ಮೈಸೂರು: ಮುಖ್ಯಮಂತ್ರಿಗಳೊಂದಿಗಿನ ಮಾತುಕತೆ ಯಶಸ್ವಿಯಾಗಿದ್ದು, ಇದರೊಂದಿಗೆ ಕಳೆದ 7 ದಿನಗಳಿಂದ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರ ಅಂತ್ಯ ಗೊಂಡಿದೆ.
ತಮ್ಮ ಬೇಡಿಕೆ ಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿರುವುದರಿಂದ ಮುಷ್ಕರ ಕೈಬಿಟ್ಟು ಇಂದು ರಾತ್ರಿಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವಂತೆ ತಾವು ಪೌರ ಕಾರ್ಮಿಕರಿಗೆ ಸೂಚನೆ ನೀಡಿದ್ದೇನೆ ಎಂದು ಪೌರ ಕಾರ್ಮಿಕರ ಸಂಘದ ಮುಖಂಡರಾದ ಮಾಜಿ ಮೇಯರ್ ನಾರಾಯಣ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಎಲ್ಲಾ 2000 ಮಂದಿ ಪೌರಕಾರ್ಮಿ ಕರು ಇಂದು ರಾತ್ರಿಯಿಂದಲೇ ಮೈಸೂರು ನಗರದ ಎಲ್ಲಾ 65 ವಾರ್ಡುಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಲಿದ್ದು, ನಾಳೆ (ಅ.10) ಸಂಜೆಯೊಳಗೆ ನಗರವನ್ನು ಸ್ವಚ್ಛಗೊಳಿಸಿ ದಸರೆಗೆ ಸಜ್ಜುಗೊಳಿಸಲಾಗುವುದು ಎಂದು ನಾರಾಯಣ ತಿಳಿಸಿದರು.
ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಸ್ಥಳೀಯ ಸಂಸ್ಥೆಗಳಿಂದಲೇ ನೇರವಾಗಿ ಪೌರಕಾರ್ಮಿಕರಿಗೆ ವೇತನ ಪಾವತಿಸಬೇಕು. 700 ಜನಸಂಖ್ಯೆಗೊಬ್ಬರ ಬದಲಾಗಿ 500 ಜನಸಂಖ್ಯೆಗೊಬ್ಬರಂತೆ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುವ ಲೋಡರ್, ಡ್ರೈವರ್ ಗಳನ್ನೂ ಪೌರ ಕಾರ್ಮಿಕರೆಂದು ಪರಿಗಣಿಸಿ ನೇರ ವೇತನ ಪಾವತಿ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು ಎಂದು ಅವರು ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳು ಇಂದು ಮಧ್ಯಾಹ್ನ ಬೆಂಗಳೂರಲ್ಲಿ ಸಭೆ ನಡೆಸಿದಾಗ ನಾವು ಅವರಿಗೆ ಸವಿವರವಾಗಿ ನಮ್ಮ ಬೇಡಿಕೆಗಳನ್ನು ಹೇಳಿಕೊಂಡೆವು. ನಮ್ಮ ಎಲ್ಲಾ ಬೇಡಿಕೆಗಳನ್ನು ಸಾವಧಾನವಾಗಿ ಆಲಿಸಿದ ಹೆಚ್.ಡಿ. ಕುಮಾರ ಸ್ವಾಮಿ ಅವರು, ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುತ್ತೇನೆಂದು ಭರವಸೆ ನೀಡಿದರಲ್ಲದೆ, ಸಚಿವ ಸಂಪುಟ ಸಭೆಗೆ ಈ ವಿಷಯವನ್ನು ತರುವಂತೆಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂದು ನಾರಾಯಣ ತಿಳಿಸಿದರು.