ಕೊನೆ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ಜನ ಸಾಗರ
ಮೈಸೂರು

ಕೊನೆ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ಜನ ಸಾಗರ

August 11, 2018

ಮೈಸೂರು:  ಆಷಾಡ ಮಾಸದ ಕೊನೆ ಶುಕ್ರವಾರವಾದ ಇಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ನಾಡದೇವಿ ದರ್ಶನ ಪಡೆದು ಸಂಭ್ರಮಿಸಿದರು.

ಮೋಡ ಮುಸುಕಿದ ವಾತಾವರಣ, ಕೊರೆಯುವ ಚಳಿ ಹಾಗೂ ತುಂತುರು ಮಳೆಯ ನಡುವೆ ಮುಂಜಾನೆ 3 ಗಂಟೆಯಿಂದಲೇ ಭಕ್ತರು ದೇವಾಲಯದ ಮುಂದೆ ಸರದಿ ಸಾಲಿನಲ್ಲಿ ನಿಂತು ಆಷಾಡ ಮಾಸದ ಕೊನೆ ಶುಕ್ರವಾರ ಪೂಜಾ ಸಂಭ್ರಮವನ್ನು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದರು. ಸರದಿ ಸಾಲಿನಲ್ಲಿದ್ದ ನೂರಾರು ಭಕ್ತರು ನಾಡದೇವಿಗೆ ಜೈಕಾರ ಹಾಕಿ, ಭಜನೆ ಮಾಡುತ್ತಾ ಪುಳಕಗೊಂಡರು.

ವಿಶೇಷ ಪೂಜೆ: ದೇವಾಲಯದಲ್ಲಿ ಪ್ರದಾನ ಆಗಮಿಕರಾದ ಡಾ.ಎನ್.ಶಶಿಶೇಖರ್ ದೀಕ್ಷಿತ್ ಗರ್ಭಗುಡಿಯಲ್ಲಿರುವ ತಾಯಿಯ ವಿಗ್ರಹಕ್ಕೆ ವಿಶೇಷ ಪೂಜಾ ಕೈಕಂರ್ಯಗಳನ್ನು ಪೂರೈಸಿದರು. ಮುಂಜಾನೆ 3ಗಂಟೆಯಿಂದಲೇ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ತ್ರಿಪದಿ, ಅಷ್ಟೋತ್ತರ ಪೂಜೆ ನೆರವೇರಿಸಿ ಮಂಗಳಾರತಿ ಬೆಳಗಿದರು. ನಂತರ ಮುಂಜಾನೆ 5.30ಕ್ಕೆ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದರ್ಮ ದರ್ಶನ ಹಾಗೂ 300 ರೂ ಟಿಕೆಟ್ ಪಡೆದು ವಿಶೇಷ ದರ್ಶನ ಪಡೆಯುವವರಿಗಾಗಿ ವ್ಯವಸ್ಥೆ ಮಾಡಿದ್ದ ಪ್ರತ್ಯೇಕ ಸಾಲಿನಲ್ಲಿ ಭಕ್ತರು ಇಂದು ಗೊಂದಲಕ್ಕೆ ಆಸ್ಪದೆ ನೀಡದೆ ದೇವಿಯ ದರ್ಶನ ಪಡೆದರು.

ಭಕ್ತರ ಸಂಖ್ಯೆ ವಿರಳ: ಕಳೆದ ಮೂರು ಶುಕ್ರವಾರಕ್ಕೆ ಹೋಲಿಸಿದರೆ ಇಂದು ಭಕ್ತರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಕೊನೆಯ ಶುಕ್ರವಾರವಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಭಾವಿಸಲಾಗಿತ್ತು. ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು ಸಂಜೆ 5 ಗಂಟೆಯಿಂದಲೇ ಭೀಮನ ಅಮಾವಾಸ್ಯೆ ಆರಂಭವಾಗಲಿರುವುದರಿಂದ ಭಕ್ತರು ಬೆಟ್ಟಕ್ಕೆ ಬರಲು ಹಿಂದೇಟು ಹಾಕಿದ್ದರು. ಈ ಕುರಿತು ಚಾಮುಂಡೇಶ್ವರಿ ದೇವಾಲಯ ಪ್ರದಾನ ಆಗಮಿಕರಾದ ಡಾ.ಎನ್.ಶಶಿಶೇಖರ್ ದೀಕ್ಷಿತ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಆಷಾಡ ಮಾಸದ ಕೊನೆಯ ಶುಕ್ರವಾರದ ಪೂಜಾ ಮಹೋತ್ಸವಕ್ಕೆ ಕಳೆದ ಮೂರು ಶುಕ್ರವಾರಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆ ಎನಿಸುತ್ತದೆ. ಇಂದು ಸಂಜೆ 5 ಗಂಟೆಗೆ ಆಷಾಡ ಮಾಸ ಮುಗಿಯುತ್ತದೆ. 5ಗಂಟೆಯ ನಂತರ ಭೀಮನ ಅಮಾವಾಸ್ಯೆ ಆರಂಭವಾಗುತ್ತದೆ. ಕೆಲವರು ಸಂಜೆಯ ವೇಳೆಯೇ ಅಮಾವಾಸ್ಯೆಯ ಪೂಜೆ ಮಾಡುವ ಸಂಪ್ರದಾಯ ಹೊಂದಿದ್ದರೆ, ಮತ್ತೆ ಕೆಲವರು ಬೆಳಿಗ್ಗೆ ಪೂಜೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭಕ್ತರು ಕಡಿಮೆಯಾಗಿದ್ದಾರೆ ಎನಿಸುತ್ತದೆ.

ಅಲ್ಲದೆ ಕಳೆದ ವಾರ ತಾಯಿಯ ವರ್ದಂತಿ ಮಹೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರಿಂದ ಇಂದು ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮೆಟ್ಟಿಲುಗಳ ಮೂಲಕ: ಎಂದಿನಂತೆ ಈ ಬಾರಿಯೂ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿದವರ ಸಂಖ್ಯೆ ಹೆಚ್ಚಾಗಿತ್ತು. ವಿವಾಹ, ಸಂತಾನಭಾಗ್ಯ, ಅನಾರೋಗ್ಯ ನಿವಾರಣೆ, ಆರ್ಥಿಕ ಸಂಕಷ್ಟ ನಿವಾರಣೆ ಸೇರಿದಂತೆ ವಿವಿಧ ಹರಕೆ ಹೊತ್ತ ಮಹಿಳೆಯರು, ಯುವತಿಯರು ಪ್ರತಿ ಮೆಟ್ಟಿಲುಗಳಿಗೂ ಹರಿಶಿನ, ಕುಂಕುಮ ಹಚ್ಚಿ, ಗಂಧದ ಕಡ್ಡಿಯಿಂದ ಪೂಜೆ ಮಾಡಿ ಬೆಟ್ಟ ಹತ್ತಿ ಪೂಜೆ ಸಲ್ಲಿಸಿದರು.

ವಿಶೇಷ ಬಸ್ ವ್ಯವಸ್ಥೆ: ಖಾಸಗಿ ವಾಹನಗಳಿಗೆ ಇಂದು ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 25 ಬಸ್‍ಗಳು ಹೆಲಿಪ್ಯಾಡ್‍ನಿಂದ ಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ನಿಯೋಜಿಸಲಾಗಿತ್ತು. ಇದರೊಂದಿಗೆ ನಗರ ಬಸ್ ನಿಲ್ದಾಣದಲ್ಲಿಯೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಗಣ್ಯರಿಂದ ದರ್ಶನ: ಆಷಾಢ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಚಿವರಾದ ಸಾ.ರಾ.ಮಹೇಶ್, ಡಿ.ಕೆ.ಶಿವಕುಮಾರ್, ಹೆಚ್.ಡಿ.ರೇವಣ್ಣ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ವರ್ತೂರು ಪ್ರಕಾಶ್, ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸೇರಿದಂತೆ ಇನ್ನಿತರರು ದೇವಾಲಯಕ್ಕೆ ಆಗಮಿಸಿ ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕೊನೆಗೂ ಎಚ್ಚೆತ್ತ ಪೊಲೀಸರಿಂದ ಅಚ್ಚುಕಟ್ಟಾದ ವ್ಯವಸ್ಥೆ..

ಕಳೆದ ಮೂರು ವಾರಗಳಲ್ಲಿಯೂ ಚಾಮುಂಡಿಬೆಟ್ಟದಲ್ಲಿ ಸರಿಯಾದ ಭದ್ರತೆ ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಅಲ್ಲದೆ ಪರಸ್ಪರ ಹೊಂದಾಣಿಕೆಯಿಲ್ಲದಂತೆ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಶುಕ್ರವಾರ ಭಕ್ತರ ಸಮೂಹದ ನಡುವೆ ಗಣ್ಯರ ವಾಹನಗಳು ಬಂದು ಸಿಲುಕಿಕೊಂಡಿದ್ದವು. ಇದರಿಂದ ಸಚಿವ ಹೆಚ್.ಡಿ.ರೇವಣ್ಣ ಅವರು ಭದ್ರತಾ ಲೋಪದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಗಣ್ಯರಿಗೆ ಮಣೆ ಹಾಕುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆ.9ರಂದು `ಮೈಸೂರು ಮಿತ್ರ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗಣ್ಯರಿಗೆ ಸರಾಗವಾಗಿ ದೇವಾಲಯಕ್ಕೆ ತೆರಳಲು ಸುಗಮ ವ್ಯವಸ್ಥೆ ಮಾಡಲಾಗಿತ್ತು. ಗುಂಪು ಚದುರಿಸಲು ಅಶ್ವರೋಹಿ ದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಯಿತು.

Translate »