ಹಾಸನ: ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಅರಸೀ ಕೆರೆ ತಾಲೂಕಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗಮನ ಸೆಳೆದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅರಸೀಕೆರೆ ತಾಲೂಕಿ ನಲ್ಲಿ ಜಲ ಮರುಪೂರಣ ಕಾರ್ಯಕ್ಕೆ ಹೆಚ್ಚು ಗಮನ ಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಂತರ್ಜಲ ವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣದ ವರದಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂತರ್ಜಲ ಬಳಕೆ ಮಾಡುವ 43 ತಾಲೂಕುಗಳನ್ನು ಗುರುತಿಸಲಾಗಿದೆ. ಅದರಲ್ಲಿ ಜಿಲ್ಲೆಯ ಅರಸೀಕೆರೆ ತಾಲೂಕು ಸಹ ಅಂತರ್ಜಲವನ್ನು ಅತಿಯಾಗಿ ಬಳಸುವ ತಾಲೂಕಾಗಿದೆ. ಹಾಗಾಗಿ ತಾಲೂಕಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸೂಕ್ತ ರೀತಿ ನಿಯಂತ್ರಿ ಸಬೇಕಿದೆ. ಅಧಿಸೂಚಿತ ಪ್ರದೇಶದ ತಾಲೂಕಿನಲ್ಲಿ ಯಾವುದೇ ಉದ್ದೇಶ ಕ್ಕಾಗಿಯಾದರೂ ಬಾವಿ, ಕೊಳವೆ ಬಾವಿ ಕೊರೆದು ಅಂತರ್ಜಲ ಹೊರ ತೆಗೆಯಲು ಮತ್ತು ಬಳಸಲು ನಿಯೋಜಿತ ಸಮಿತಿ ಗಳಿಂದ ಅನುಮತಿ ಪಡೆಯುವುದು ಕಡ್ಡಾಯ ವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅರಸೀಕೆರೆ ತಾಲೂಕಿ ನಲ್ಲಿ ಟಾಸ್ಕ್‍ಪೋರ್ಸ್ 1 ಮತ್ತು 2ರಲ್ಲಿ ಅತಿ ತುರ್ತಾಗಿ ಕುಡಿಯುವ ನೀರಿನ ಅಗತ್ಯ ಇದೆ ಎಂಬ ಹಿನ್ನೆಲೆಯಲ್ಲಿ ಈಗಾಗಲೇ ಕೊರೆಸಲಾಗಿರುವ 199 ಕೊಳವೆ ಬಾವಿಗಳಿಗೆ ಘಟನೋತ್ತರ ಮಂಜೂರಾತಿ ನೀಡಲಾಯಿತು.
ಕುಡಿಯುವ ನೀರಿಗಾಗಿ ಮೈಸೂರು ಮಿನರಲ್ಸ್ ಸಂಸ್ಥೆ ಕೋರಿರುವ ಕೊಳವೆ ಬಾವಿಗಳಿಗೆ ಷರತ್ತುಬದ್ದ ಅನುಮತಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದರು.
ತಾಲೂಕಿನಲ್ಲಿ ಅನುಮತಿ ನವೀಕರಿಸದ ಕೊಳವೆಬಾವಿ ಕೊರೆವ ಯಂತ್ರಗಳ ಕಾರ್ಯಾ ಚರಣೆ ಬಗ್ಗೆ ನಿಗಾ ಇಡಬೇಕು. ಖಾಸಗಿ ಯವರು ಯಾರೂ ತಾಲೂಕು ಆಡಳಿತದ ಗಮನಕ್ಕೆ ಬಾರದಂತೆ ಕೊಳವೆಬಾವಿ ಕೊರೆ ಯದಂತೆ ನಿಯಂತ್ರಿಸÀಬೇಕು ಎಂದರು.
ಜಿಪಂನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರ ಕಾರ್ಯ ಪಾಲಕ ಆನಂದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಸುಧಾ ಮತ್ತಿತರರು ಸಭೆಯಲ್ಲಿದ್ದರು.