ಖಾಸಗಿ ಬಸ್ ಡಿಕ್ಕಿ: ಸಾಕಾನೆ ‘ರಂಗ’ ದುರ್ಮರಣ
ಮೈಸೂರು

ಖಾಸಗಿ ಬಸ್ ಡಿಕ್ಕಿ: ಸಾಕಾನೆ ‘ರಂಗ’ ದುರ್ಮರಣ

October 9, 2018

ಕೇರಳದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಭವಿಷ್ಯದ ಮೈಸೂರು ದಸರಾ ಅಂಬಾರಿ ಆನೆ ಆಕರ್ಷಣೆ ಹೊಂದಿದ್ದ ಸಾಕಾನೆ ರಂಗ ಇಂದು ಮುಂಜಾನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ದುರ್ಮರಣಕ್ಕೀಡಾಗಿದ್ದಾನೆ.

ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಲ್ಪಕ ಟ್ರಾನ್ಸ್‍ಪೋರ್ಟ್‍ಗೆ ಸೇರಿದ ಖಾಸಗಿ ಬಸ್(ಕೆಎ01, ಎಇ7579) ಡಿಕ್ಕಿ ಹೊಡೆದ ರಭಸಕ್ಕೆ ಸಾಕಾನೆ ರಂಗನ ಬೆನ್ನು ಮೂಳೆ ಮುರಿದಿದೆ. ಬಸ್‍ನ ಒಂದು ಭಾಗವೂ ಜಖಂ ಆಗಿದೆ. ಬೆನ್ನು ಮೂಳೆ ಮುರಿತದಿಂದ ಘೀಳಿಡುತ್ತಿದ್ದ ಆನೆಯ ರೋದನವನ್ನು ಕೇಳಿ ಸಾಕಾನೆ ಕ್ಯಾಂಪ್‍ನಲ್ಲಿದ್ದ ಮಾವುತರು, ಕಾವಾಡಿಗಳು ಹಾಗೂ ಅಧಿಕಾರಿಗಳು ಧಾವಿಸಿ ಬಂದು, ಇತರೆ ಆನೆಗಳ ಸಹಾಯದಿಂದ ರಂಗನನ್ನು ಮೇಲೆತ್ತಲು ಪ್ರಯತ್ನಿಸಿದರಾ ದರೂ, ತೀವ್ರವಾಗಿ
ಗಾಯಗೊಂಡಿದ್ದ ರಂಗ ಮೇಲೇಳಲು ಸಾಧ್ಯವಾಗದೆ ನರಳಾಡುತ್ತಿತ್ತು. ಮುಂಜಾನೆ 4.15ರ ಸುಮಾರಿಗೆ ವನ್ಯಜೀವಿ ವೈದ್ಯ ಡಾ.ಮುಜೀದ್ ರೆಹಮಾನ್ ಸ್ಥಳಕ್ಕಾಗಮಿಸಿ, ಚಿಕಿತ್ಸೆ ನೀಡಲು ಮುಂದಾದರಾದರೂ ಕೆಲ ನಿಮಿಷದಲ್ಲೇ ರಂಗ ಸಾವನ್ನಪ್ಪಿದ.

ಸಾಕಾನೆ ರಂಗ ಭಾನುವಾರ ರಾತ್ರಿ ಕಾಡಿನಿಂದ ಶಿಬಿರಕ್ಕೆ ಬಂದು ಮಾವುತರು ನೀಡಿದ ಪೌಷ್ಟಿಕ ಆಹಾರ ಸೇವಿಸಿ, ಮತ್ತೆ ಕಾಡಿನತ್ತ ಆಹಾರ ಹರಸಿ ಹೊರಟಿದ್ದ ಎಂದು ಹೇಳಲಾಗಿದೆ. ರಾತ್ರಿ 2 ಗಂಟೆ ಸುಮಾರಿನಲ್ಲಿ ಶಿಬಿರದ ಸಮೀಪದಲ್ಲೇ ರಸ್ತೆಯಲ್ಲಿ ನಿಂತು ಮರದಿಂದ ಸೊಪ್ಪನ್ನು ಕಿತ್ತು ತಿನ್ನುತ್ತಿದ್ದ. ಈ ವೇಳೆ ಅತೀ ವೇಗವಾಗಿ ಬಂದ ಖಾಸಗಿ ಬಸ್‍ನ ಚಾಲಕ ರಸ್ತೆ ಬದಿ ನಿಂತಿದ್ದ ಆನೆಯನ್ನು ದೂರದಿಂದ ಗುರುತಿಸಲು ವಿಫಲವಾಗಿ, ಅತೀ ಹತ್ತಿರದಿಂದ ಆನೆಯನ್ನು ಕಂಡಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಅನ್ನು ಬಲಬದಿಯ ಟ್ರ್ಯಾಕ್‍ಗೆ ತಿರುಗಿಸಿದ್ದಾನೆ. ಆದರೂ ರಂಗನ ಹಿಂಭಾಗದ ತೊಡೆಗೆ ಬಸ್ ರಭಸವಾಗಿ ಅಪ್ಪಳಿಸಿದ ಪರಿಣಾಮ ರಂಗ ರಸ್ತೆ ಬದಿ ಉರುಳು ಬಿದ್ದು, ಚೀರಾಡ ತೊಡಗಿದ್ದಾನೆ. ಈ ಅಪಘಾತದಲ್ಲಿ ರಂಗನ ಬೆನ್ನು ಮೂಳೆ ಮುರಿದಿದೆ. ಗರಗಸದಿಂದ ಕೊಯ್ದಂತೆ ಆನೆಯ ಬೆನ್ನು ಸಿಗಿದಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ಭವಿಷ್ಯದ ಅಂಬಾರಿ ಆನೆ ಅರ್ಹತೆ: ಉತ್ತಮ ದೇಹದಾಢ್ರ್ಯ ಹೊಂದಿದ್ದ ರಂಗ ಸುಮಾರು ಒಂಭತ್ತು ಮುಕ್ಕಾಲು ಅಡಿ ಎತ್ತರವಿದ್ದ. ಸಮತಟ್ಟಾದ ಬೆನ್ನು ಹಾಗೂ ಆಕರ್ಷಕ ದಂತಗಳನ್ನು ಹೊಂದಿದ್ದು, ಈತನನ್ನು ಭವಿಷ್ಯದ ಅಂಬಾರಿ ಆನೆ ಎಂದೇ ಅರಣ್ಯಾಧಿಕಾರಿಗಳು ಲೆಕ್ಕಾಚಾರ ಹಾಕಿದ್ದರು. 2 ವರ್ಷಗಳ ಹಿಂದೆ ಸಾವನದುರ್ಗಾ ಅರಣ್ಯದಲ್ಲಿ ಸೆರೆಯಾದಾಗ ಪುಂಡಾಟ ನಡೆಸುತ್ತಿದ್ದ ಈ ರೌಡಿ ರಂಗ ಈಗ ಸಂಪೂರ್ಣ ಶಾಂತ ಸ್ವರೂಪನಾಗಿದ್ದು, ಮಾವುತರು, ಕಾವಾಡಿಗಳು ನೀಡಿದ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಈತನನ್ನು ದಸರಾ ಮಹೋತ್ಸವಕ್ಕೆ ಕರೆದೊಯ್ಯಬೇಕು ಎಂಬುದು ಅಧಿಕಾರಿಗಳ ಯೋಜನೆ ಯಾಗಿತ್ತು.

ದಸರಾ ಆನೆಗಳ ವೈದ್ಯರಾಗಿರುವ ಡಾ.ನಾಗರಾಜು ಕೂಡ ರಂಗನನ್ನು ಮುಂದಿನ ವರ್ಷದಿಂದ ದಸರಾ ಮಹೋತ್ಸವಕ್ಕೆ ಕರೆದೊಯ್ಯಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್ ಖಾಸಗಿ ಬಸ್ ಚಾಲಕನ ನಿರ್ಲಕ್ಷತನದಿಂದ ರಂಗ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್, ಆನೆಚೌಕೂರು ವಲಯ ಅರಣ್ಯಾಧಿಕಾರಿ ಸುರೇಂದ್ರಕುಮಾರ್, ಗೌರವ ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ ಭೇಟಿ ನೀಡಿದ್ದರು. ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಬಸ್ ಚಾಲಕ ಕೇರಳದ ಇರಟ್ಟಿಯ ಇಸ್ಮಾಯಿಲ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ವಹಿಸಿದ್ದಾರೆ.

ವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ: ಬಸ್ ಡಿಕ್ಕಿ ಹೊಡೆದ ಸಾಕಾನೆ ಸಾವನ್ನಪ್ಪಿದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರಸ್ತೆಯಲ್ಲಿ ವೈಜ್ಞಾನಿಕ ಹಂಪ್ಸ್‌ಗಳನ್ನು ನಿರ್ಮಿಸುವ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ರಸ್ತೆಯಲ್ಲಿ ಖಾಸಗಿ ವಾಹನಗಳು ಅತೀ ವೇಗವಾಗಿ ಚಲಿಸುತ್ತಿರುವ ಕಾರಣದಿಂದ ಹಲವಾರು ವನ್ಯಜೀವಿಗಳು ಬಲಿಯಾಗುತ್ತಿವೆ. ಅಲ್ಲದೆ ಈ ರಸ್ತೆಯಲ್ಲಿ ಚಲಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಆತಂಕದಿಂದಲೇ ಸಂಚರಿಸಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪಿಕ್‍ನಿಕ್ ಸ್ಪಾಟ್: ಮತ್ತಿಗೋಡು ಸಾಕಾನೆ ಶಿಬಿರ ಇತ್ತೀಚಿನ ದಿನಗಳಲ್ಲಿ ಪಿಕ್‍ನಿಕ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ದಸರಾ ಆನೆಗಳಾದ ಬಲರಾಮ, ಅಭಿಮನ್ಯು, ದ್ರೋಣ ಸೇರಿದಂತೆ ಹಲವು ಆನೆಗಳು ಈ ಶಿಬಿರದಲ್ಲಿರುವುದರಿಂದ ಇದನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಪ್ರವಾಸಿಗರ ವಾಹನಗಳು ರಸ್ತೆ ಬದಿ ನಿಲ್ಲಿಸುವುದರಿಂದ ಪದೇ ಪದೆ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇರುತ್ತವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Translate »