ಖಾಯಂ ಪೌರ ಕಾರ್ಮಿಕರಿಂದ ಸ್ವಚ್ಛತೆ ಆರಂಭ
ಮೈಸೂರು

ಖಾಯಂ ಪೌರ ಕಾರ್ಮಿಕರಿಂದ ಸ್ವಚ್ಛತೆ ಆರಂಭ

October 8, 2018

ಮೈಸೂರು: ಮೈಸೂರು ಮಹಾನಗರಪಾಲಿಕೆಯಲ್ಲಿ ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಸೌಲಭ್ಯಕ್ಕಾಗಿ ಪಾಲಿಕೆಯ ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನವಾದ ಭಾನುವಾರವೂ ಮುಂದುವರೆಯಿತು.

ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ದ್ವಾರದ ಬಳಿ ಪಾಲಿಕೆ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಮಂಗಳವಾರ (ಅ.9) ವಿಧಾನಸೌಧದಲ್ಲಿ ಸಭೆ ನಡೆಸಿ ಬೇಡಿಕೆ ಈಡೇರಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಪಾಲಿಕೆ ಖಾಯಂ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮತ್ತೆ ಆರಂಭಿಸಿದರು. ಆದರೆ ಗುತ್ತಿಗೆ ಪೌರ ಕಾರ್ಮಿಕರು ಮುಷ್ಕರ ಮುಂದುವರೆಸಿದ್ದಾರೆ.

ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿ ಕರ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾ ಯಣ ನೇತೃತ್ವದಲ್ಲಿ ಸಭೆ ನಡೆಸಿದ ಪೌರ ಕಾರ್ಮಿಕ ಮುಖಂಡರು, ರಾಜ್ಯ ಸರ್ಕಾರ ಭರ ವಸೆ ನೀಡಿ ಸ್ವಚ್ಛತಾ ಕಾರ್ಯ ಆರಂಭಿಸಲು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಖಾಯಂ ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಆರಂಭಿ ಸಲು ಹಾಗೂ ಗುತ್ತಿಗೆ ಪೌರಕಾರ್ಮಿಕರು ಅಹೋರಾತ್ರಿ ಕೈಬಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸಲು ನಿರ್ಣಯ ಕೈಗೊಂಡರು.

ಪ್ರಕಾಶ್ ರೈ ಬೆಂಬಲ: ಪೌರ ಕಾರ್ಮಿಕರ ಹೋರಾಟಕ್ಕೆ ಬಹುಭಾಷ ಚಿತ್ರ ನಟ ಪ್ರಕಾಶ್ ರೈ ಬೆಂಬಲ ನೀಡಿದ್ದಾರೆ. ಭಾನುವಾರ ಪ್ರತಿಭಟನಾನಿರತ ಸ್ಥಳಕ್ಕೆ ಭೇಟಿ ನೀಡಿದ ಪ್ರಕಾಶ್ ರೈ ಕೆಲಕಾಲ ಪ್ರತಿಭಟನಾಕಾರರೊಂದಿಗೆ ಕುಳಿತು ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಕಾಶ್ ರೈ, ಪೌರಕಾರ್ಮಿಕರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆಯೇ ಹೊರತು ಯಾವುದೇ ಬೆದರಿಕೆ ಒಡ್ಡುತ್ತಿಲ್ಲ. 700 ನಾಗ ರಿಕರಿಗೆ ಓರ್ವ ಪೌರ ಕಾರ್ಮಿಕ ಎಂಬ ಅವೈಜ್ಞಾನಿಕ ಆದೇಶವನ್ನು ರಾಜ್ಯ ಸರ್ಕಾರ ಕೈಬಿಡ ಬೇಕು. ಈ ಆದೇಶದಿಂದ ಅದೆಷ್ಟೋ ಪೌರಕಾರ್ಮಿಕರು ಕೆಲಸ ಕಳೆದುಕೊಳ್ಳಲಿ ದ್ದಾರೆ. ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕಿರುವುದು ಸರ್ಕಾರದ ಕರ್ತವ್ಯ. ನಾನಿಲ್ಲಿ ಒಬ್ಬ ನಾಗರಿಕನಾಗಿ ಬಂದು ಬೆಂಬಲ ನೀಡುತ್ತಿದ್ದೇನೆ ಎಂದು ತಿಳಿಸಿದರು. ಮಂಗಳವಾರ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವ ನಿರ್ಧಾರ ಕೈಗೊಳ್ಳಬೇಕು. ಪೌರ ಕಾರ್ಮಿಕರು ತಮ್ಮ ಹಕ್ಕನ್ನು ಕೇಳುವವರಿಗೆ ಆಡಳಿತ ವರ್ಗದವರು ಸುಮ್ಮನೇ ಇರುವುದು ಸರಿಯಲ್ಲ. ಅವರೇನು ಪುಕ್ಕಟೆಯಾಗಿ ಏನು ಕೇಳುತ್ತಿಲ್ಲ. ಶ್ರಮ ವಹಿಸುವ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ದೇವನೂರ ಮಹದೇವ ಬೆಂಬಲ: ಭಾನುವಾರ ಪೌರ ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಾಹಿತಿ ಹಾಗೂ ಸ್ವರಾಜ್ ಇಂಡಿಯಾದ ಮುಖಂಡ ದೇವನೂರ ಮಹಾದೇವ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪೌರ ಕಾರ್ಮಿಕರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಇದೇ ವೇಳೆ ಮಾತನಾಡಿದ ದೇವನೂರ ಮಹಾದೇವ, ಪೌರಕಾರ್ಮಿಕರು ತಮ್ಮ ವೃತ್ತಿಯ ಕಾರಣಕ್ಕೆ ಅನಾರೋಗ್ಯಕ್ಕೆ ತುತ್ತಾಗಿ 8ರಿಂದ 10 ವರ್ಷ ತಮ್ಮ ಆಯಸ್ಸು ಕಡಿಮೆ ಮಾಡಿಕೊಳ್ಳುತ್ತಾರೆ. ಅವರ ತ್ಯಾಗವನ್ನು ನಗರದ ಜನತೆ ಅರ್ಥ ಮಾಡಿಕೊಳ್ಳಬೇಕು. ನಗರದ ಜನತೆಗೆ ಪೌರ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಬೇಕು. ಅವರು ಸರ್ಕಾರವನ್ನು ಹೆಚ್ಚೇನೂ ಕೇಳುತ್ತಿಲ್ಲ. ಸರ್ಕಾರವೇ ಈ ಹಿಂದೆ ತೆಗೆದುಕೊಂಡ ತೀರ್ಮಾನ ವನ್ನು ಅನುಷ್ಠಾನಗೊಳಿಸಲು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸರ್ಕಾರ ಬೇಡಿಕೆ ಈಡೇ ರಿಸಬೇಕು ಎಂದು ಒತ್ತಾಯಿಸಿದರು. ಪೌರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ, ಪೌರ ಕಾರ್ಮಿಕ ಮುಖಂಡ ಎನ್.ಮಾರ ಸೇರಿದಂತೆ ಮತ್ತಿತರರಿದ್ದರು.

ರಸ್ತೆಗಿಳಿದ ಸ್ವೀಪಿಂಗ್ ಮೆಷಿನ್

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಪ್ರಮುಖ ರಸ್ತೆಗಳಲ್ಲಿರುವ ಕಸ ಸಂಗ್ರ ಹಿಸುವುದಕ್ಕೆ ಮೈಸೂರು ನಗರಪಾಲಿಕೆ ಗುತ್ತಿಗೆ ದಾರರೊಬ್ಬರ ಬಳಿ ಇದ್ದ ಕಸ ಗುಡಿಸುವ ಯಂತ್ರವನ್ನು ಬಳಸುವುದಕ್ಕೆ ಮುಂದಾ ಗಿದ್ದು, ಸೋಮವಾರದಿಂದ ಅಧಿಕೃತವಾಗಿ ಯಂತ್ರದ ಮೂಲಕ ಮುಖ್ಯ ರಸ್ತೆಗಳ ಸ್ವಚ್ಛತಾ ಕಾರ್ಯ ಆರಂಭಿಸಲು ನಿರ್ಧರಿ ಸಿದೆ. ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ಸೌಂದರ್ಯ ಕಾಪಾಡುವ ಅಗತ್ಯ ವಿದೆ. ಈ ನಡುವೆ ಖಾಯಂ ಮಾಡು ವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರು ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲೆಂದರಲ್ಲಿ ಕಸ ಸಂಗ್ರಹಣೆಯಾಗಿ ಸಾರ್ವ ಜನಿಕರು ಪರದಾಡುವಂತಾಗಿದೆ. ಈ ನಡುವೆ ನಗರ ಪಾಲಿಕೆ ಪ್ರಮುಖ ರಸ್ತೆಗಳನ್ನು ಗುರಿಯಾಗಿಟ್ಟುಕೊಂಡು ರಸ್ತೆಯಲ್ಲಿ ಬಿದ್ದಿರುವ ಮಣ್ಣು, ಕಸ, ಕಡ್ಡಿ, ಧೂಳನ್ನು ಸಂಗ್ರಹ ಮಾಡುವುದಕ್ಕೆ ಯಂತ್ರದ ಮೊರೆ ಹೋಗಿದೆ. ಈ ಹಿಂದೆ ಮೈಸೂರು ನಗರ ಪಾಲಿಕೆಯಲ್ಲಿ ಸ್ವಚ್ಛತಾ ಯಂತ್ರ ಇತ್ತಾದರೂ ಅದು ಕೆಟ್ಟಿದ್ದರಿಂದ ಅದರ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಖಾಸಗಿ ಸಂಸ್ಥೆಯಲ್ಲಿದ್ದ ಕಸ ಗುಡಿಸುವ ಯಂತ್ರವನ್ನು ಬಾಡಿಗೆಗೆ ಪಡೆದು ಸ್ವಚ್ಛತಾ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಸೋಮವಾರದಿಂದ (ಅ.8) ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಕೆಆರ್‍ಎಸ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬಿದ್ದಿರುವ ಕಸ, ಮಣ್ಣು, ಧೂಳು ಈ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ರಸ್ತೆ ವಿಭಜಕದ ಬಳಿ ಇರುವ ಮಣ್ಣನ್ನೂ ಸಹ ಈ ಯಂತ್ರ ಸಂಗ್ರಹಿಸುವುದರಿಂದ ರಸ್ತೆಗಳ ಸೌಂದರ್ಯ ಕಾಪಾಡಬಹುದಾಗಿದೆ.

ಈ ಕುರಿತಂತೆ ಪಾಲಿಕೆ ಆಯುಕ್ತ ಡಾ. ಕೆ.ಹೆಚ್.ಜಗದೀಶ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಗುತ್ತಿಗೆದಾರರೊಬ್ಬರ ಬಳಿ ಇದ್ದ ಕಸ ಗುಡಿಸುವ ಯಂತ್ರವನ್ನು ನಾಳೆಯಿಂದ ಬಾಡಿಗೆ ನೀಡಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಇಂದು ಜೆಎಲ್‍ಬಿ ರಸ್ತೆಯಲ್ಲಿ ಪ್ರಾಯೋಗಿಕ ವಾಗಿ ಕಸ ಗುಡಿಸುವ ಯಂತ್ರವನ್ನು ಬಳಸಿದ್ದೇವೆ. ರಸ್ತೆಯಲ್ಲಿರುವ ಮಣ್ಣನ್ನು ಈ ಯಂತ್ರ ಸಂಗ್ರಹಿಸುತ್ತದೆ. ಅಲ್ಲದೇ ವ್ಯಾಕ್ಯೂಮ್ ಬಳಸಿ ರಸ್ತೆಯನ್ನು ಶುಚಿಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಪ್ರಮುಖ ರಸ್ತೆಗಳ ಸ್ವಚ್ಛತೆಗೆ ಈ ಯಂತ್ರವನ್ನು ಬಳಸಿಕೊಳ್ಳಲಾಗುತ್ತದೆ. ಪಾಲಿಕೆಯ ಕೆಟ್ಟು ನಿಂತಿರುವ ಕಸ ಗುಡಿಸುವ ಯಂತ್ರವನ್ನು ದುರಸ್ತಿ ಮಾಡಿಸಲಾಗುತ್ತಿದ್ದು, ಒಂದೆರಡು ದಿನದಲ್ಲಿ ಆ ಯಂತ್ರದ ಸೇವೆಯೂ ಲಭ್ಯವಾಗಲಿದೆ ಎಂದು ತಿಳಿಸಿದರು.

Translate »