ಇಂದು ಕಾಂಗ್ರೆಸ್ ಪಟ್ಟಿ ಪ್ರಕಟ
ಮೈಸೂರು

ಇಂದು ಕಾಂಗ್ರೆಸ್ ಪಟ್ಟಿ ಪ್ರಕಟ

March 23, 2019
  • ರಾಹುಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಶುಕ್ರವಾರ ಇಡೀ ದಿನ ಸರಣಿ ಸಭೆ-ಚರ್ಚೆ
  • ಕರ್ನಾಟಕದ 13 ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮ; 7 ಕ್ಷೇತ್ರ ನಿರ್ಧಾರ ಗೊಂದಲ
  • ಖರ್ಗೆ, ಖಂಡ್ರೆ, ಮುನಿಯಪ್ಪ, ಮೊಯ್ಲಿ, ಧ್ರುವನಾರಾಯಣ್‍ಗೆ ಟಿಕೆಟ್ ಖಚಿತ

ನವದೆಹಲಿ: ಕರ್ನಾಟಕದಲ್ಲಿನ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೆ ಹೋಗಿದೆ. ಶುಕ್ರವಾರ ಕರ್ನಾಟಕದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದ ಕೈ ಪಾಳಯ, ಶನಿವಾರಕ್ಕೆ ಮುಂದೂಡಿದೆ.

ಶುಕ್ರವಾರ ಇಡೀ ದಿನ ನವ ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸರಣಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಕರ್ನಾ ಟಕದ 13 ಕ್ಷೇತ್ರಗಳ ಅಭ್ಯರ್ಥಿಗಳನ್ನಷ್ಟೇ ಆಖೈರುಗೊಳಿಸುವುದರಲ್ಲಿ ಯಶಸ್ವಿಯಾದರು. ಇನ್ನೂ 7 ಕ್ಷೇತ್ರಗಳ ಸ್ಪರ್ಧಾಳುಗಳ ಆಯ್ಕೆ ನೆನಗುದಿಗೆ ಬಿದ್ದಿತು. ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ಕೆ.ಹೆಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಧ್ರುವ ನಾರಾಯಣ್‍ಗೆ ಟಿಕೆಟ್ ಖಚಿತವಾಗಿದೆ.

ಈ ಮೊದಲು 3 ಬಾರಿ ಮುಂದೂಡಿಕೆಯಾಗಿದ್ದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಶುಕ್ರವಾರ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆಯಿತು. ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭಾಗವಹಿಸಿದ್ದರು. ಜೆಡಿಎಸ್ ಜತೆಗಿನ ಮೈತ್ರಿಯ ಭಾಗವಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಮಿತ್ರ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‍ಗೆ 20 ಕ್ಷೇತ್ರಗಳು ಉಳಿದಿವೆ. ಈ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ ನಾಯಕರು, ರಾತ್ರಿ ವೇಳೆಗೆ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು. ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳನ್ನು ಶನಿವಾರ ಅಂತಿಮಗೊಳಿಸಲು ನಿರ್ಧರಿಸಿದರು. ಶನಿವಾರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷದ ರಾಜ್ಯ ನಾಯಕರು ಗುರುವಾರ ತಡ ರಾತ್ರಿಯವರೆಗೂ ಸಭೆ ನಡೆಸಿ ಅಂತಿಮ ಗೊಳಿಸಿದ್ದ ಪಟ್ಟಿಯನ್ನು ಶುಕ್ರವಾರ ಬೆಳಿಗ್ಗೆ ಸಿಇಸಿ ಸಭೆಯಲ್ಲಿಡಲಾಯಿತು. ಈ ವೇಳೆ ತುಮಕೂರು ಹೊರತುಪಡಿಸಿ ಹಾಲಿ ಸಂಸದರೆಲ್ಲರಿಗೂ ಟಿಕೆಟ್ ನೀಡುವುದಕ್ಕೆ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಮುಸ್ಲಿಂ ಸಮುದಾಯಕ್ಕೆ 2 ಕ್ಷೇತ್ರ ಬಿಟ್ಟುಕೊಡಬೇಕು. ಬೆಂಗಳೂರು ಸೆಂಟ್ರಲ್, ಧಾರವಾಡ ಅಥವಾ ಬೀದರ್‍ನಿಂದ ಟಿಕೆಟ್ ನೀಡಬಹುದು ಎಂದು ಮೊದಲು ಚರ್ಚಿಸಲಾಯಿತು. ಆದರೆ, ಬೀದರ್‍ನಲ್ಲಿ ಈಶ್ವರ್ ಖಂಡ್ರೆಗೆ ಟಿಕೆಟ್ ಖಚಿತ ಎಂದಿರುವುದರಿಂದ, ಬೆಂಗಳೂರು ಸೆಂಟ್ರಲ್ ಮತ್ತು ಹುಬ್ಬಳ್ಳಿ- ಧಾರವಾಡ ಕ್ಷೇತ್ರ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ರಾಹುಲ್ ಅವರಿüಗೆ ರಾಜ್ಯ ನಾಯಕರು ಮನವಿ ಮಾಡಿದರು. ಧಾರವಾಡದಲ್ಲಿ 13 ಜೀವಗಳನ್ನು ಬಲಿ ತೆಗೆದುಕೊಂಡ ಕಟ್ಟಡ ದುರಂತದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಮೀಪದ ಬಂಧುಗಳ ಹೊಣೆಗಾರಿಕೆಯೂ ಇದೆ ಎಂಬ ಮಾತುಗಳಿರುವುದರಿಂದ ಅವರಿಗೆ ಧಾರವಾಡ ಕ್ಷೇತ್ರದಿಂದ ಟಿಕೆಟ್ ನೀಡದಿರಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Translate »