ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು

October 10, 2018

ಮೈಸೂರು:  ಅಕ್ಟೋಬರ್ 19ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಗೆ (ವಿಜಯದಶಮಿ ಮೆರವಣಿಗೆ) ಸಾಂಸ್ಕೃತಿಕ ನಗರಿ ಸರ್ವ ರೀತಿಯಲ್ಲಿ ಸಜ್ಜುಗೊಂಡು ಬಿನ್ನಾಣಗಿತ್ತಿಯಂತೆ ಶೃಂಗಾರಗೊಂಡಿದೆ. ವೈಭವಪೂರಿತ ಹಾಗೂ ಐತಿಹಾಸಿಕ ಜಂಬೂ ಸವಾರಿಯಲ್ಲಿ ಈ ಬಾರಿ ತಂಜಾವೂರ್, ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳ 5 ಕಲಾ ತಂಡಗಳ 75 ಮಂದಿ ಕಲಾವಿದರು ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 2000ಕ್ಕೂ ಅಧಿಕ ಕಲಾವಿದರು ಭಾಗವಹಿಸಿ, ನಾಡಿನ ಸಂಸ್ಕೃತಿಯನ್ನು ಪ್ರದರ್ಶಿಸುವರು.

ಸಿಸಿ ಕ್ಯಾಮರಾಗಳು: ಲಕ್ಷಾಂತರ ಮಂದಿ ನೆರೆಯುವುದರಿಂದ ಜಂಬೂ ಸವಾರಿ ಮೆರವಣಿಗೆಗೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ರಾಜಮಾರ್ಗದುದ್ದಕ್ಕೂ 76 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟೆಚ್ಚರ ವಹಿಸಲಾಗುವುದು.

ಭಾರೀ ಭದ್ರತೆ: ಈ ಬಾರಿಯು ದಸರಾ ಮಹೋತ್ಸವಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 5284 ಪೊಲೀಸ್ ಸಿಬ್ಬಂದಿ ಹಾಗೂ 1600 ಹೋಂ ಗಾರ್ಡ್‍ಗಳನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಮಾಂಡೋ ಪಡೆಯ 70 ಸಿಬ್ಬಂದಿ, ಕೆಎಸ್‍ಆರ್‍ಪಿ, ಸಿಎಆರ್, ಡಿಎಆರ್, ಮೌಂಟೆಡ್ ಪಡೆ ಸೇರಿ 57 ತುಕಡಿಗಳು, 46 ಭದ್ರತಾ ತಪಾಸಣಾ ಪಡೆಗಳು, 10 ಮಂದಿ ಎಸ್‍ಪಿ, 39 ಎಎಸ್‍ಪಿ, 113 ಇನ್ಸ್‍ಪೆಕ್ಟರ್‍ಗಳು, 278 ಸಬ್‍ಇನ್ಸ್‍ಪೆಕ್ಟರ್‍ಗಳು, 391 ಎಎಸ್‍ಐಗಳು ದಸರಾ ಬಂದೋಬಸ್ತ್ ಕರ್ತವ್ಯದಲ್ಲಿ ನಿರತ ರಾಗುವರು. 1053 ಸಂಚಾರ ಪೊಲೀಸರು, 2500 ಹೊರ ಜಿಲ್ಲೆಗಳ ಹೆಚ್ಚುವರಿ ಸಿಬ್ಬಂದಿಗಳನ್ನೂ ಬಳಸಿಕೊಳ್ಳಲಾಗುತ್ತಿದೆ.

ಮೊಬೈಲ್ ಕಮಾಂಡೋ ವಾಹನ: ಇದೇ ಮೊದಲ ಬಾರಿ 2.5 ಕೋಟಿ ರೂ. ಮೌಲ್ಯದ ಮೊಬೈಲ್ ಕಮಾಂಡೋ ಸೆಂಟರ್ ವಾಹನವನ್ನು ದಸರಾ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುತ್ತಿದೆ. ಸಿಸಿ ಟಿವಿ ಕ್ಯಾಮರಾಗಳು ಲಾಂಗ್ ಡಿಸ್ಟೆನ್ಸ್ ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ ವ್ಯವಸ್ಥೆ ಇರುವುದರಿಂದ ಯಾವುದಾದರೊಂದು ಪ್ರಮುಖ ಸ್ಥಳದಲ್ಲಿ ನಿಂತು ಅಹಿತಕರ ಘಟನೆಗಳ ಸಚಿತ್ರ ಮಾಹಿತಿ ಸಂಗ್ರಹಿಸಿ, ತಕ್ಷಣ ಸ್ಪಂದಿಸಲು ಇದರಿಂದ ಅನುಕೂಲವಾಗುತ್ತದೆ. ಅದರ ಜೊತೆಗೆ 4 ಡ್ರೋನ್ ಕ್ಯಾಮರಾಗಳ ಮೂಲಕವೂ ಪರಿಸ್ಥಿತಿಯನ್ನು ಸೆರೆ ಹಿಡಿಯಲಾಗುತ್ತದೆ.ಅಪರಾಧ ವಿಭಾಗದ ಸಿಬ್ಬಂದಿ, 16 ಅಗ್ನಿಶಾಮಕ ದಳ, 17 ಆಂಬುಲೆನ್ಸ್‌ಗಳನ್ನು ಮೆರವಣಿಗೆಯಲ್ಲಿ ನಿಯೋಜಿಸಿ, ತುರ್ತು ಸಂದರ್ಭ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಹೆಲ್ಪ್‍ಡೆಸ್ಕ್: ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಮಾಹಿತಿ ನೀಡಲು ಮೈಸೂರಿನ ಪ್ರಮುಖ 30 ಸ್ಥಳಗಳಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅಕ್ಟೋಬರ್ 10 ರಿಂದ 19 ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುವ ಕೇಂದ್ರಗಳಲ್ಲಿ ಜನಮಿತ್ರ ಪೊಲೀಸರು ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡುವರು.

ಮೈಸೂರು-ಬೆಂಗಳೂರು ಹೆದ್ದಾರಿಯ ಚೆಕ್‍ಪೋಸ್ಟ್, ಮಿಲೇನಿಯಂ ಸರ್ಕಲ್, ರೈಲ್ವೇ ನಿಲ್ದಾಣ ವೃತ್ತ, ರೈಲ್ವೇ ನಿಲ್ದಾಣದ ಪಶ್ಚಿಮ ದ್ವಾರ, ಹುಣಸೂರು ರಸ್ತೆ ಚೆಕ್‍ಪೋಸ್ಟ್, ಹೆಬಿಟೆಟ್ ಮಾಲ್ ಬಳಿ, ಕಲಾಮಂದಿರ, ಕೆಆರ್‍ಎಸ್ ರಸ್ತೆ ಚೆಕ್‍ಪೋಸ್ಟ್, ಅರಮನೆ ಬಲರಾಮ ಗೇಟ್, ವರಾಹ ಗೇಟ್, ಜಯಮಾರ್ತಾಂಡ ಗೇಟ್, ಕೆಆರ್ ಸರ್ಕಲ್, ಸೆಂಟ್ ಫಿಲೋಮಿನಾ ಚರ್ಚ್, ಗ್ರಾಮಾಂತರ ಬಸ್ ನಿಲ್ದಾಣ, ಗಾಂಧಿ ವೃತ್ತ, ಮೃಗಾಲಯ, ದಸರಾ ವಸ್ತು ಪ್ರದರ್ಶನ ಮುಖ್ಯದ್ವಾರ ಹಾಗೂ ಪೂರ್ವ ಗೇಟ್, ಕಾರಂಜಿ ಕೆರೆ, ಮಾಲ್ ಆಫ್ ಮೈಸೂರು ಬಳಿ, ಆಹಾರ ಮೇಳ ಸ್ಥಳಗಳು, ಚಾಮುಂಡಿ ಬೆಟ್ಟ, ಸುತ್ತೂರು ಮಠದ ಸರ್ಕಲ್, ಏಕಲವ್ಯ ಸರ್ಕಲ್, ಸ್ಕೌಟ್ಸ್ ಆಂಡ್ ಗೈಡ್ಸ್, ಗಣಪತಿ ಸಚ್ಚಿದಾನಂದ ಆಶ್ರಮ, ನಂಜನಗೂಡು ರಸ್ತೆ ಚೆಕ್‍ಪೋಸ್ಟ್, ವಿವೇಕಾನಂದ ಸರ್ಕಲ್ ಹಾಗೂ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಪೊಲೀಸ್ ಹೆಲ್ಪ್ ಲೈನ್‍ಗಳನ್ನು ಸ್ಥಾಪಿಸಲಾಗುವುದು.

Translate »