ಮೈಸೂರು ದಸರೆಗೂ ತಟ್ಟಿದ ನೀತಿ ಸಂಹಿತೆ ಬಿಸಿ
ಮೈಸೂರು

ಮೈಸೂರು ದಸರೆಗೂ ತಟ್ಟಿದ ನೀತಿ ಸಂಹಿತೆ ಬಿಸಿ

October 8, 2018

ಮೈಸೂರು: ಮಂಡ್ಯ ಲೋಕಸಭೆ ಉಪ ಚುನಾವಣೆ ನೀತಿ ಸಂಹಿತೆಯು ಮೈಸೂರು ದಸರಾ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಅಡ್ಡಿಯಾಗಿ ಪರಿಣಮಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಕೆಆರ್ ನಗರವೂ ಬರಲಿದೆ. ಹೀಗಾಗಿ ಇಡೀ ಮೈಸೂರು ಜಿಲ್ಲೆಗೂ ನೀತಿ ಸಂಹಿತೆ ಅನ್ವಯವಾಗಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ಭಾಗಿಯಾಗುವುದು ಸದ್ಯಕ್ಕೆ ಅನುಮಾನವಾಗಿದೆ.

ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಜಿಲ್ಲಾಡ ಳಿತ ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದು, ದಸರಾ ನಾಡಹಬ್ಬವಾಗಿರುವ ಹಿನ್ನೆಲೆಯಲ್ಲಿ ವಿನಾಯಿತಿ ದೊರೆಯುವ ವಿಶ್ವಾಸವನ್ನು ಜಿಲ್ಲಾಡಳಿತ ಹೊಂದಿದ್ದು, ಚುನಾವಣಾ ಆಯೋಗ ಯಾವ ರೀತಿ ನಿರ್ಧಾರ ತಿಳಿಸ ಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದು ವೇಳೆ ಚುನಾವಣಾ ಆಯೋಗ ಉಪಚುನಾವಣೆಯ ನೀತಿ ಸಂಹಿತೆ ಸಂಬಂಧ ವಿನಾಯಿತಿ ನೀಡಲು ನಿರಾಕರಿಸಿದರೆ ಮುಖ್ಯಮಂತ್ರಿ ಹಾದಿಯಾಗಿ ಎಲ್ಲಾ ಸ್ತರ ಜನಪ್ರತಿನಿಧಿಗಳು ದಸರಾ ಮಹೋತ್ಸವದಿಂದ ಹೊರಗುಳಿಯ ಬೇಕಾಗುತ್ತದೆ. ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ವಿಜಯದಶಮಿ ಮೆರವಣಿಗೆ ಸೇರಿದಂತೆ ದಸರಾ ಮಹೋತ್ಸವದ ಎಲ್ಲಾ ಸಮಾರಂಭಗಳಲ್ಲಿ ಜನಪ್ರತಿನಿಧಿಗಳ ಕಾರು ಬಾರು ಜೋರಾಗಿರುವುದು ರೂಢಿಯಲಿದ್ದು, ಇದೀಗ ಆಯೋಗ ವಿನಾಯಿತಿಗೆ ನಿರಾಕರಿಸಿದರೆ ಜನಪ್ರತಿನಿಧಿಗಳಿಲ್ಲದ ಅಧಿಕಾರಿಗಳ ದರ್ಬಾರ್‍ಗೆ ಈ ಬಾರಿಯ ದಸರಾ ವೇದಿಕೆ ಯಾಗಲಿದೆ. ದಸರಾ ನಾಡಹಬ್ಬವಾದ ಕಾರಣ ಚುನಾವಣಾ ಆಯೋಗ ನೀತಿ ಸಂಹಿತೆಯಲ್ಲಿ ವಿನಾಯಿತಿ ನೀಡುವ ವಿಶ್ವಾಸ ವನ್ನು ಜಿಲ್ಲಾಡಳಿತ ಹೊಂದಿದೆ. ಆದರೆ ದಸರಾ ಮಹೋತ್ಸವ ನಾಡಹಬ್ಬ ಎಂದು ಅಧಿಕೃತವಾಗಿ ಪರಿಗಣಿತವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಚುನಾವಣಾ ಆಯೋಗ ಯಾವ ನಿರ್ದೇಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವವರು ದಸರಾ ಉದ್ಘಾಟನೆ, ವಿಜಯದಶಮಿ ಮೆರವಣಿಗೆ ಉದ್ಘಾಟನೆ ಮಾಡುವುದು ವಾಡಿಕೆ. ಚುನಾವಣಾ ಆಯೋಗ ನೀತಿ ಸಂಹಿತೆ ಸಂಬಂಧ ವಿನಾಯಿತಿ ನೀಡಲು ಸಮ್ಮತಿಸದೇ ಹೋದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಮೈತ್ರಿ ಸರ್ಕಾರದ ಎಲ್ಲಾ ಸಚಿವರು ದಸರಾ ಮಹೋತ್ಸವದ ಕಾರ್ಯಕ್ರಮಗಳಿಂದ ದೂರವೇ ಉಳಿಯುವ ಸನ್ನಿವೇಶ ನಿರ್ಮಾಣವಾಗಲಿದೆ. ಒಟ್ಟಾರೆ ಆಡಳಿತ ಪಕ್ಷ ನಡೆಸುತ್ತಿದ್ದ ದಸರಾ ದರ್ಬಾರ್‍ಗೆ ಕಡಿವಾಣ ಬೀಳಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮೇಯರ್ ದಸರಾ ದರ್ಬಾರ್ ಇರಲ್ಲ: ದಸರಾದಲ್ಲಿ ಮೇಯರ್ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿ ದಸರಾ ವೇಳೆ ಆಯಾಯ ಸಂದರ್ಭದಲ್ಲಿ ಮೇಯರ್ ಆಗಿರುವವರು ದಸರಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆ ಮೂಲಕ ದಸರಾ ಮಹೋತ್ಸವಕ್ಕೆ ಗಣ್ಯರನ್ನು ಆಹ್ವಾನಿಸುವ ಜವಾಬ್ದಾರಿ ನಿರ್ವಹಿಸುತ್ತಾರೆ. ಆದರೆ ಮೇಯರ್ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಈ ಬಾರಿ ಮೇಯರ್ ಇಲ್ಲದ ದಸರಾ ಮಹೋತ್ಸವ ನಡೆಯುವುದು ಖಚಿತವಾಗಿತ್ತು. ಆದರೆ ಈಗ ವಿನಾಯಿತಿ ದೊರೆಯದಿದ್ದರೆ ಜನಪ್ರತಿನಿಧಿಗಳೇ ಇಲ್ಲದ ದಸರಾ ಜರುಗಲಿದೆ.

ಜಿಪಂ ಅಧ್ಯಕ್ಷರಿಗೆ ನಿರಾಸೆ ಆಗಲಿದೆ?: ಪಕ್ಷ ನೀಡಿದ್ದ ಅವಧಿ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅವರು, ತಮ್ಮ ಪಕ್ಷದ ಹಿರಿಯರ ಸಲಹೆ ಮೇರೆಗೆ ರಾಜೀನಾಮೆ ವಾಪಸ್ಸು ಪಡೆದಿದ್ದರು. ಇದರಿಂದ ಈ ಬಾರಿ ಜಂಬೂ ಸವಾರಿಯಲ್ಲಿ ಮೇಯರ್ ಇಲ್ಲದೆ ಅವರೊಬ್ಬರೇ ಕುದುರೆ ಸವಾರಿ ಮಾಡುವ ಅವಕಾಶ ಅವರಿಗೆ ಲಭ್ಯವಾಗಿತ್ತು. ಆದರೆ ಚುನಾವಣಾ ಆಯೋಗ ಉಪ ಚುನಾವಣೆ ನೀತಿ ಸಂಹಿತೆಗೆ ವಿನಾಯಿತಿ ನೀಡದಿದ್ದರೆ ಜಿಪಂ ಅಧ್ಯಕ್ಷರಿಗೂ ನಿರಾಸೆಯಾಗಲಿದೆ.

 

Translate »