ಮೈಸೂರು: ಅಪಾರ ಸಂಖ್ಯೆಯ ವೀಕ್ಷಕರ ಮುಗಿಲು ಮುಟ್ಟಿದ ಕೇಕೆಯ ನಡುವೆ ದಸರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ `ಗ್ರಾವೆಲ್ ಫೆಸ್ಟ್’ನಲ್ಲಿ ವಿವಿಧ ಬಗೆಯ ರೇಸ್ ಕಾರುಗಳು ಧೂಳೆಬ್ಬಿಸಿ ಅಬ್ಬರಿಸಿ ಗಮನ ಸೆಳೆದವು.
ಮೈಸೂರು ಜಿಲ್ಲಾ ಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅಸ್ಕಾಮ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಿ ಆಯೋಜಿಸಿದ್ದ `ದಸರಾ ಗ್ರಾವೆಲ್ ಫೆಸ್ಟ್’ನಲ್ಲಿ ವಿವಿಧ ರಾಜ್ಯಗಳೂ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 178 ರೇಸ್ ಕಾರುಗಳು ಧೂಳೆಬ್ಬಿಸಿ, ನೋಡುಗರ ಎದೆ ಝಲ್ ಎನ್ನುವಂತೆ ಮಾಡಿದವು.
ತೀವ್ರ ಕುತೂಹಲ ಮೂಡಿಸಿ, ಪ್ರತಿ ಸ್ಪರ್ಧೆ ಯಲ್ಲಿಯೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಕಾರು ಟ್ರ್ಯಾಕ್‍ನಲ್ಲಿ ಶರವೇಗದಲ್ಲಿ ಮುನ್ನುಗ್ಗಿ ಗಮನ ಸೆಳೆದವು. ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಗ್ರಾವೆಲ್ ಫೆಸ್ಟ್‍ಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿತ್ತು. ಈ ಹಿಂದೆ ಮೈಸೂರಿನಲ್ಲಿ ಒಮ್ಮೆ ಗ್ರಾವೆಲ್ ಫೆಸ್ಟ್ ರೇಸ್ ನಡೆದಿತ್ತಾದರೂ ದಸರಾ ಮಹೋತ್ಸವದ ವೇಳೆ ನಡೆದಿರಲಿಲ್ಲ. ಇಂದು ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ರೇಸ್‍ನಲ್ಲಿ ಪಾಲ್ಗೊಂಡಿದ್ದ ಕಾರುಗಳ ಕಾರುಬಾರನ್ನು ನೋಡಲು ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಬೆಳಗ್ಗಿನಿಂದಲೇ ಲಲಿತಮಹಲ್ ಹೆಲಿಪ್ಯಾಡ್‍ನತ್ತ ಧಾವಿಸಿ ಮಿಂಚಿನ ವೇಗದಲ್ಲಿ ಧೂಳೆಬ್ಬಿಸಿ ಸಾಗುತ್ತಿದ್ದ ಕಾರುಗಳನ್ನು ಕಣ್ತುಂಬಿಕೊಂಡರು.
ಇಂದು ನಡೆದ ಕಾರ್ ರೇಸ್‍ನಲ್ಲಿ ಚೆನೈನ ರೇಸ್ ಟ್ರ್ಯಾಕ್ ಮಾಲೀಕ ವಿಜಯಕುಮಾರ್, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ರೇಸ್ ಕಾರ್ ಚಾಲಕರಾದ ಡೆನ್ ತಿಮ್ಮಯ್ಯ, ಚೇತನ್ ಶಿವರಾಮ್, ಭೋಪಯ್ಯ, ಡೆನ್ ಧ್ರುವ ಚಂದ್ರಶೇಖರ್ ಸೇರಿ ದಂತೆ ಇನ್ನಿತರರ ಹೆಸರಾಂತ ಸ್ಪರ್ಧಿಗಳು ಪಾಲ್ಗೊಂಡು ಗಮನ ಸೆಳೆದರು. ಇದರೊಂದಿಗೆ ದೆಹಲಿ, ಕೋಲ್ಕತ್ತಾ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸ್ಫರ್ಧಿಗಳು ಹಾಗೂ ಮೈಸೂರು, ಮಡಿಕೇರಿ, ಮಂಗಳೂರು, ಹಾಸನ, ಚಿಕ್ಕಮಂಗಳೂರು, ಮೂಡಿಗೆರೆ ಸೇರಿದಂತೆ ಒಟ್ಟು 178 ರೇಸ್ ಚಾಲಕರು ಪಾಲ್ಗೊಂಡು ತಮ್ಮ ಸಾಮಥ್ರ್ಯ ಪ್ರದರ್ಶಿಸಿದರು.
8 ವಿಭಾಗದಲ್ಲಿ ಸ್ಪರ್ಧೆ: ಗ್ರಾವೆಲ್ ಫೆಸ್ಟ್‍ನಲ್ಲಿ ಕಾರುಗಳ ಸಿಸಿಗಳ ಆಧಾರದ ಮೇಲೆ 8 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. 1000ಸಿಸಿ, 1400ಸಿಸಿ, 1600 ಸಿಸಿ, ಇಂಡಿಯನ್ ಓಪನ್ ಕ್ಲಾಸ್, ಮೈಸೂರ್ ಲೋಕಲ್ ನಾವೀಸ್ ಓಪನ್, ಎಸ್.ಯು.ವಿ. ಕ್ಲಾಸ್, ಅನ್ ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್ ಸೇರಿದಂತೆ ವಿವಿಧ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು. ಅನ್ ರಿಸ್ಟ್ರಿಕ್ಟೆಡ್ ಕ್ಲಾಸ್ ವಿಭಾಗದಲ್ಲಿ ಯಾವುದೆ ವಾಹನಗಳನ್ನು ಮಾರ್ಪಾಡು ಮಾಡಿಕೊಂಡಿ ದ್ದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಮೈಸೂರ್ ಲೋಕಲ್ ನಾವೀಸ್ ಓಪನ್ ವಿಭಾಗದಲ್ಲಿ ಮೈಸೂರಿನ ಉದಯೋನ್ಮುಖ ರೇಸ್ ಪಟುಗಳಿಗೆ ಅವಕಾಶ ನೀಡಲಾಗಿತ್ತು. ಎಲ್ಲಾ ಕಾರುಗಳಿಂದ ಒಟ್ಟು 98 ಸ್ಪರ್ಧೆ ನಡೆದವು.
ಮಹಿಳೆಯರ ವಿಭಾಗದ ಕಾರ್ ರೇಸ್ ಸ್ಪರ್ಧೆಯಲ್ಲಿ 14 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ಚಿತ್ರ ನಟಿ ರೇಖಾ ಸೇರಿದಂತೆ ಬೆಂಗಳೂರು, ಹಾಸನ ಹಾಗೂ ಮೈಸೂರಿನಿಂದ ಮಹಿಳೆಯರು ರೇಸ್‍ನಲ್ಲಿ ಸ್ಪರ್ಧಿಸಿ ಗಮನ ಸೆಳೆದರು.
ಎರಡು ಟ್ರ್ಯಾಕ್: ಕಾರ್ ರೇಸ್‍ಗಾಗಿ ಎರಡು ಟ್ರ್ಯಾಕ್‍ಗಳನ್ನು ನಿರ್ಮಿಸಲಾಗಿತ್ತು. ಸುಮಾರು 2 ಕಿ.ಮಿ ದೂರದ ಎರಡು ಟ್ರ್ಯಾಕ್ ಸಿದ್ದಪಡಿಸಲಾಗಿತ್ತು. ಒಂದರ ಪಕ್ಕ ಮತ್ತೊಂದು ಟ್ರ್ಯಾಕ್ ನಿರ್ಮಿಸಲಾಗಿದ್ದು, ಎ ಮತ್ತು ಬಿ ಟ್ರ್ಯಾಕ್ ಎಂದು ಹೆಸರಿಡಲಾಗಿತ್ತು. ಏಕಕಾಲದಲ್ಲಿ ಎರಡು ಕಾರುಗಳು ರೇಸ್‍ನಲ್ಲಿ ಪಾಲ್ಗೊಂಡು, ಟ್ರ್ಯಾಕ್ ಬದಲಾಯಿಸಿ ಮತ್ತೊಂದು ಟ್ರ್ಯಾಕ್‍ನಲ್ಲಿ ತೆರಳಿ ರೋಮಾಂಚಕ ಅನುಭವವನ್ನುಂಟು ಮಾಡಿದವು.
ಚಾಲನೆ: ಗ್ರಾವೆಲ್ ಫೆಸ್ಟ್ ಕಾರ್ ರೇಸ್ ಅನ್ನು ಇಂದು ಬೆಳಗ್ಗೆ 9ಕ್ಕೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಹೆಚ್.ಕೆ.ರಾಮು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹಸಿರು ನಿಶಾನೆ ಪ್ರದರ್ಶಿಸುವ ಮೂಲಕ ಕಾರ್ ರೇಸ್‍ಗೆ ಚಾಲನೆ ನೀಡಿ ಶುಭಕೋರಿದರು.
ರೇಸ್‍ನ ಭದ್ರತೆಗಾಗಿ 75 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಸಾರ್ವಜನಿಕರು ಟ್ರ್ಯಾಕ್‍ಗೆ ಅಡ್ಡಲಾಗಿ ನುಗ್ಗುವುದನ್ನು ತಡೆಗಟ್ಟಲು 250 ಮಾರ್ಷಲ್ ಗಳು ಕಾರ್ಯನಿರ್ವಹಿಸಿದರು. ಇದರೊಂದಿಗೆ ಆಂಬ್ಯುಲೆನ್ಸ್, ನುರಿತ ವೈದ್ಯರ ತಂಡ, ಅಗ್ನಿ ಶಾಮಕ ವಾಹನವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.