ಮೈಸೂರು: ದಸರಾ ಮಹೋತ್ಸವದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಖಾಸಗಿ ದರ್ಬಾರ್ ನಾಳೆಯಿಂದ(ಅ.10) ಆರಂಭವಾಗಲಿದೆ.
ಅರಮನೆಯ ದರ್ಬಾರ್ ಹಾಲ್‍ನಲ್ಲಿ ರಾಜಪರಂಪರೆಯೂ ಆದ ಖಾಸಗಿ ದರ್ಬಾರ್‍ನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರತ್ನ ಖಚಿತ ಸಿಂಹಾಸನವೇರಿ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನ ನೆರವೇರಿಸಲಿದ್ದಾರೆ.
ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ 4.30ಕ್ಕೆ ಎಣ್ಣೆಶಾಸ್ತ್ರ ನಡೆಯಲಿದೆ. ನಂತರ ಅ.4ರಂದು ದರ್ಬಾರ್ ಹಾಲ್‍ನಲ್ಲಿ ಜೋಡಿಸಲ್ಪಟ್ಟಿರುವ ಚಿನ್ನದ ಸಿಂಹಾಸನಕ್ಕೆ ಬೆಳಿಗ್ಗೆ 5.30ರಿಂದ 6ಗಂಟೆಯೊಳಗೆ ಸಿಂಹವನ್ನು ಜೋಡಿಸಲಾಗುತ್ತದೆ.
ಬೆ. 7.02ರಿಂದ 7.45ರೊಳಗೆ ಚಾಮುಂಡಿ ತೊಟ್ಟಿ ಹಾಗೂ ವಾಣಿ ವಿಲಾಸ ದೇವರ ಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ನಡೆಯಲಿದೆ. 10ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳೊಂದಿಗೆ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿಯಿಂದ ದೇವರನ್ನು ತಂದು ಅರಮನೆಯ ಸವಾರ್ ತೊಟ್ಟಿಗೆ ಕರೆತರಲಾಗುತ್ತದೆ. 10.55ರಿಂದ 11.15ಕ್ಕೆ ಸಿಂಹಾಸನರೋಹಣಕ್ಕೆ ಸಂಬಂಧಿಸಿದ ಪೂಜಾ ಕೈಂಕರ್ಯಗಳು ಜರುಗಲಿವೆ.
11.45ರಿಂದ ಮಧ್ಯಾಹ್ನ 12.02ರೊಳಗೆ ಯದುವೀರ್ ಅವರು ಸಿಂಹಾಸನದ ಮೇಲೆ ಆಸೀನರಾಗಿ ದರ್ಬಾರ್ ನಡೆಸಲಿದ್ದಾರೆ.