪ್ರಯೋಗಶಾಲೆ ಯಾದ ಹಾಸನ ಕ್ಷೇತ್ರದಲ್ಲಿ ಹಲವು ಸವಾಲುಗಳು ಎದುರಾಗಲಿವೆ. ಅವೆಲ್ಲವೂ ಮುಂಜಾನೆಯ ಮಂಜಿ ನಂತೆ ಸುಲಭಕ್ಕೆ ಕರಗುತ್ತವೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿಯೇ ಇದ್ದರೂ, ಬಿಜೆಪಿಯಿಂದ ಸ್ಪರ್ಧಿಸಿದರೂ ಕಾಂಗ್ರೆಸ್ ಮತ ಗಳೂ ತಮಗೇ ಒಲಿಯಲಿವೆ ಎಂಬ ಬಲವಾದ ನಂಬಿಕೆಯೊಂದಿಗೇ ಮಂಜು ಅವರು ಸ್ಪರ್ಧೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗುರು ವಾರ ಅರಕಲಗೂಡಿನಲ್ಲಿ ತಮ್ಮ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನೂ ನಡೆಸಿ ದ್ದಾರೆ. ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಜೊತೆ 3 ಸುತ್ತಿನ ಮಾತುಕತೆ ಯನ್ನೂ ಮಂಜು ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಯಷ್ಟೇ ಮೈಸೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಅವರನ್ನೂ ಭೇಟಿ ಮಾಡಿದ್ದರು. ಅವರು ಟಿಕೆಟ್ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಇತಿಹಾಸದ ಮೆಲುಕು: 2014ರ ಲೋಕಸಭೆ ಚುನಾವಣೆಯಲ್ಲಿ ಎ.ಮಂಜು ಅವರು ಎಚ್.ಡಿ. ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದರು. ಗೌಡರ ಗೆಲುವಿನ ಅಂತರವನ್ನು 1.60 ಲಕ್ಷ ಮತಗಳಿಗೆ ಇಳಿಸಿದ್ದರು. 2018ರ ವಿಧಾನಸಭೆ ಚುನಾವಣೆ ಯಲ್ಲಿ ಅರಕಲಗೂಡಿನಲ್ಲಿ ಸೋಲುಂಡಿರುವ ಅವರು, ಮರಳಿ ರಾಜಕೀಯದ ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿದ್ದಾರೆ.

ಮಂಜು ಅವರ ಮಾತೃ ಪಕ್ಷ ಬಿಜೆಪಿ. ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು. 1999ರಲ್ಲಿ ಅರಕಲ ಗೂಡು ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದು ಶಾಸನಸಭೆ ಪ್ರವೇಶಿಸಿದ್ದರು. ನಂತರ ಎಸ್.ಎಂ. ಕೃಷ್ಣ ಅವರು ಮಂಜು ಅವರನ್ನು ಕಾಂಗ್ರೆಸ್‍ಗೆ ಸೆಳೆದುಕೊಂಡಿದ್ದರು. ಮಂಜು ಪಕ್ಷ ತ್ಯಜಿಸಿದ ಬಳಿಕ ಅರಕಲಗೂಡು ಕ್ಷೇತ್ರದಲ್ಲಿ ಬಿಜೆಪಿ ಬಲಗುಂದಿತ್ತು. ಸದ್ಯ ಎ.ಮಂಜು ಪಕ್ಷಕ್ಕೆ ಮರಳಿದರೆ ಅನುಕೂಲ ವಾಗುತ್ತದೆ ಎನ್ನುವುದು ಬಿಜೆಪಿ ರಾಜ್ಯ ನಾಯಕರ ಲೆಕ್ಕಾಚಾರ. ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಮತ್ತು ಬೆಂಬಲಿಗರು ಎ.ಮಂಜು ಸೇರ್ಪಡೆ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಸವಾಲು ಜೋರು: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ ಇಂಜಿ ನಿಯರಿಂಗ್ ಪದವೀಧರ. ತಾತ ಎಚ್.ಡಿ.ದೇವೇ ಗೌಡ, ತಂದೆ ಎಚ್.ಡಿ.ರೇವಣ್ಣ ಜತೆ ಓಡಾಡು ತ್ತಲೇ ಹಾಸನ ಜಿಲ್ಲೆಯಲ್ಲಿ ಕಾರ್ಯಕರ್ತರ ಒಡ ನಾಟ ಇಟ್ಟುಕೊಂಡಿದ್ದಾರೆ. ಅಜ್ಜ, ಅಪ್ಪ-ಅಮ್ಮನ ಬಲವಾದ ಬೆಂಬಲ, ದೊಡ್ಡ ಕಾರ್ಯಕರ್ತರ ಪಡೆಯ ಸಹಕಾರದಲ್ಲಿ ಗೆಲುವಿನ ಆಶಾ ವಾದದಲ್ಲಿದ್ದಾರೆ.

ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನ ಸಭಾ ಕ್ಷೇತ್ರಗಳಿದ್ದು, ಹೊಳೆನರಸೀಪುರ, ಸಕಲೇಶ ಪುರ, ಬೇಲೂರು, ಅರಸೀಕೆರೆ, ಚನ್ನರಾಯ ಪಟ್ಟಣ, ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ರಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿ ದ್ದಾರೆ. ಬಿ.ಬಿ.ಶಿವಪ್ಪ ಅವರ ಕಾಲದಲ್ಲಿ ಬಿಜೆಪಿ ಸಕಲೇಶಪುರದಲ್ಲಿ ಬಹಳಷ್ಟು ಬಾರಿ ಗೆಲುವು ಸಾಧಿಸಿದ್ದನ್ನು ನೆನಪಿಸಿಕೊಳ್ಳಬೇಕಿದೆ.

ಜೆಡಿಎಸ್ ಬಲಿಷ್ಠವಾಗಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಜಿಲ್ಲೆಯಲ್ಲಿ ಜೆಡಿಎಸ್ 6 ಶಾಸಕರು, ಜಿಲ್ಲಾ ಪಂಚಾ ಯಿತಿ, ನಗರಸಭೆ ಸೇರಿದಂತೆ ಎಲ್ಲಾ ಹಂತದ ಲ್ಲಿಯೂ ಮೇಲುಗೈ ಸಾಧಿಸಿದೆ. ಕಾಂಗ್ರೆಸ್‍ನ ಒಬ್ಬರೂ ಶಾಸಕರಿಲ್ಲದಿರುವುದು ಆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣ ವಾಗಿದೆ. ಕಾಂಗ್ರೆಸ್‍ನ ಪರಂಪರಾಗತ ಮತಗಳು ಈ ಬಾರಿ ಯಾವ ಕಡೆಗೆ ವಾಲಲಿವೆ ಎಂಬುದು ಚುನಾ ವಣೆಯ ದಿಕ್ಕುದೆಸೆ ಬದಲಿಸಬಲ್ಲದಾಗಿದೆ. ಮೇ 23ರ ಮಧ್ಯಾಹ್ನ ಇದಕ್ಕೆಲ್ಲ ಸ್ಪಷ್ಟ ಉತ್ತರ ದೊರೆಯಲಿದೆ.

Translate »