ದಸರೆಗೆ ಪ್ರವಾಸೋದ್ಯಮ ಇಲಾಖೆಯಿಂದ 8 ಕೋಟಿ ವೆಚ್ಚ
ಮೈಸೂರು

ದಸರೆಗೆ ಪ್ರವಾಸೋದ್ಯಮ ಇಲಾಖೆಯಿಂದ 8 ಕೋಟಿ ವೆಚ್ಚ

October 8, 2018

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ದಸರಾ ಸಂಬಂಧಿತ ಕಾರ್ಯಕ್ರಮಗಳು ಹಾಗೂ ಪ್ರಚಾರಕ್ಕಾಗಿ ಪ್ರವಾಸೋದ್ಯಮ ಇಲಾಖೆ 8 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ತಿಳಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಸಭಾಂಗಣದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋ ತ್ಸವವನ್ನು ಪ್ರವಾಸೋದ್ಯಮ ಕೇಂದ್ರೀತವಾಗಿ ಆಚರಿಸಲು ಮುಖ್ಯಮಂತ್ರಿಗಳು ಹಾಗೂ ಪ್ರವಾಸೋದ್ಯಮ ಸಚಿವರ ನಿರ್ದೇಶನದಂತೆ 8 ಕೋಟಿ ರೂ. (805.39 ಲಕ್ಷಗಳು) ವೆಚ್ಚದ ಕ್ರಿಯಾಯೋಜನೆ ರೂಪಿಸಿ ವಿವಿಧ ಪ್ರವಾಸಿ ಕಾರ್ಯಕ್ರಮಗಳನ್ನು ಸೆ.27ರಿಂದ ಅ.19ರವರೆಗೆ ಆಯೋಜನೆ ಮಾಡಲಾಗುತ್ತಿದೆ ಎಂದರು.

ಮುದ್ರಣ ಮಾಧ್ಯಮಗಳ ಜಾಹೀರಾತಿಗೆ 125.91 ಲಕ್ಷ ರೂ., ವಿದ್ಯುನ್ಮಾನ ಮಾಧ್ಯಮಗಳ ಜಾಹೀ ರಾತಿಗೆ 234.58 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನ ಹಾಗೂ ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಇಲಾಖೆಯ ಮಳಿಗೆ ಪ್ರದರ್ಶನ ಸೇರಿ 85 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ.

ಮೈಸೂರು ಪುರಭವನದ ಮೇಲೆ`3 ಡಿ’ ಮ್ಯಾಪಿಂಗ್ ಪ್ರದರ್ಶನ ಅ.14ರಿಂದ ಅ.18ರವರೆಗೆ ನಡೆಯಲಿದೆ. ಇದಕ್ಕಾಗಿ 49.90 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಮೈಸೂರು ಜಿಲ್ಲಾಡಳಿತದ ಮೂಲಕ ಆಯೋಜಿಸುವ ವಿವಿಧ ಪ್ರವಾಸಿ ಚಟುವಟಿಕೆಗಳಿಗೆ 310 ಲಕ್ಷ ರೂ. (3.10 ಕೋಟಿ) ವೆಚ್ಚ ಮಾಡಲಾಗುತ್ತಿದೆ ಎಂದರು. ಅ.13ರಂದು ಮೈಸೂರಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್, ಅ.18ರಂದು ಟ್ರೆಶರ್ ಹಂಟ್ ಕಾರ್ಯಕ್ರಮ ನಡೆಯಲಿದೆ. ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಅ.10ರಿಂದ 2019ರ ಜ.10ರವರೆಗೆ ದಸರಾ ಲ್ಯಾಂಟರ್ನ್ ಫೆಸ್ಟ್ ಜರುಗಲಿದೆ ಎಂದರು.

ಶ್ರೀರಂಗಪಟ್ಟಣದಲ್ಲಿ ವಿಶೇಷ ಧ್ವನಿ-ಬೆಳಕು ಪ್ರದರ್ಶನ: ಶ್ರೀರಂಗಪಟ್ಟಣದಲ್ಲಿ ಕೆಎಸ್ಟಿಡಿಸಿ ವತಿಯಿಂದ ಶ್ರೀರಂಗಪಟ್ಟಣದ ಇತಿಹಾಸ, ವೈಶಿಷ್ಟ್ಯ ಅನಾವರಣಗೊಳಿಸುವ ವಿಶೇಷ ಧ್ವನಿ ಮತ್ತು ಬೆಳಕು ಪ್ರದರ್ಶನ ಆಯೋಜಿಸಲಾಗುತ್ತಿದೆ. ಅ.15ರಿಂದ ಈ ಕಾರ್ಯ ಕ್ರಮ ಆರಂಭಗೊಳ್ಳಲಿದ್ದು, ಪ್ರತಿದಿನ ಸಂಜೆ 7ರಿಂದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದೆ. ತಲಾ 50 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್ ಮತ್ತಿತರರು ಹಾಜರಿದ್ದರು.

Translate »