ಮೈಸೂರು: ಮುಷ್ಕರ ನಿರತ ಪೌರ ಕಾರ್ಮಿಕರೊಂದಿಗೆ ಜಿಲ್ಲಾಡಳಿತ ನಡೆಸಿದ ಮಾತುಕತೆ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ದೂರವಾಣಿ ಮೂಲಕ ಭರವಸೆ ನೀಡಿದರೂ ಪ್ರತಿಭಟನೆ ಕೈಬಿಡಲು ಒಪ್ಪದ ಪೌರ ಕಾರ್ಮಿಕರ ಮುಖಂಡರು, ಈ ಸಂಬಂಧ ನಾಳೆ(ಅ.7) ಒಮ್ಮತದ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ.
ಖಾಯಂಮಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೈಸೂರು ನಗರ ಪಾಲಿಕೆ ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪೌರಕಾರ್ಮಿಕ ಮುಖಂಡರ ಸಭೆ ನಡೆಸಿ, ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು, ದಸರಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿಭಟನೆ ಮುಂದುವರಿಸಬೇಡಿ. ದಸರಾ ಮುಗಿದ ಕೂಡಲೇ ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ನಿಮ್ಮ ಪರವಾಗಿದ್ದಾರೆ. ಪ್ರತಿಭಟನೆ ಕೈಬಿಟ್ಟು, ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿಕೊಂಡಿದ್ದು, ಇದಕ್ಕೆ ಒಪ್ಪದ ಪೌರ ಕಾರ್ಮಿಕ ಮುಖಂಡರು, ನಮ್ಮ ಬೇಡಿಕೆಗಳ ಈಡೇರಿಸುವ ಬಗ್ಗೆ ಸರ್ಕಾರದ ಅಧಿಕೃತ ಆದೇಶ ಬರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು ಎನ್ನಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್‍ಸಿಂಹ, ಶಾಸಕರಾದ ತನ್ವೀರ್‍ಸೇಠ್ ಹಾಗೂ ಎಲ್.ನಾಗೇಂದ್ರ ಅವರೂ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು ಎನ್ನಲಾಗಿದೆ.
ಸಭೆಯ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಜಿ.ಟಿ.ದೇವೇ ಗೌಡರಿಗೆ ಕರೆ ಮಾಡಿ, ಸಭೆಯ ಬಗ್ಗೆ ವಿಚಾರಿಸಿದ್ದಾರೆ. ಪ್ರತಿಭಟನೆ ಕೈಬಿಡಲು ಒಪ್ಪುತ್ತಿಲ್ಲ ಎಂದು ಪ್ರತಿಕ್ರಿಯಿಸಿದ ಜಿಟಿಡಿ, ಕರ್ನಾಟಕ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ಅವರೊಂದಿಗೆ ಮಾತನಾಡುವಂತೆ ಹೇಳಿ ಫೋನ್ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ನಾರಾಯಣ ಅವರೊಂದಿಗೆ ಮಾತನಾಡಿ, ಮೂರು ದಿನ ಕಳೆದರೆ ದಸರಾ ಮಹೋತ್ಸವ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದರೆ ತೊಂದರೆಯಾಗುತ್ತದೆ.
ನಾನು ನಿಮ್ಮ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ. ಮಂಗಳವಾರ ಪೌರಕಾರ್ಮಿಕ ಮುಖಂಡರು ಬೆಂಗಳೂರಿಗೆ ಬನ್ನಿ. ಎಲ್ಲಾ ಅಧಿಕಾರಿಗಳನ್ನೂ ಕರೆಯುತ್ತೇನೆ. ಸಭೆ ನಡೆಸಿ ಚರ್ಚೆ ಮಾಡೋಣ. ನಾನು ನಿಮ್ಮ ಪರವಾಗಿದ್ದೇನೆ ಎಂದು ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಮಂಗಳವಾರ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ ಪೌರ ಕಾರ್ಮಿಕ ಮುಖಂಡರು, ಪ್ರತಿಭಟನೆ ಕೈಬಿಡುವ ಬಗ್ಗೆ ಪ್ರತಿಭಟನಾ ನಿರತ ಕಾರ್ಮಿಕರೊಂದಿಗೆ ಚರ್ಚಿಸಿ, ತೀರ್ಮಾನಿಸುವುದಾಗಿ ಸಭೆಗೆ ತಿಳಿಸಿದರು. ಇದರೊಂದಿಗೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಮಹತ್ವದ ಸಭೆ ಅಂತ್ಯವಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಮುಖ್ಯಮಂತ್ರಿಗಳೇ ಪೌರ ಕಾರ್ಮಿಕ ಮುಖಂಡ ನಾರಾಯಣ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮಂಗಳವಾರ ಸಭೆ ನಡೆಸಿ, ಚರ್ಚಿಸಲು ಬೆಂಗಳೂರಿಗೆ ಆಹ್ವಾನಿಸಿ, ತಕ್ಷಣಕ್ಕೆ ಪ್ರತಿಭಟನೆ ಕೈಬಿಡುವಂತೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪೌರಕಾರ್ಮಿಕ ಸಂಘದ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಮುಖಂಡರು ತಿಳಿಸಿದ್ದಾರೆ ಎಂದರು.
ಸ್ವಚ್ಛತೆಗಿಳಿಯಲಿದ್ದಾರಾ ಪೌರ ಕಾರ್ಮಿಕರು…?
ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ಎಲ್ಲಾ ಪೌರ ಕಾರ್ಮಿಕರನ್ನೂ ಖಾಯಂಗೊಳಿಸಿ, ಮುಂದಿನ ತಿಂಗಳಿಂದ ಪಾಲಿಕೆಯಿಂದ ನೇರ ವೇತನ ನೀಡಬೇಕು. ಒಳಚರಂಡಿ ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ಸಹಾಯಕರೆಂದು ಕರೆಯಲಾಗುತ್ತಿರುವ ಎಲ್ಲಾ ಕಾರ್ಮಿಕರನ್ನೂ ಪೌರ ಕಾರ್ಮಿಕರೆಂದೇ ಪರಿಗಣಿಸಿ, ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ದಿನಕ್ಕೆ 20 ರೂ.ಗಳಂತೆ 3 ವರ್ಷದಿಂದ ಬಾಕಿಯಿರುವ ತಲಾ ಸುಮಾರು 21 ಸಾವಿರ ರೂ. ಉಪಹಾರ ಭತ್ಯೆಯನ್ನು ದಸರಾ ಆರಂಭಕ್ಕೂ ಮುನ್ನ ನೀಡಬೇಕು. 700 ಸಾರ್ವಜನಿಕರಿಗೆ ಒಬ್ಬ ಪೌರಕಾರ್ಮಿಕರಂತೆ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಬೇಕೆಂಬ ಆದೇಶವನ್ನು ಕೈಬಿಡಬೇಕು.
ಈಗಿರುವ ಯಾವ ಕಾರ್ಮಿಕರನ್ನೂ ಕೆಲಸದಿಂದ ತೆಗೆಯಬಾರದು. ಹೀಗೆ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ನಗರ ಪಾಲಿಕೆ ಮುಂದೆ ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕು ದಿನ ಪೂರೈಸಿದೆ. ಪರಿಣಾಮ ದಸರಾ ಸಂದರ್ಭದಲ್ಲಿ ಮೈಸೂರು ಗಬ್ಬೆದ್ದು ನಾರುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಮಾತುಕತೆಯೂ ವಿಫಲವಾಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ದೂರವಾಣಿ ಮೂಲಕ ಪೌರ ಕಾರ್ಮಿಕ ಮುಖಂಡರಿಗೆ ಭರವಸೆ ನೀಡಿ, ಮಂಗಳವಾರ ಸಭೆಗೂ ಆಹ್ವಾನಿಸಿದ್ದಾರೆ. ಮುಖ್ಯಮಂತ್ರಿಗಳ ಭರವಸೆ ಬಗ್ಗೆ ನಂಬಿಕೆಯಿಟ್ಟಿರುವ ಪೌರಕಾರ್ಮಿಕರು, ಭಾನುವಾರ ಬೆಳಿಗ್ಗೆ ಸಭೆ ನಡೆಸಿ, ಒಮ್ಮತದ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ. ಸಿಎಂ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟು, ಸ್ವಚ್ಛತಾ ಕಾರ್ಯಕ್ಕಿಳಿಯಲಿದ್ದಾರಾ? ಅಥವಾ ಮಂಗಳವಾರದವರೆಗೂ ಪ್ರತಿಭಟನೆ ಮುಂದುವರಿಸಲಿದ್ದಾರಾ? ಎಂಬುದು ತಿಳಿಯಲಿದೆ.
ಭಾನುವಾರ ತೀರ್ಮಾನ…
ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರ ಕಾರ್ಮಿಕ ಮುಖಂಡರು, ಸಭೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿದರು. ಮುಖಂಡ ನಾರಾಯಣ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಯವರೇ ನನ್ನೊಂದಿಗೆ ಮಾತನಾಡಿದ್ದು, ನಾನು ನಿಮ್ಮ ಸಮಸ್ಯೆಗಳು, ಬೇಡಿಕೆಗಳನ್ನು ತಿಳಿದಿದ್ದೇನೆ. ನಾನು ನಿಮ್ಮ ಪರವಾಗಿದ್ದೇನೆ. ಮಂಗಳವಾರ ಸಭೆಗೆ ಬನ್ನಿ ಚರ್ಚೆ ನಡೆಸಿ, ತೀರ್ಮಾನಿಸೋಣ. ಸದ್ಯ ಪ್ರತಿಭಟನೆಯನ್ನು ಕೈಬಿಡಿ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾರ್ಮಿಕರ ಹೋರಾಟದ ಫಲವಾಗಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ನಮ್ಮೆಲ್ಲಾ ಬೇಡಿಕೆಗಳು ಈಡೇರುವ ಭರವಸೆ ಮೂಡಿದೆ. ಆದರೆ ತಕ್ಷಣಕ್ಕೆ ಪ್ರತಿಭಟನೆ ಕೈಬಿಡಲು ಆಗುವುದಿಲ್ಲ. ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರ ಅಭಿಪ್ರಾಯ ಪಡೆದು, ತೀರ್ಮಾನಿ ಸುತ್ತೇವೆಂದು ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವೆ. ಹಾಗಾಗಿ ನಾವೆಲ್ಲಾ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಬೇಕು. ಈಗ ಎಲ್ಲರೂ ಮನೆಗೆ ಹೋಗಿ. ನಾಳೆ(ಅ.7) ಬೆಳಿಗ್ಗೆ 9 ಗಂಟೆಗೆ ಎಲ್ಲರೂ ಸೇರಿ, ಒಮ್ಮತದ ತೀರ್ಮಾನಕ್ಕೆ ಬರೋಣ ಎಂದು ಹೇಳಿದರು.