ಹಾಸನದಲ್ಲಿ ಪ್ರಜ್ವಲ್ ನಾಮಪತ್ರ ಸಲ್ಲಿಕೆ
ಮೈಸೂರು

ಹಾಸನದಲ್ಲಿ ಪ್ರಜ್ವಲ್ ನಾಮಪತ್ರ ಸಲ್ಲಿಕೆ

March 23, 2019

ಹಾಸನ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಶುಕ್ರವಾರ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮಧ್ಯಾಹ್ನ 12.35ರಲ್ಲಿ ತೆರಳಿ ಜಿಲ್ಲಾ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಅಕ್ರಂಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು.

ಪ್ರಜ್ವಲ್‍ರೊಂದಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಇದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಸೂಚಕರಾಗಿ ಸಹಿ ಮಾಡಿದರು. ಬಳಿಕ ಮತ್ತೆ 2.30ಕ್ಕೆ ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಸಹೋದರ ಸೂರಜ್ ಅವರೊಂದಿಗೆ ಪ್ರಜ್ವಲ್ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ 2ನೇ ಬಾರಿ ನಾಮಪತ್ರವನ್ನು ಸಲ್ಲಿಸಿದರು.

ಜೆಡಿಎಸ್ ಸಮಾವೇಶ: ಪ್ರಜ್ವಲ್ ನಾಮಪತ್ರ ಸಲ್ಲಿಕೆ ನಂತರ ನಗರದ ತಾಲೂಕು ಕಚೇರಿ ಹಿಂಭಾಗ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಜಂಟಿ ಸಮಾವೇಶ ನಡೆಸಿ ಮೈತ್ರಿ ಕೂಟದ ಶಕ್ತಿ ಪ್ರದರ್ಶನ ಮಾಡಿದರು. ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಮಾತನಾಡಿ, ಕೋಮುವಾದಿ ಪಕ್ಷವನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಂದಾಗಿದ್ದು, ಹಾಸನ ಲೋಕಸಭಾ ಕ್ಷೇತ್ರದಿಂದ ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಟೋಪಿ ಹಾಕುವ ರಾಜಕಾರಣ ಮಾಡಿಲ್ಲ: ಇನ್ನೊಬ್ಬರಿಗೆ ಟೋಪಿ ಹಾಕುವ ರಾಜಕಾರಣ ಎಂದಿಗೂ ಮಾಡಿಲ್ಲ. ಯಾರು ಯಾರಿಗೆ ಟೋಪಿ ಹಾಕಿದ್ದಾರೆಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ರಾಜ್ಯದ ಅಭಿವೃದ್ಧಿ ಮುಂದಿಟ್ಟುಕೊಂಡ ಮತ ನೀಡುವಂತೆ ಜನರ ಬಳಿ ಹೋಗುತ್ತಿದ್ದೇವೆಯೇ ಹೊರತು ದ್ವೇಷ ರಾಜಕಾರಣದಿಂದಲ್ಲ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ. ಆ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ. 44ಲಕ್ಷ ರೈತರ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದೆಂದರೆ ಹುಡುಗಾಟವಲ್ಲ. ಇದುವರೆಗೆ 15 ಸಾವಿರ ರೈತರಿಗೆ ಋಣಮುಕ್ತ ಪತ್ರ ತಲುಪಿದೆ. ಯಾವುದೇ ಒಂದು ಘೋಷಣೆ ಅಧಿಕೃತವಾಗಿ ಪ್ರಕಟವಾದ ಮೇಲೆ ಅದರ ಜಾರಿಗೆ ತನ್ನದೇ ಆದ ವಿಧಿವಿಧಾನ ಗಳಿರುತ್ತವೆ. ಕಾನೂನು ಇತಿಮಿತಿಯೊಳಗೆ ಕೆಲಸ ಮಾಡಬೇಕಾಗುತ್ತದೆ ಎಂದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಹೊಂದಾಗಬೇಕು ಎಂಬುದು ದೇವೇಗೌಡರ ಆಸೆಯಾಗಿದ್ದು, ಅದು ಇಂದು ಈಡೇರಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮೊಬೈಲ್, ನೆಟ್‍ವರ್ಕ್‍ಗೆ ಮಾತ್ರ ಆದ್ಯತೆ ನೀಡಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಸುಳ್ಳು ಭರವಸೆಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಂಡ್ಯದಲ್ಲಿ ನಿಖಿಲ್ ಬಿಟ್ಟರೇ ಯಾರಿಗೂ ಸಹಕಾರ ನೀಡುವುದಿಲ್ಲ ಎಂದು ಜನರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು. ಶಾಸಕ ವೈ.ಎಸ್.ವಿ.ದತ್ತ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಮುಖಂಡ ನಾಡೇಗೌಡ ಮಾತನಾಡಿದರು. ಈ ವೇಳೆ ಹೃದಯಘಾತದಿಂದ ನಿಧನರಾದ ಪೌರಾಡಳಿತ ಸಚಿವ ಶಿವಳ್ಳಿ ಅವರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Translate »