ಸುಧಾಮೂರ್ತಿ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ
ಮೈಸೂರು, ಮೈಸೂರು ದಸರಾ

ಸುಧಾಮೂರ್ತಿ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ

October 10, 2018

ಮೈಸೂರು:  ‘ಎನಿತು ಜನರಿಗೆ, ಎನಿತು ಜನ್ಮಗಳಿಗೆ, ನಾನು ಎನಿತು ಋಣಿಯೋ, ಹಾಗೆ ನೋಡಿದರೆ ಈ ಜನ್ಮವೆಂಬುದು ಒಂದು ಋಣದ ಗಣಿಯೋ….’ ಹೀಗೆ ಕನ್ನಡದ ಜನತೆಗೆ ನಾನು ಋಣಿಯಾಗಿದ್ದೇನೆ ಎಂದು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲಿರುವ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.

ದಸರಾ ಉದ್ಘಾಟನೆಗಾಗಿ ಮಂಗಳವಾರ ಮೈಸೂರಿಗೆ ಆಗಮಿಸಿದ ಶ್ರೀಮತಿ ಸುಧಾಮೂರ್ತಿ ಅವರನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ಅವರು, ಮೈಸೂರು ದಸರಾ ಉದ್ಘಾಟನೆ ಮಾಡುವುದು ಓರ್ವ ವ್ಯಕ್ತಿಗೆ ಸಿಗುವ ಅತ್ಯಂತ ದೊಡ್ಡ ಗೌರವ. ಈ ಅವಕಾಶ ಸಿಕ್ಕಿದಾಗ ಯಾರಿಗೆ ಖುಷಿ ಯಾಗುವುದಿಲ್ಲ ಹೇಳಿ?. ನಾನೆಂದೂ ಊಹಿಸಿರಲಿಲ್ಲ. ವಿಷಯ ತಿಳಿದಾಗ ನನ್ನ ಕೈಯಿಂದ ದಸರಾ ಉದ್ಘಾಟನೆ ಮಾಡಿಸುತ್ತಾರಾ ಎಂದು ಆಶ್ಚರ್ಯವಾಯಿತು. ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್ ಪಡೆದಷ್ಟೇ ಸಂತೋಷವಾಯಿತು ಎಂದು ಹೇಳಿದರು.

ಪಠ್ಯದಲ್ಲಿ ಅಳವಡಿಸಬೇಕು: ಮೈಸೂರು ದಸರಾ ಎಲ್ಲಾ ಹಬ್ಬಗಳಂತಲ್ಲ. ತುಂಬಾ ವಿಶೇಷವಾದ ನಾಡಹಬ್ಬ. ಇದು ನಾಡಿನ ಸಂಸ್ಕೃತಿಯ ಪ್ರತೀಕ. ಮೈಸೂರು ದಸರೆಗೆ ಇತಿಹಾಸದ ನಂಟಿದೆ. ಸಂಸ್ಕೃತಿಯ ಪ್ರತೀಕ ವಾದ ಹಬ್ಬವನ್ನು ಎಲ್ಲರೂ ಸಂತೋಷ ದಿಂದ ಆಚರಿಸಬೇಕು.

ಮುಂದಿನ ಪೀಳಿಗೆಗೆ ದಸರೆಯ ಬಗ್ಗೆ ಹೇಳಿಕೊಡಬೇಕು. ಮೈಸೂರು ದಸರಾ ಮಹೋತ್ಸವದ ಬಗ್ಗೆ ಶಾಲಾ ಪಠ್ಯದಲ್ಲಿ ಅಳವಡಿಸಬೇಕು. ಹೀಗೆ ಮಕ್ಕಳಿಗೆ ದಸರಾ ಬಗ್ಗೆ ಅರಿವು ಮೂಡಿಸಬೇಕು. ಯುವ ಜನತೆಗೆ ದಸರಾ ಬಗ್ಗೆ ಗೌರವ, ಉತ್ಸಾಹ ಮೂಡುವಂತಹ ಕಾರ್ಯಗಳಾಗಬೇಕೆಂದು ಸುಧಾಮೂರ್ತಿ ಆಶಿಸಿದರು.

ಕೊಡಗಿಗಾಗಿ ಕೈಜೋಡಿಸಬೇಕು: ಒಂದು ಮನೆಯಲ್ಲಿರುವ ನಾಲ್ಕಾರು ಮಕ್ಕಳಲ್ಲಿ ಒಬ್ಬರಿಗೆ ಹುಷಾರಿಲ್ಲ ಎಂದಾಗ ಬೇಜಾರು ಇದ್ದೇ ಇರುತ್ತದೆ ಎನ್ನುವ ಮೂಲಕ ನೆರೆ ಜಿಲ್ಲೆ ಕೊಡಗಿನಲ್ಲಾದ ಪ್ರಕೃತಿ ವಿಕೋಪದ ಪರಿಣಾಮದ ಬಗ್ಗೆ ವಿಶ್ಲೇಷಿಸಿದ ಸುಧಾಮೂರ್ತಿ ಅವರು, ನಾವೆಲ್ಲಾ ಕೂಡಿ ಕೊಡಗಿಗೆ ಸಹಾಯ ಮಾಡಲೇಬೇಕಲ್ಲವೇ. ಈ ಬಗ್ಗೆ ನಾಳೆ ಮಾತಾಡ್ತೇನೆ. ದಸರಾ ಹಬ್ಬವನ್ನು ಸರಳವಾಗಿ ಮಾಡುವುದಕ್ಕೂ ಸಂತೋಷಪಡುವುದಕ್ಕೂ ಸಂಬಂಧವಿಲ್ಲ. ನಾನು ಯಾವಾಗಲೂ ಸರಳತೆಯನ್ನೇ ಬಯಸುತ್ತೇನೆ. ಸರಳವಾಗಿರುವುದೇ ಒಂದು ಸುಂದರ ಜೀವನ. ಸರಳತೆಯಲ್ಲೇ ಬಹಳ ಸುಖವಿರುತ್ತದೆ. ತುಂಬಾ ಹಣ ಖರ್ಚು ಮಾಡಿದರೆ ಮಾತ್ರ ದಸರಾ ಬಹಳ ಚೆನ್ನಾಗಿರುತ್ತದೆ ಎಂಬ ಅರ್ಥವಲ್ಲ. ನಮಗಿರುವ ಇತಿ ಮಿತಿಯಲ್ಲೇ ನಾವು ಸಂತೋಷ ದಿಂದ ಹಬ್ಬ ಆಚರಿಸಬೇಕು ಎಂದು ಅಭಿಪ್ರಾಯಿಸಿದರು.

ಬದಲಾವಣೆ ಜೀವನದ ಭಾಗ: 1959ರಲ್ಲಿ ಜಯ ಚಾಮರಾಜ ಒಡೆಯರ್ ಅವರು ಜಂಬೂ ಸವಾರಿಯಲ್ಲಿ ಸಾಗಿದ್ದನ್ನು ನಾನು ನೋಡಿದ್ದೆ. ಆಗ ನನಗೆ ಸುಮಾರು ಎಂಟೂವರೆ ವರ್ಷವಿರಬಹುದು ಅಷ್ಟೇ. ನಂತರ ನೇರವಾಗಿ ದಸರಾ ನೋಡುತ್ತಿರುವುದು ಈಗಲೇ. 60 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆಗ ಹುಡುಗಿಯಾಗಿದ್ದ ನಾನು ಈಗ ಮುದುಕಿಯಾಗಿದ್ದೇನೆ. ಆಗ ಒಂದು ರಿಬ್ಬನ್ ಕೊಡಿಸಿ, ಅಂಬಾರಿ ತೋರಿಸಿದರೆ ಸಾಕು ಸಂತೋಷವಾಗು ತ್ತಿತ್ತು. ಈಗ ಸ್ತಬ್ದ ಚಿತ್ರಗಳು, ಯೋಗ ದಸರಾ, ಚಿಣ್ಣರ ದಸರಾ, ಹೀಗೆ ವೈವಿದ್ಯಮಯ ಕಾರ್ಯಕ್ರಮಗಳಿವೆ. ಜನರ ಕುತೂಹಲ, ನೋಡುವ ಆಸಕ್ತಿ ಹೆಚ್ಚಾಗಿದೆ. ಬದಲಾವಣೆ ಎಂಬುದು ಜೀವನ ಪಯಣದ ಅತ್ಯಂತ ಮಹತ್ವದ ಭಾಗ ಎಂದರು.

ನಾಡಿನ ಸಂಸ್ಕೃತಿ ಉಳಿಸಿಕೊಳ್ಳುವ ಪ್ರಯತ್ನ ಎಲ್ಲರಿಂದಾಗಬೇಕು

ಮೈಸೂರು: ನಾಡಿನ ಸಂಸ್ಕೃತಿ, ಭಾಷೆಯ ಬಗ್ಗೆ ಅಭಿಮಾನವಿರಬೇಕು. ಇದನ್ನು ಗೌರವಯುತವಾಗಿ ಉಳಿಸಿಕೊಳ್ಳುವ ಪ್ರಯತ್ನ ಎಲ್ಲರಲ್ಲಿರಬೇಕು. ಇದು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ನೆರವೇರಿಸಲಿರುವ ಹೆಮ್ಮೆಯ ಸಾಧಕಿ ಸುಧಾಮೂರ್ತಿ ಅವರ ಮನದಾಳದ ಮಾತು.

ಸೋಮವಾರ ಮೈಸೂರಿಗೆ ಆಗಮಿಸಿದ ಸುಧಾಮೂರ್ತಿ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಬಗ್ಗೆ ಅವರಲ್ಲಿರುವ ಅಭಿಮಾನವನ್ನು ಹೆಮ್ಮೆಯಿಂದ ಹೇಳಿಕೊಂಡರಲ್ಲದೆ, ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ನನಗಷ್ಟೇ ಅಲ್ಲ, ನಮ್ಮ ಕುಟುಂಬಕ್ಕೆ ಆಶ್ಚರ್ಯ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ದಸರಾ ಉದ್ಘಾಟನೆ ಅವಕಾಶ ನನಗೆ ಲಭಿಸಿದ್ದು, ಕುಟುಂಬದವರಲ್ಲಿ ಸಂತೋಷದ ಜೊತೆಗೆ ಆಶ್ಚರ್ಯವನ್ನೂ ಮೂಡಿಸಿತ್ತು. ನನ್ನ ಪತಿ ನಾರಾಯಣ ಮೂರ್ತಿ ಸೇರಿದಂತೆ ಅಮೇರಿಕಾದಿಂದ ನನ್ನ ಸಹೋದರ, ಲಂಡನ್‍ನಿಂದ ನನ್ನ ಪುತ್ರಿ ನನ್ನೊಡನೆ ಬಂದಿದ್ದಾರೆ. ಅಮೇರಿಕಾದಲ್ಲಿರುವ ಸಹೋದರಿ ಜಂಬೂ ಸವಾರಿ ದಿನದಂದು ಬರುತ್ತಿದ್ದಾರೆ. ದಸರಾ ಮುಗಿಯುವವರೆಗೂ ನಾನು ಮೈಸೂರಿನಲ್ಲೇ ಇರುತ್ತೇನೆ. 10 ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆವರೆಗೆ ಇನ್ಫೋಸಿಸ್ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ಸಂಜೆ ವೇಳೆ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇನೆಂದು ತಿಳಿಸಿದರು.

ಮೈಸೂರೆಂದರೆ ಮಲ್ಲಿಗೆ: ಮೈಸೂರೆಂದರೆ ನನಗೆ ಮೊದಲು ನೆನಪಾಗುವುದೇ ಮೈಸೂರು ಮಲ್ಲಿಗೆ. ಜೊತೆಗೆ ಚಾಮುಂಡಿ ಬೆಟ್ಟ, ಮೈಸೂರು ದಸರಾ, ಮೃಗಾಲಯ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನ ಸ್ಮರಣೆಗೆ ಬರುತ್ತವೆ. ನಾನು ಚಿಕ್ಕವಳಿದ್ದಾಗ ಜಯಚಾಮರಾಜ ಒಡೆಯರ್ ಅವರು ಅಂಬಾರಿಯಲ್ಲಿ ಸಾಗಿದ ದಸರಾ ನೋಡಿದ್ದೆ. ಕುಟುಂಬದವರೊಡನೆ ಅಂದು ಕೆಆರ್‍ಎಸ್‍ಗೆ ಹೋಗಿದ್ದು, ರಿಬ್ಬನ್ ತೆಗೆಸಿಕೊಂಡಿದ್ದು ಹೀಗೆ ಒಂದಷ್ಟು ನೆನಪಿದೆ. ನಂತರ ದೂರದರ್ಶನದಲ್ಲಿ ಮಾತ್ರ ದಸರಾ ವೈಭವವನ್ನು ಕಾಣುತ್ತಿದ್ದೆ. ಈಗ 2ನೇ ಬಾರಿಗೆ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸಂಪ್ರಾಯದಂತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ದಸರಾ ಉದ್ಘಾಟನೆ ಮಾಡಲಿದ್ದೇನೆ. ಈ ಸಂದರ್ಭದಲ್ಲಿ ನಾಡಿನ ಜನತೆಗೆ ದಸರಾ ಶುಭಾಶಯ ಸಲ್ಲಿಸುತ್ತೇನೆ. ನಾಡಿನ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಸರಾ ಆಚರಣೆ ಬಗ್ಗೆ ಶಾಲಾ ಪಠ್ಯದಲ್ಲಿ ಅಳವಡಿಸಿ, ಮನೆಯಲ್ಲೂ ಮಕ್ಕಳಿಗೆ ಪರಂಪರೆ ಮಹತ್ವ ತಿಳಿಸಿಕೊಡಬೇಕು. ಎಲ್ಲರೂ ಸಂಭ್ರಮದಿಂದ ನಾಡಹಬ್ಬ ಆಚರಿಸಬೇಕೆಂದು ಅವರು ಹೇಳಿದರು.

Translate »