ಮೈಸೂರು ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ ಮುಂದುವರಿಕೆ
ಮೈಸೂರು

ಮೈಸೂರು ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ ಮುಂದುವರಿಕೆ

October 9, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸ ಬೇಕೆಂಬುದು ಸೇರಿದಂತೆ ಇನ್ನಿತರೆ ಪ್ರಮುಖ ಬೇಡಿಕೆಯೊಂದಿಗೆ ಪಾಲಿಕೆಯ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನವಾದ ಸೋಮವಾರವೂ ಮುಂದುವರೆಯಿತು.

ಮೈಸೂರು ಮಹಾನಗರ ಪಾಲಿಕೆ ಮುಖ್ಯ ದ್ವಾರದ ಬಳಿ ಪಾಲಿಕೆ ಪೌರಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಇಂದು ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಹಾಗೂ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರೂ ಆದ ಕೆ.ಶಿವರಾಂ, ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ಗಾಂಧಿ ನಗರದ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೌದ್ಧಬಿಕ್ಕು ಪ್ರಕಾಶ ಬಂತೇಜಿ, ಪ್ರಗತಿಪರ ಚಿಂತಕರಾದ ಡಾ. ಲಕ್ಷ್ಮೀನಾರಾಯಣ, ಪಂಡಿತಾರಾಧ್ಯ ಸೇರಿ ದಂತೆ ಇನ್ನಿತರರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿ ಸಿದರು.

ಮಂಗಳವಾರ (ಅ.9) ವಿಧಾನ ಸೌಧದಲ್ಲಿ ಸಭೆ ನಡೆಸಿ ಬೇಡಿಕೆ ಈಡೇರಿ ಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಸ್ವಚ್ಛತಾ ಕಾರ್ಯಕ್ಕೆ ಪಾಲಿಕೆ ಖಾಯಂ ಪೌರ ಕಾರ್ಮಿಕರು ಮುಂದಾಗಿದ್ದಾರೆ. ಪೌರ ಕಾರ್ಮಿಕರ ಮುಖಂಡರ ನಿರ್ಧಾರದಂತೆ ಖಾಯಂ ಪೌರಕಾರ್ಮಿಕರು ಕೆಲಸ ಆರಂಭಿಸಿದ್ದು, ಗುತ್ತಿಗೆ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಮ್ಮ ಮುಖಂಡರ ಆಣತಿಯಂತೆ ಮುಂದು ವರೆಸಿದ್ದಾರೆ. ನಾಳೆ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಸಭೆ ನಡೆಸಿ, ಪ್ರಕಟಿಸುವ ನಿರ್ಧಾರದತ್ತ ಪೌರಕಾರ್ಮಿಕರು ಚಿತ್ತಹರಿಸಿದ್ದಾರೆ.

ಪೌರಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಸ್ವಚ್ಛತೆ ಮಾಡುವವರಿಲ್ಲದೆ, ಅನೈರ್ಮಲ್ಯದ ವಾತಾವರಣ ಮೈಸೂರು ನಗರವನ್ನು ಕಾಡುವಂತಾಗಿದೆ. ಖಾಯಂ ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಆರಂಭಿಸಿರುವ ಹಿನ್ನೆಲೆಯಲ್ಲಿ ಒಂದಿಷ್ಟು ಸುಧಾರಣೆ ಕಾಣುವಂತಾಗಿದ್ದು, ನಾಳಿನ ಸಭೆಯಲ್ಲಿ ಸರ್ಕಾರ ಬೇಡಿಕೆ ಈಡೇರಿಸಿ ಹೋರಾಟಕ್ಕೆ ತೆರೆ ಎಳೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡ ಹಾಗೂ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಶಿವರಾಂ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಬೆಂಗಳೂರು, ವಿಜಯಪುರ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಪೌರಕಾರ್ಮಿಕರು ನಮ್ಮದೇ ಸಮುದಾಯವಾದ ಕಾರಣ ಅವರ ಸಂಕಷ್ಟವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ ಎಂದರು.

ಸ್ವಚ್ಛತಾ ಕೆಲಸದ ಕಾರಣಕ್ಕೆ ಅನೇಕ ರೋಗ-ರುಜಿನಗಳು ಪೌರಕಾರ್ಮಿರನ್ನು ಕಾಡಲಿವೆ. ಇಂತಹ ಸನ್ನಿವೇಶ ಇರುವಾಗ ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಆದ್ಯತೆ ನೀಡಬೇಕು. 700 ನಾಗರಿಕರಿಗೆ ಒಬ್ಬರು ಪೌರಕಾರ್ಮಿಕರು ಸೇವೆ ನೀಡಬೇಕೆಂಬುದು ಅವೈಜ್ಞಾನಿಕವಾಗಿದ್ದು, ಸರ್ಕಾರ ಕೂಡಲೇ ಪೌರಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ, ಪೌರಕಾರ್ಮಿಕ ಮುಖಂಡ ಎನ್.ಮಾರ, ಛಲವಾದಿ ಮಹಾಸಭಾದ ಮೈಸೂರು ಜಿಲ್ಲಾಧ್ಯಕ್ಷ ಹಂಸರಾಜ್, ಚಾಮರಾಜನಗರ ಜಿಲ್ಲಾಧ್ಯಕ್ಷ ಹನುಗಳ್ಳಿ ಬಸವರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

ಖಾಯಂ ಪೌರ ಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಆರಂಭ

ಮೈಸೂರು:  ನಾಳೆ (ಅ.9) ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ 600 ಮಂದಿ ಖಾಯಂ ಪೌರಕಾರ್ಮಿಕರು ಭಾನುವಾರದಿಂದ ಸ್ವಚ್ಛತಾ ಕೆಲಸ ಆರಂಭಿ ಸಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್. ಜಗದೀಶ್ ಇಂದಿಲ್ಲಿ ತಿಳಿಸಿದ್ದಾರೆ.

ಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಪೌರ ಕಾರ್ಮಿಕರ ಮುಖಂಡ ನಾರಾಯಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಶನಿವಾರ ನಾರಾಯಣರೊಂದಿಗೆ ಮೊಬೈಲ್ ಫೋನ್ ಮೂಲಕ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಭಾನುವಾರ ಮತ್ತು ಸೋಮವಾರ ರಜೆ ಇರುವ ಕಾರಣ ಮಂಗಳವಾರ ನಿಮ್ಮನ್ನು ಕರೆಸಿಕೊಂಡು ಬೆಂಗಳೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುತ್ತೇನೆ. ಮುಷ್ಕರ ಕೈಬಿಟ್ಟು ದಸರೆಗೆ ಸಹಕರಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪಾಲಿಕೆ ಖಾಯಂ ಪೌರಕಾರ್ಮಿಕರು ಮುಷ್ಕರ ಕೈಬಿಟ್ಟು ಸ್ವಚ್ಛತಾ ಕೆಲಸ ಮಾಡುವಂತೆ ಹೇಳುವ ಮೂಲಕ ನಾರಾಯಣ ಹಾಗೂ ಪದಾಧಿಕಾರಿಗಳು ಸಹಕರಿಸಿದ್ದು, ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ತಿಳಿಸಿದರು.

600 ಖಾಯಂ ನೌಕರರು ಹಾಗೂ ದಸರಾಗೆ ನೇಮಿಸಿಕೊಂಡಿರುವ 300 ಹೆಚ್ಚುವರಿ ತಾತ್ಕಾಲಿಕ ಪೌರಕಾರ್ಮಿಕರಿಂದ ಹಗಲು-ರಾತ್ರಿ ಸಮರೋಪಾದಿಯಲ್ಲಿ ಮೈಸೂರು ಸ್ವಚ್ಛಗೊಳಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ. ಇಂದು ಸಂಜೆಯೊಳಗಾಗಿ ಶೇ. 70ರಷ್ಟು ಕಸವನ್ನು ವಿಲೇವಾರಿ ಮಾಡಲಾಗಿದೆ. ಇಂದು ರಾತ್ರಿಯೂ ಅದು ಮುಂದುವರಿಯಲಿದೆ ಎಂದು ನುಡಿದರು. ಅವರೊಂದಿಗೆ ನಮ್ಮಲ್ಲಿರುವ ಕಸ ಗುಡಿಸುವ ಯಂತ್ರ (ಸ್ವೀಪಿಂಗ್ ಮೆಷಿನ್)ಗಳಿಂದಲೂ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ನಾಳೆ (ಅ. 9) ಮುಖ್ಯಮಂತ್ರಿಗಳು ಪೌರಕಾರ್ಮಿಕ ಮುಖಂಡರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಬಗೆಹರಿಸುವರೆಂಬ ವಿಶ್ವಾಸವಿರುವುದರಿಂದ ಮುಷ್ಕರ ಕೈಬಿಟ್ಟು ಎಲ್ಲಾ ಗುತ್ತಿಗೆ ಪೌರಕಾರ್ಮಿಕರೂ ಕರ್ತವ್ಯಕ್ಕೆ (ಮಂಗಳವಾರ) ಮರಳುವರೆಂಬ ನಂಬಿಕೆ ಇದೆ ಎಂದು ಕಮೀಷ್ನರ್ ನುಡಿದರು.

ಪೌರ ಕಾರ್ಮಿಕರ ಮುಖಂಡರೊಂದಿಗೆ ಇಂದು ಸಿಎಂ ಕುಮಾರಸ್ವಾಮಿ ಮಾತುಕತೆ

ಬೇಡಿಕೆ ಈಡೇರಿಸುವ ಭರವಸೆ ನೀಡಿದರೆ ಮುಷ್ಕರ ಹಿಂದಕ್ಕೆ: ನಾರಾಯಣ

ಮೈಸೂರು: ಗುತ್ತಿಗೆ ಪದ್ಧತಿ ರದ್ದುಪಡಿಸಿ, ಪಾಲಿಕೆಯಿಂದಲೇ ನೇರವಾಗಿ ವೇತನ ಪಾವತಿಸುವುದಾಗಿ ಸಿಎಂ ಭರವಸೆ ನೀಡಿ ಆದೇಶ ಹೊರಡಿಸಲು ಮುಂದಾದರೆ ಕಳೆದ 6 ದಿನಗಳಿಂದ ನಡೆಸು ತ್ತಿರುವ ಮುಷ್ಕರವನ್ನು ಕೈಬಿಟ್ಟು ಸ್ವಚ್ಛತಾ ಕೆಲಸ ಆರಂಭಿಸುತ್ತೇವೆ ಎಂದು ಪೌರಕಾರ್ಮಿ ಕರ ಸಂಘದ ರಾಜ್ಯಾಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಪಾಲಿಕೆ ಕಮೀಷ್ನರ್‍ರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ, ಸಂಸದ ಪ್ರತಾಪಸಿಂಹ ಹಾಗೂ ಶಾಸಕರೊಂದಿಗೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಮಾಲೋಚನೆ ನಡೆಸುತ್ತಿದ್ದ ವೇಳೆ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮೊಬೈಲ್‍ನಲ್ಲಿ ಮಾತ ನಾಡಿಸಿದರು ಎಂದರು. ನಿಮ್ಮ ಬೇಡಿಕೆಗಳು ನನ್ನ ಗಮನಕ್ಕೆ ಬಂದಿದೆ.

ಮಂಗಳವಾರ ನಿಮ್ಮನ್ನು ಬೆಂಗಳೂರಿಗೆ ಕರೆಸಿಕೊಂಡು ಚರ್ಚಿಸಿ, ಬೇಡಿಕೆ ಈಡೇರಿಸುತ್ತೇನೆ ದಸರಾ ಮಹೋತ್ಸವ ಇರುವುದರಿಂದ ಮುಷ್ಕರ ಕೈಬಿಟ್ಟು ಸ್ವಚ್ಛತಾ ಕೆಲಸದಲ್ಲಿ ನಿರತರಾಗಿ ಸಹಕರಿಸಿ ಎಂದು ಕೇಳಿಕೊಂಡ ಹಿನ್ನೆಲೆ ಯಲ್ಲಿ ಭಾನುವಾರದಿಂದ 600 ಖಾಯಂ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವಂತೆ ತಾವು ಸಲಹೆ ನೀಡಿದ ಹಿನ್ನೆಲೆಯಲ್ಲಿ ದಸರಾ ವೇಳೆ ನೇಮಿಸಿಕೊಂಡಿ ರುವ 300 ಮಂದಿ ತಾತ್ಕಾಲಿಕ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದರು. ಮುಖ್ಯಮಂತ್ರಿಗಳು ನಾಳೆ (ಮಂಗಳವಾರ)ಸಭೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವರೆಂಬ ವಿಶ್ವಾಸವಿದೆ. ಅವರ ಭರವಸೆ ನಮಗೆ ತೃಪ್ತಿ ತಂದರೆ, ತತ್‍ಕ್ಷಣದಿಂದಲೇ ಪಾಲಿಕೆ ಗುತ್ತಿಗೆ ಪೌರಕಾರ್ಮಿ ಕರು ಮುಷ್ಕರ ಸ್ಥಗಿತಗೊಳಿಸಿ ಮೈಸೂರು ನಗರದಾದ್ಯಂತ ಸ್ವಚ್ಛತಾ ಕೆಲಸವನ್ನು ಸಮಾರೋಪಾದಿಯಲ್ಲಿ ನಿರ್ವಹಿಸುತ್ತೇವೆ ಎಂದು ನಾರಾಯಣ ತಿಳಿಸಿದರು. ಒಂದು ವೇಳೆ ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸದಿದ್ದಲ್ಲಿ ಖಾಯಂ ಪೌರಕಾರ್ಮಿಕರನ್ನು ವಾಪಸ್ ಕರೆಸಿಕೊಂಡು ಮುಷ್ಕರ ಮುಂದುವರೆಸುವುದಲ್ಲದೆ, ರಾಜ್ಯಾದ್ಯಂತ ಪ್ರತಿಭಟನೆಯನ್ನು ವಿಸ್ತರಿಸುತ್ತೇವೆ ಎಂದು ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆಯೇ ಸಚಿವ ಸಂಪುಟದಲ್ಲಿ ನಿರ್ಧಾರವಾಗಿದ್ಧರೂ, ಸರ್ಕಾರ ಆದೇಶ ರೂಪದಲ್ಲಿ ಜಾರಿಗೊಳಿಸಿಲ್ಲ ಅದರಿಂದ ಸರ್ಕಾರಕ್ಕೆ ಯಾವುದೇ ಹಣಕಾಸಿನ ಹೊರೆಯಾಗುವು ದಿಲ್ಲ. ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿ ಯಿಂದಾಗಿ ಅದು ಜಾರಿಯಾಗಿಲ್ಲ ಎಂದು ನಾರಾಯಣ ಆರೋಪಿಸಿದರು.

ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೂ ಸ್ಥಳೀಯ ಸಂಸ್ಥೆಗಳಿಂದಲೇ ವೇತನ ಪಾವತಿಸಬೇಕು. ಮೂರು ವರ್ಷದಿಂದ ಉಪಹಾರ ಕೊಡದಿರುವುದರಿಂದ ಪ್ರತೀ ಪೌರಕಾರ್ಮಿಕರಿಗೆ 25,000 ರೂ.ಗಳಂತೆ ಉಪಹಾರದ ಹಣ ಪಾವತಿಸಬೇಕು ಎಂದು ನಾರಾಯಣ ಇದೇ ವೇಳೆ ಆಗ್ರಹಿಸಿದರು.

ಪೌರಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಹೋರಾಟಕ್ಕೆ ಬಿಜೆಪಿ ಪೂರ್ಣ ಬೆಂಬಲ

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಪೌರಕಾರ್ಮಿಕರ ಹೋರಾಟಕ್ಕೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಲಿದ್ದು, ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಬಿಜೆಪಿ ಮುಖಂಡ ಕೆ.ಶಿವರಾಂ ತಿಳಿಸಿದರು.

ಪ್ರತಿಭಟನಾನಿರತ ಸ್ಥಳದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಪೌರಕಾರ್ಮಿಕರ ಹೋರಾಟಕ್ಕೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರಕಾರ್ಮಿಕ ಪದ್ಧತಿ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ರದ್ದುಗೊಳಿಸಿ, ಪೌರಕಾರ್ಮಿಕರ ಖಾಯಂಗೊಳಿಸುವ ಮೂಲಕ ಹಿಂದಿನ ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸಲಾಗಿದೆ. ಕೂಡಲೇ ಮೈಸೂರು ಪಾಲಿಕೆಯ ಪೌರಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ONE COMMENT ON THIS POST To “ಮೈಸೂರು ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ ಮುಂದುವರಿಕೆ”

  1. rudramurthy l says:

    super

Translate »