ವಾರಣಾಸಿಯಲ್ಲೇ ಮೋದಿ ಸ್ಪರ್ಧೆ
ಮೈಸೂರು

ವಾರಣಾಸಿಯಲ್ಲೇ ಮೋದಿ ಸ್ಪರ್ಧೆ

March 22, 2019

ನವದೆಹಲಿ: ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಶತ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಲೋಕಸಭಾ ಚುನಾವಣೆಗೆ ಕರ್ನಾ ಟಕದ 21 ಕ್ಷೇತ್ರ ಸೇರಿದಂತೆ ದೇಶದ 184 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಬಿಜೆಪಿಯ ಭೀಷ್ಮ ಎಂದೇ ಕರೆಯಲ್ಪಡುವ 91 ವರ್ಷದ ಎಲ್.ಕೆ.ಅಡ್ವಾಣಿ ಅವರ ಸ್ಪರ್ಧೆಗೆ ಅವಕಾಶ ನಿರಾಕರಿಸ ಲಾಗಿದ್ದು, ಅವರು ಸ್ಪರ್ಧಿಸುತ್ತಿದ್ದ ಗುಜರಾತ್‍ನ ಗಾಂಧಿ ನಗರ ಕ್ಷೇತ್ರವನ್ನು ಪ್ರಧಾನಿ ಬಲಗೈ ಭಂಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡಲಾ ಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಹೆಸರು ಮೊದಲ ಪಟ್ಟಿಯಲ್ಲಿಲ್ಲ. ಮತ್ತೋರ್ವ ಕೇಂದ್ರ ಸಚಿವ, ಪ್ರಭಾವಿ ಮುಖಂಡ ಅರುಣ್ ಜೇಟ್ಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದೇ ಇರುವುದು ಊಹಾ-ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಮುಂದಿನ ಪಟ್ಟಿಗಳಲ್ಲಿ ಅವರು ಸ್ಥಾನ ಪಡೆಯಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು 7ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ವಾರಣಾಸಿ ಯಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ ಕೇಂದ್ರ ಸಚಿವರು ಗಳಾದ ರಾಜನಾಥ್ ಸಿಂಗ್ ಲಕ್ನೋದಿಂದ, ನಾಗ್ಪುರ ದಿಂದ ನಿತಿನ್ ಗಡ್ಕರಿ, ಗಾಜಿಯಾಬಾದ್‍ನಿಂದ ವಿ.ಕೆ. ಸಿಂಗ್, ಮಥುರಾದಿಂದ ಚಿತ್ರನಟಿ ಹೇಮಮಾಲಿನಿ, ಉನ್ನಾವೋದಿಂದ ಸಾಕ್ಷಿ ಮಹಾರಾಜ್ ಸ್ಪರ್ಧಿಸಲಿದ್ದಾರೆ.

ಕೇಂದ್ರ ಸಚಿವೆ ಸ್ಮ್ರಿತಿ ಇರಾನಿ ಅವರು ಕಳೆದ ಚುನಾ ವಣೆಯಂತೆ ಈ ಬಾರಿಯೂ ಅಮೇಥಿಯಿಂದ ಸ್ಪರ್ಧೆ ಗಿಳಿಯಲಿದ್ದಾರೆ. ಕೇಂದ್ರ ಸಚಿವರುಗಳಾದ ಹೆಚ್.ರಾಜ ತಮಿಳುನಾಡಿನ ಶಿವಗಂಗೆಯಿಂದ, ಪೊನ್ ರಾಧಾ ಕೃಷ್ಣನ್ ಕನ್ಯಾಕುಮಾರಿಯಿಂದ,
ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರ ರಾಜನ್ ತೂತುಕುಡಿಯಿಂದ ಸ್ಪರ್ಧಿಸಲಿದ್ದಾರೆ.

ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಮಂಡ್ಯ ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ, ಕೋಲಾರ, ಕೊಪ್ಪಳ, ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರಿದ ಮಾಜಿ ಸಚಿವ ಎ.ಮಂಜು ಅವರಿಗೆ ಹಾಸನದಿಂದ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ (ಅದು ಇನ್ನೂ ಅಂಗೀಕಾರವಾಗಿಲ್ಲ), ಉಮೇಶ್ ಜಾಧವ್‍ಗೆ ಮಲ್ಲಿಕಾರ್ಜುನ ಖರ್ಗೆ ಎದುರು ಕಲಬುರಗಿಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಮಾಜಿ ಸಚಿವ, ರಾಜಕೀಯ ಮುತ್ಸದ್ಧಿ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಚಾಮರಾಜ ನಗರದಿಂದ, ರಮೇಶ್ ಜಾರಕಿ ಹೊಳಿ ಸಂಬಂಧಿಕರಾದ ದೇವೇಂದ್ರಪ್ಪ ಅವರಿಗೆ ಬಳ್ಳಾರಿಯಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದ್ದು, ಈ ನಾಲ್ವರು ಹೊಸ ಮುಖಗಳಾಗಿದ್ದು, ಇನ್ನುಳಿದಂತೆ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಪ್ರತಾಪ್ ಸಿಂಹ ಮೈಸೂರು-ಕೊಡಗಿನ ಕ್ಷೇತ್ರದಲ್ಲಿ ಪುನರಾಯ್ಕೆಗೆ ಸೆಣಸಲು ಸಜ್ಜಾಗಿದ್ದಾರೆ.

Translate »