ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜಾ ಸಿದ್ಧತೆ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜಾ ಸಿದ್ಧತೆ

June 30, 2019

ಮೈಸೂರು,ಜೂ.29(ವೈಡಿಎಸ್)-ಆಷಾಢ ಶುಕ್ರವಾರಗಳಲ್ಲಿ ಅಮ್ಮನವರ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವು ದರಿಂದ ಯಾವುದೇ ಅನಾನುಕೂಲವಾಗದಂತೆ ಕ್ರಮ ವಹಿಸಬೇಕು. ಜತೆಗೆ ವಿಐಪಿಗಳು ಬರುತ್ತಾ ರೆಂದು ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಚಾಮುಂಡಿಬೆಟ್ಟದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಷಾಢ ಶುಕ್ರವಾರಗಳ ಪೂಜಾ ಸಿದ್ಧತಾ ಪೂರ್ವಭಾವಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿ ಗಳಿಂದ ಮಾಹಿತಿ ಪಡೆದು, ನಂತರ ಮಾತನಾಡಿದರು.

ನಾನು ಕ್ಯೂನಲ್ಲಿ ಬರುತ್ತೇನೆ: ಆಷಾಢ ಶುಕ್ರವಾರಗಳು ವಿಐಪಿಗಳು ಬರುತ್ತಾರೆಂದು ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ನಾವೂ ಬೇಕಾದರೆ ಸರತಿ ಸಾಲಿನಲ್ಲಿ(ಕ್ಯೂ) ನಿಂತು ಅಮ್ಮನ ದರ್ಶನ ಪಡೆಯು ತ್ತೇವೆ. ನಮ್ಮದೇನು ಅಭ್ಯಂತರವಿಲ್ಲ. ಆದರೆ ಸಾರ್ವಜ ನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗ ಬಾರದು. ಜೊತೆಗೆ ದಸರೆಗೂ ಮುನ್ನ ಚಾಮುಂಡಿ ಬೆಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ ಅವರು, ನಮ್ಮ ಇಲಾಖೆಯಿಂದ ಏನೇ ಕೆಲಸಗಳು ಆಗಬೇಕಿದ್ದರೂ ಶೀಘ್ರ ಮಾಡಿಕೊಡಬೇಕು ಎಂದರು.

ಮಹಿಳೆಯರಿಗೆ ಪ್ರತ್ಯೇಕ ಕ್ಯೂ: ಆಷಾಢ ಶುಕ್ರ ವಾರಗಳಂದು ಅಮ್ಮನ ದರ್ಶನ ಪಡೆಯಲು ಮಹಿಳೆಯರು ಮಕ್ಕಳೊಂದಿಗೆ ಆಗಮಿಸಿರುತ್ತಾರೆ. ಹಾಗಾಗಿ ಅವರಿಗೆ ತೊಂದರೆಯಾಗದಂತೆ ಪುರು ಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲಿನ(ಕ್ಯೂ) ವ್ಯವಸ್ಥೆ ಮಾಡಬೇಕು. ಪ್ರತಿ 10 ಅಡಿಗೆ ಓರ್ವ ಪೊಲೀಸರನ್ನು ನೇಮಿಸಬೇಕು. ಸೂಕ್ತ ಭದ್ರತಾ ದೃಷ್ಟಿಯಿಂದ ಪೊಲೀಸರ ಅವಶ್ಯಕತೆಯಿದ್ದಲ್ಲಿ ಬೇರೆ ಜಿಲ್ಲೆಗಳ ಪೊಲೀಸರನ್ನು ಕರೆಸಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದರು.

ಹೊಸ ಬಸ್ ವ್ಯವಸ್ಥೆ: ಕೆಎಸ್‍ಆರ್‍ಟಿಸಿಯವರು ಚಾಮುಂಡಿಬೆಟ್ಟಕ್ಕೆ ಹಳೇ ಬಸ್‍ಗಳನ್ನು ಹಾಕದೆ ಹೊಸ ಬಸ್‍ಗಳನ್ನೇ ಹಾಕಬೇಕು. ಹಳೇ ಬಸ್‍ಗಳನ್ನು ಹಾಕಿದರೆ ಕೆಟ್ಟು ನಿಲ್ಲುವ ಅಥವಾ ಅನಾಹುತಗಳಾ ಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಹೊಸ ಬಸ್‍ಗಳಿಗೆ ಅನುಭವಿ ಚಾಲಕನನ್ನು ನೇಮಿಸಬೇಕು. ತುರ್ತು ಸಂದರ್ಭಕ್ಕಾಗಿ ಬೆಟ್ಟದ ರಸ್ತೆಯ 3 ಸ್ಥಳಗಳಲ್ಲಿ ಪೊಲೀಸ್ ವಾಹನಗಳ ನಿಯೋಜಿಸಬೇಕು ಎಂದು ಹೇಳಿದರು.

ಲಕ್ಷ ನೀರಿನ ಪ್ಯಾಕೆಟ್ ವ್ಯವಸ್ಥೆ: ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಚಾಮುಂಡಿ ಬೆಟ್ಟ ಮತ್ತು ಹೆಲಿಪ್ಯಾಡ್‍ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೀರನ್ನು ಟ್ಯಾಂಕರ್ ಅಥವಾ ನಲ್ಲಿಗಳ ಮೂಲಕ ಹರಿಸುವುದರಿಂದ ಗಲೀಜಾ ಗುತ್ತದೆ. ಹಾಗಾಗಿ ಪಾಕೆಟ್ ನೀರಿನ ವ್ಯವಸ್ಥೆ ಮಾಡಬೇಕು. 1 ಲಕ್ಷ ನೀರಿನ ಪಾಕೆಟ್ ಮಾಡಿ ಕೊಡುವಂತೆ ಡೈರಿಯವರಿಗೆ ತಿಳಿಸುತ್ತೇನೆ ಎಂದರು.

ಮುರಾರ್ಜಿ ಮಾದರಿಯಲ್ಲೇ ಸೌಲಭ್ಯ: ಮುರಾರ್ಜಿದೇಸಾಯಿ ಮಾದರಿಯಲ್ಲೇ ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿನಿಯರಿಗೆ ಕಾಲೇಜು ನಿರ್ಮಿಸಬಹುದಾ ಎಂಬುದರ ಬಗ್ಗೆ ಉನ್ನತ ಶಿಕ್ಷಣ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಚರ್ಚಿಸಿ ಸರ್ಕಾರದ ಗಮನಕ್ಕೆ ತರಬೇಕು. ಜತೆಗೆ ಮೈಸೂ ರಲ್ಲಿ ಒಬಿಸಿ ಹಾಸ್ಟೆಲ್‍ಗಳಿಗೆ ಬೇಡಿಕೆ ಇದ್ದು, ಇನ್ನು 5 ಹಾಸ್ಟೆಲ್ ನಿರ್ಮಾಣ ಮಾಡಲು ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೂ ತಿಳಿಸಿದರು.

ಸಿಎಸ್‍ಆರ್ ಫಂಡ್‍ನಿಂದ ಕಂಪ್ಯೂಟರ್: ಉದ್ಯಮಿಗಳಿಂದ ಸಿಎಸ್‍ಆರ್ ಫಂಡ್ ತೆಗೆದು ಕೊಂಡು ಕಾಲೇಜು ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ ಗಳನ್ನು ಕೊಡಿಸಬೇಕು. ಮುಡಾ ವತಿಯಿಂದ ಹಾಸ್ಟೆಲ್ ನಿರ್ಮಾಣ, ಕಂಪ್ಯೂಟರ್, ಪುಸ್ತಕಗಳನ್ನು ನೀಡಲು 5 ಕೋಟಿ ರೂ. ತೆಗೆದಿಡಬೇಕು ಎಂದು ಸಲಹೆ ನೀಡಿದರು.

ವಿಸಿ ಮೇಲೆ ಕಣ್ಣಿಡಿ: ವಿಶ್ವವಿದ್ಯಾನಿಲಯದ ಕುಲ ಪತಿಗಳು ಕಾಲೇಜುಗಳಿಗೆ ತೆರಳಿ ಅಲ್ಲಿನ ವಾಸ್ತವ ಸ್ಥಿತಿ-ಗತಿಗಳನ್ನು ಅವಲೋಕಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಆದರೆ, ಬಹುತೇಕ ಕುಲಪತಿಗಳು ವಿಶ್ವವಿದ್ಯಾನಿಲಯವನ್ನು ಬಿಟ್ಟು ಹೊರ ಬರುವುದೇ ಇಲ್ಲ. ವಿಸಿಗಳು ಎಷ್ಟು ಕಾಲೇಜಿಗೆ ಭೇಟಿ ನೀಡಿ ಸಮಸ್ಯೆ ಗಳನ್ನು ಪರಿಶೀಲಿಸಿದ್ದಾರೆ?. ಜಿಲ್ಲಾಧಿಕಾರಿಗಳು ಈ ಕುರಿತು ಪ್ರಶ್ನಿಸಬೇಕು ಎಂದು ಸಲಹೆ ಹೇಳಿದರು.

ಕಮಿಷನರ್-ಡಿಸಿಪಿ ಇರಬೇಕು: ಆಷಾಢ ಶುಕ್ರ ವಾರಗಳು ಕಮಿಷನರ್ ಮತ್ತು ಡಿಸಿಪಿಯವರು ಪೇದೆಗಳಿಗೆ ಭದ್ರತೆ ನೋಡಿಕೊಳ್ಳಲು ಬಿಟ್ಟು ಹೋಗದೆ ಸ್ಥಳದಲ್ಲೇ ಇರಬೇಕು. ಹಿಂದಿನ ವರ್ಷಗಳಲ್ಲಿ ನಾನು ಬಂದ ದಿನವೇ ಡಿಸಿಪಿ ಇರಲಿಲ್ಲ. ಐಜಿಪಿಗೆ ಕರೆ ಮಾಡಿದ್ದೆ. ಈ ಬಾರಿ ಹಾಗೆ ಆಗಬಾರದು ಎಂದರು.

ವೈದ್ಯರು ಮೊದಲು ಸೇವಿಸಲಿ: ಆಷಾಢ ಶುಕ್ರವಾರ ದಂದು ಬೆಟ್ಟದ ಪಾದದ ಕೆಳಗೆ ಭಕ್ತರಿಗೆ ಅನ್ನಸಂತ ರ್ಪಣೆ ನಡೆಸುತ್ತಾರೆ. ಆದ್ದರಿಂದ ಡಿಹೆಚ್‍ಒ ಈ ಬಗ್ಗೆ ನಿಗಾವಹಿಸಬೇಕು. ಪ್ರಸಾದ ವಿನಿಯೋಗಕ್ಕೂ ಮೊದಲು ವೈದ್ಯರು ಆಹಾರ ಸೇವಿಸಿ, ಉತ್ತಮವಾಗಿದೆ ಎಂದು ಖಾತ್ರ್ರಿಯಾದ ನಂತರವಷ್ಟೇ ಪ್ರಸಾದ ವಿನಿಯೋಗಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಲಹೆ ನೀಡಿದರು.

ಪ್ರಸ್ತಾವನೆ ನೀಡಿ : ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ನನ್ನ ಇಲಾಖೆಯಿಂದ ಆಗಬಹುದಾದ ಎಲ್ಲಾ ಕೆಲಸ ಗಳನ್ನು ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿ ಗಳು ಪ್ರಸ್ತಾವನೆ ಕೊಟ್ಟರೆ ನಾನೇ ಸಿಎಂ ಅವರೊಂದಿಗೆ ಮಾತುಕತೆ ನಡೆಸಿ ಅನುಮೋದನೆ ಕೊಡಿಸುತ್ತೇನೆ. ಹಾಗೆಯೇ ದಸರಾ ಮತ್ತು ಪಂಚಲಿಂಗ ದರ್ಶನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ನಮ್ಮ ಇಲಾಖೆಯಿಂದ ಏನು ಕೆಲಸ ಆಗಬೇಕು ಎಂಬುದನ್ನು ತಿಳಿಸುವಂತೆ ಸೂಚಿಸಿದರು.

ಮೈಸೂರು ಜಿಲ್ಲಾ ಸಚಿವ ಜಿ.ಟಿ.ದೇವೇಗೌಡ ಮಾತ ನಾಡಿ, ಆಷಾಢ ಶುಕ್ರವಾರಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಆಗಮಿಸುವುದರಿಂದ ಬೆಟ್ಟಕ್ಕೆ ಹೊಸ ಬಸ್ ಗಳ ವ್ಯವಸ್ಥೆ ಮಾಡಬೇಕು, ಅನುಭವಿ ಚಾಲಕರನ್ನು ನೇಮಿಸಬೇಕು. ಭಕ್ತರನ್ನು ಕರೆತರುವ ಮುನ್ನ ಬಸ್ಸುಗಳ ಕಂಡಿಷನ್ ಹೇಗಿದೆ ಎಂಬುದನ್ನು ಚಾಲ ಕರು ಪರಿಶೀಲಿಸಬೇಕು ಎಂದು ಕೆಎಸ್‍ಆರ್‍ಟಿಸಿ ಅಧಿ ಕಾರಿಗಳಿಗೆ ಸೂಚಿಸಿದರು ತುರ್ತು ಸಂದರ್ಭ ನಿರ್ವಹಿಸಲು ಬೆಟ್ಟದಲ್ಲಿ ಆ್ಯಂಬುಲೆನ್ಸ್, ಅಗ್ನಿ ಶಾಮಕ ವಾಹನ ಇರಬೇಕು. ಜತೆಗೆ ಬೆಟ್ಟದಲ್ಲೇ ಮಿನಿ ಕ್ಲಿನಿಕ್ ತೆರೆದು ಉತ್ತಮ ವೈದ್ಯರನ್ನು ನೇಮಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಅಭಿರಾಂ ಜಿ.ಶಂಕರ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಷಾಢ ಶುಕ್ರ ವಾರಗಳ ಕುರಿತು ಈಗಾಗಲೇ ಆಗಿರಬಹುದಾದ ಸಿದ್ಧತೆ ಬಗ್ಗೆ ವಿವರಿಸಿದರು. ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದರು. ನಂತರ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.

ಪೆÇಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್, ಮುಡಾ ಅಧ್ಯಕ್ಷ ವಿಜಯಕುಮಾರ್, ಆಯುಕ್ತ ಪಿ.ಎಸ್.ಕಾಂತರಾಜು, ಜಿಪಂ ಸದಸ್ಯ ಮಾದೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Translate »