ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ನಾಮಪತ್ರ ಸಲ್ಲಿಕೆ
ಮೈಸೂರು

ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ನಾಮಪತ್ರ ಸಲ್ಲಿಕೆ

March 26, 2019

ಮೈಸೂರು: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರು ನಾಮಪತ್ರ ಸಲ್ಲಿಕೆಗೆ ಇನ್ನೊಂದು ದಿನ ಬಾಕಿ ಇರುವಂತೆ, ಇಂದು ನಾಮಪತ್ರಗಳನ್ನು ಸಲ್ಲಿಸಿದರು.

ಬೆಳಿಗ್ಗೆ 11.50 ಗಂಟೆ ವೇಳೆಗೆ ಮೈಸೂ ರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಾಪ್‍ಸಿಂಹ, ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಹಾಗೂ ಎಸ್.ಎ.ರಾಮದಾಸ್ ಅವರೊಂದಿಗೆ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಂತರ ಪತ್ನಿ ಶ್ರೀಮತಿ ಅರ್ಪಿತಾ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಗೋ. ಮಧುಸೂದನ್ ಹಾಗೂ ತೋಂಟ ದಾರ್ಯ ಅವರೊಂದಿಗೆ ಪ್ರತಾಪ್‍ಸಿಂಹ ಮತ್ತೊಂದು ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರತಾಪ್‍ಸಿಂಹ ಅವರಿಗೆ ಚಾಮ ರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಭ ಕೋರಿದರು.


ಸಿ.ಹೆಚ್.ವಿಜಯಶಂಕರ್: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ ಇಂದು ಮಧ್ಯಾಹ್ನ 1.30 ಗಂಟೆ ವೇಳೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್‍ಸೇಠ್, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ವೀಣಾ ಅಚ್ಚಯ್ಯ ಅವರು ಉಮೇದುವಾರಿಕೆ ಸಲ್ಲಿ ಸಲು ಸಿ.ಹೆಚ್.ವಿಜಯಶಂಕರ್ ಅವರಿಗೆ ಸಾಥ್ ನೀಡಿದರು. ಪ್ರತಾಪ್‍ಸಿಂಹ ಮತ್ತು ಸಿ.ಹೆಚ್.ವಿಜಯಶಂಕರ್ ಅವರು, ಅರಮನೆ ಉತ್ತರ ದ್ವಾರದಲ್ಲಿರುವ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ದಾವಿಸಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಆ ಮೂಲಕ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಇಂದಿನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

ಭಾರೀ ಭದ್ರತೆ : ಮೆರವಣಿಗೆ ಸ್ಥಳ ಹಾಗೂ ನಾಮಪತ್ರ ಸಲ್ಲಿಸುವ ಜಿಲ್ಲಾಧಿಕಾರಿ ಕಚೇರಿ ಬಳಿ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತು ರಾಜ್ ಅವರ ನೇತೃತ್ವದಲ್ಲಿ ನೂರಾರು ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Translate »