ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋದಿ ಸ್ಪರ್ಧೆ?
ಮೈಸೂರು

ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋದಿ ಸ್ಪರ್ಧೆ?

March 23, 2019

ಬೆಂಗಳೂರು: ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜ್ಯ ನಾಯಕರು ದುಂಬಾಲು ಬಿದ್ದಿರುವ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಈಗಾಗಲೇ ರಾಜ್ಯದ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸದೇ ಇರುವುದು ಮೋದಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದ ತೇಜಸ್ವಿನಿ ಅನಂತ್‍ಕುಮಾರ್ ಹೆಸರು ತಡೆ ಹಿಡಿದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 2014ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದರು.

ಈ ಬಾರಿಯೂ ವಾರಣಾಸಿಯಿಂದ ಕಣಕ್ಕಿಳಿಯುತ್ತಿರುವ ಮೋದಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದಲೇ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ ಇದೆ ಎಂಬುದನ್ನು ಮನಗಂಡಿರುವ ಕೇಂದ್ರ ನಾಯಕರು ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಮೋದಿ ಅವರನ್ನು ಬೆಂಗಳೂರು ದಕ್ಷಿಣದಿಂದ ಸ್ಪರ್ದಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕೇಳಿ ಬರುತ್ತಿವೆ, ಕರ್ನಾಟಕದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಬಿಜೆಪಿಯ ಚುನಾವಣಾ ತಂತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ.

ವಾರಣಾಸಿ ಮತ್ತು ಬೆಂಗಳೂರು ದಕ್ಷಿಣದಿಂದ ಮೋದಿ ಸ್ಪರ್ಧಿಸಿ 2 ಕ್ಷೇತ್ರಗಳಲ್ಲಿಯೂ ಗೆದ್ದರೇ ವಾರಣಾಸಿ ಉಳಿಸಿ ಕೊಂಡು ಬೆಂಗಳೂರು ದಕ್ಷಿಣಕ್ಕೆ ರಾಜಿನಾಮೆ ನೀಡುತ್ತಾರೆ, ಮತ್ತೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ತೇಜಸ್ವಿನಿ ಅವರನ್ನು ಕಣಕ್ಕಿಳಿಸುವ ಪ್ಲಾನ್ ಬಿಜೆಪಿಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

Translate »