ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೈಸೂರು

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

October 7, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಶನಿ ವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.

ಮೈಸೂರು ಅರಮನೆಗೆ ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಆಹ್ವಾನಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಪರಿಷತ್ ಸದಸ್ಯ ಧರ್ಮಸೇನಾ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಮೈಸೂರು ಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಇಂದು ಅಧಿಕೃತವಾಗಿ ಆಹ್ವಾನ ನೀಡಿದ್ದು, ಸಂತೋಷದಿಂದ ಸ್ವೀಕರಿಸಿದ್ದಾರೆ. ಗೌರವ ಧನದ ಚೆಕ್ ಬಂದಿಲ್ಲ. ಬಂದ ನಂತರ ಚೆಕ್ಅ ನ್ನು ಜಿಲ್ಲಾಧಿಕಾರಿಗಳು ನೀಡುತ್ತಾರೆ. ದಸರಾ ಮಹೋತ್ಸವಕ್ಕೆ ಪ್ರಮೋದಾದೇವಿ ಒಡೆಯರ್ ಎಲ್ಲಾ ರೀತಿಯ ಸಹಕಾರ ನೀಡು ವುದಾಗಿ ಹೇಳಿದ್ದಾರೆ ಎಂದರು.

ಈ ಬಾರಿ ದಸರಾ ಉಪಸಮಿತಿಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಸದ್ಯದಲ್ಲೇ ಉಪಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದ ಅವರು, ಈ ಬಾರಿ ದಸರಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿದ್ದಾರೆ ಎಂಬುದು ಸುಳ್ಳು. ಇಂದು ಸಚಿವರಾದ ಪುಟ್ಟರಂಗಶೆಟ್ಟಿ, ವಿಧಾನಪರಿಷತ್ ಸದಸ್ಯ ಧರ್ಮಸೇವಾ ಅವರು ನಮ್ಮೊಂದಿಗಿದ್ದು, ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.

ರಾಜಕೀಯ ಮಾಡಬೇಡಿ: ಅರಮನೆ ವಿಚಾರದಲ್ಲಿ ಅವರ ಮತ್ತು ನಮ್ಮ ನಡುವೆ ರಾಜಕೀಯ ಮಾಡಬೇಡಿ. ಅರಮನೆ ಗೌರವವನ್ನು ಕಾಪಾಡುವ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ ಎಂದರು.

ತನ್ವೀರ್ ರಾಜನಂತೆ: ಮಾಜಿ ಸಚಿವ ತನ್ವೀರ್‌ ಸೇಠ್‌ ಅವರು ಹಿರಿಯ ನಾಯಕರಾಗಿದ್ದು, ಹಿಂದಿನಿಂದಲೂ ದಸರಾ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ. ತನ್ವೀರ್‌ ಸೇಠ್‌ ಅವರು ಯಾವತ್ತು ಕೂಡ ಮೈಸೂರು ರಾಜಧಾನಿಯಲ್ಲಿ ರಾಜನಂತೆ ನಮಗೆ ಬೆಂಬಲ ನೀಡಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಪ್ರತಿ ವರ್ಷದಂತೆ ಈ ಬಾರಿಯೂ ಆಹ್ವಾನ ನೀಡಿದ್ದು, ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಸಚಿವ ಸಾರಾ ಮಹೇಶ್ ಮಾತನಾಡಿ, ಈ ಬಾರಿ ದಸರಾ ಮಹೋತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪ್ರಮುಖ ಆಕರ್ಷಣೆಯಾಗಿ ಚೀನಾ ದೇಶದವರಿಂದ ದಸರಾ ವಸ್ತುಪ್ರದರ್ಶನದಲ್ಲಿ ಶೋ ಆಯೋಜಿಸಲಾಗಿದೆ. ಜತೆಗೆ ಪ್ರವಾಸಿಗರನ್ನು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಬ್ರೋಚರ್, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜಾಹಿರಾತು ನೀಡಲಾಗುತ್ತಿದೆ. ಪ್ರವಾಸೋದ್ಯಮದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದೆ. ಹೊರ ದೇಶದಿಂದ 22 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರತಿ ವರ್ಷ 3 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ಇದನ್ನು ಹೆಚ್ಚು ಮಾಡ ಬೇಕೆಂಬುದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಶಯವಾಗಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

Translate »