ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರಿಗೆ ಮೈಸೂರಿನ ಜನನಿ ಟ್ರಸ್ಟ್ ವತಿಯಿಂದ ಮಂಗಳವಾರ ಮೈಸೂರು ಅರಮನೆ ಆವರಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ವಿದೇಶಿಯರಿಗೆ ಮೈಸೂರಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಮೈಸೂರು ಸಿಲ್ಕ್ ಸೀರೆ ಉಟ್ಟ ಜನನಿ ಟ್ರಸ್ಟ್ ಮಹಿಳಾ ಸದಸ್ಯರು ದೇಶ ವಿದೇಶಗಳ ಪ್ರವಾಸಿಗರಿಗೆ ಸಾಂಪ್ರದಾಯಿಕವಾಗಿ ಹಣೆಗೆ ತಿಲಕವಿಟ್ಟು, `ಸ್ವಾಗತವು ನಿಮಗೆ, ಸುಸ್ವಾಗತವೂ ನಿಮಗೆ.. ಹಾಡು ಹೇಳಿ ಆರತಿ ಎತ್ತಿ ಸ್ವಾಗತಿಸಿದರು. ಪನ್ನೀರ್‍ದಾನಿಯಿಂದ ಸುವಾಸಿತ ಪನ್ನೀರು ಸಿಂಪಡಿಸಿ, ಗುಲಾಬಿ ಹೂ ನೀಡಿ, ಮೈಸೂರು ಪೇಟ ತೊಡಿಸಿದರು. ಮೈಸೂರು ಪಾಕ್ ತಿನಿಸಿದರು. ವಿದೇಶಿ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿ, ಹಸಿರು ಬಳೆ ತೊಡಿಸಿ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ ಕೊಟ್ಟು ಮೈಸೂರು ಸಂಪ್ರದಾಯದ ಬಗ್ಗೆ ಅವರಿಗೆ ವಿವರಿಸಿದರು.
ಮೈಸೂರಿನಲ್ಲಿ ತಮಗೆ ಸಿಕ್ಕಿದ ಆತ್ಮೀಯ ಸ್ವಾಗತಕ್ಕೆ ಇಟಲಿಯ ವಿದೇಶಿ ದಂಪತಿ ಹರ್ಷಚಿತ್ತ ರಾದರು. ಜನನಿ ಟ್ರಸ್ಟ್ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೈಸೂರಿನ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಾ ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ರೋಟರಿ ಕ್ಲಬ್‍ನ ನಿರ್ದೇಶಕ ಆರ್.ಗೌತಮ್ ಸಲೇಚಾ, ಜನನಿ ಟ್ರಸ್ಟ್‍ನ ಅಧ್ಯಕ್ಷ ಎಂ.ಕೆ.ಅಶೋಕ, ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಎನ್.ನಾಗರತ್ನ, ರೂಪಾ ಸಂಪತ್, ರಾಜೇಶ್ವರಿ ಆನಂದ್, ಕಾವೇರಿ, ಗೀತಾ ಇನ್ನಿತರರು ಉಪಸ್ಥಿತರಿದ್ದರು.