ಅನಕ್ಷರತೆ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ: ಡಿಸಿ
ಹಾಸನ

ಅನಕ್ಷರತೆ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ: ಡಿಸಿ

June 30, 2019

ಹಾಸನ, ಜೂ.29- ಅನಾಗರಿಕತೆ ಹಾಗೂ ಅನಕ್ಷರತೆ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಗ್ರಾಮೀಣ ಜನರಲ್ಲಿಯೂ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.

ನಗರದ ಅಕ್ಷರ ಬುಕ್‍ಹೌಸ್‍ಗೆ ಇತ್ತೀಚೆಗೆ ಭೇಟಿ ನೀಡಿ ಪುಸ್ತಕ ಮಳಿಗೆ ವೀಕ್ಷಿಸಿ ಮಾತ ನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಯುವಕರು ಪುಸ್ತಕ ಓದುವ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಪಠ್ಯದ ಜೊತೆಗೆ ಮಕ್ಕಳು ನಿತ್ಯ ದಿನಪತ್ರಿಕೆ ಸೇರಿದಂತೆ ಕಥೆ, ಕಾದಂಬರಿ, ಸಣ್ಣ ಕಥೆಗಳು ಹೀಗೆ ಆಸಕ್ತಿದಾಯಕ ಪುಸ್ತಕಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ಮನೆಯಲ್ಲಿ ಗ್ರಂಥಾಲಯ ತೆರೆಯುವುದರಿಂದ ಮಕ್ಕಳು ಓದುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಸಮಾಜದಲ್ಲಿ ಸಂಸ್ಕಾರಯುತವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಪ್ರತಿ ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲೂ ಒಂದು ಉತ್ತಮ ಗ್ರಂಥಾಲಯ ಇಲ್ಲವೇ ಪುಸ್ತಕದ ಮಳಿಗೆಗಳು ಇರಬೇಕು. ಓದುವ ಹವ್ಯಾಸ ಮೈಗೂಡಿಸಿಕೊಳ್ಳುವುದರಿಂದ ಬೌದ್ಧಿಕ ಮಟ್ಟ ಹೆಚ್ಚಾಗುವುದರ ಜೊತೆಗೆ ಹಾಗೂ ಮನುಷ್ಯ ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯ ಎಂದರು.

ಅಕ್ಷರ ಬುಕ್ ಹೌಸ್ ಮುಖ್ಯಸ್ಥ ಬಿ.ಕೆ.ಗಂಗಾಧರ್ ಮಾತನಾಡಿ, ಮನುಷ್ಯ ಸಮಾಜದಲ್ಲಿ ಎಷ್ಟೇ ಹಣ ಸಂಪಾದಿಸಿದರೂ ವಿದ್ಯೆಗೆ ಇರುವ ಬೆಲೆ ಹಣಕ್ಕೆ ಇಲ್ಲ. ಎಷ್ಟೇ ಓದಿದರೂ ಅದಕ್ಕೆ ಕೊನೆ ಎಂಬುದೇ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಲ್ಲೂ ಯುವ ಪೀಳಿಗೆ ಹೆಚ್ಚು ಪುಸ್ತಕಗಳನ್ನು ಓದಬೇಕು. ನಮ್ಮ ನಾಡಿನ ಅನೇಕ ಹಿರಿಯ ಕವಿಗಳು, ಸಾಹಿತಿಗಳು ಬರೆದಿರುವ ಪುಸ್ತಕಗಳು ಪುಸ್ತಕ ಮಳಿಗೆಯಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಪತ್ರಕರ್ತ ರವಿ ನಾಕಲಗೂಡು, ಟೈಮ್ಸ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಂದ್ರ, ಅಧ್ಯಾಪಕ ಶಿವು, ಅಕ್ಷರ ಬುಕ್ ಹೌಸ್‍ನ ಶ್ರೀನಾಥ್ ಹಾಗೂ ಇತರರಿದ್ದರು.

Translate »