ಮಾ.25ರಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ನಾಮಪತ್ರ ಸಲ್ಲಿಕೆ
ಮೈಸೂರು

ಮಾ.25ರಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ನಾಮಪತ್ರ ಸಲ್ಲಿಕೆ

March 22, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಮಾರ್ಚ್ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬುಧವಾರವಷ್ಟೇ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆಯೇ ಪ್ರತಾಪ್‍ಸಿಂಹ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಮಾರ್ಚ್ 25ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕ ಸಭೆ ನಡೆಸಿ, ಅಲ್ಲಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವರು. ಅಂದು ಶಾಸಕರೂ ಆದ ಬಿಜೆಪಿ ನಾಯಕ ಶ್ರೀರಾಮುಲು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದು, ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು ಎಂದು ಪ್ರತಾಪ್‍ಸಿಂಹ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ತಾವು ಸಂಸದನಾಗಿ 5 ವರ್ಷದಲ್ಲಿ ಮಾಡಿದ ಜನಪರ ಕಾರ್ಯಗಳು, ಕೇಂದ್ರ ಸರ್ಕಾ ರದ ಅನುದಾನದಡಿ ಮೈಸೂರು ಭಾಗದಲ್ಲಿ ಅನುಷ್ಠಾನಗೊಳಿಸಿದ ಯೋಜ ನೆಗಳು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ನೀಡಿದ ಪ್ರಗತಿಪರ ಯೋಜನೆಗಳನ್ನು ಮುಂದಿಟ್ಟು ಜನರ ಬಳಿ ಮತಯಾಚಿಸುತ್ತೇನೆ ಎಂದು ನುಡಿದರು.

ಮೈಸೂರಿನಿಂದ ಉಡಾನ್ ಯೋಜನೆಯಡಿ ದೇಶದ ಹಲವು ನಗರಗಳಿಗೆ ವಿಮಾನ ಸಂಪರ್ಕ ಸಾಧಿಸಿರುವುದು, ಮೈಸೂರಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಸ್ಥಾಪನೆ, ಹೆಚ್ಚುವರಿ ರೈಲು ಸಂಪರ್ಕ ಬೆಂಗಳೂರು-ಮೈಸೂರು ನಡುವಿನ ಜೋಡಿ ಹಳಿ ಮಾರ್ಗ ಯೋಜನೆ ಪೂರ್ಣ, ಬೆಂಗಳೂರು-ಮೈಸೂರು ಹೆದ್ದಾರಿಯನ್ನು 10 ಪಥದ ರಸ್ತೆಯಾಗಿ ಅಭಿವೃದ್ಧಿ ಸೇರಿದಂತೆ ಮೈಸೂರು- ಕೊಡಗು ಭಾಗಗಳಿಗೆ ಹಲವು ಯೋಜನೆಗಳನ್ನು ಕೊಟ್ಟಿರುವ ಪ್ರಧಾನಿಯವರ ಪ್ರಸಂಸನೀಯ ಕೆಲಸಗಳು ತಮಗೆ ಶ್ರೀರಕ್ಷೆಯಾಗಲಿದೆ. ತಮ್ಮ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಅನುಕೂಲ ವಾಗುವಂತೆ ಕೆಲಸ ಮಾಡಿರುವುದರಿಂದ ಹಾಗೂ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದು ನರೇಂದ್ರಮೋದಿ ಅವರ ನೇತೃತ್ವದಲ್ಲಿ ಭವಿಷ್ಯದ ಭಾರತ ನಿರ್ಮಿಸಲು ಜನರು ಬೆಂಬಲಿಸುತ್ತಾರೆಂಬ ನಂಬಿಕೆ, ವಿಶ್ವಾಸವಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

Translate »