ಸಂಪುಟ ವಿಸ್ತರಣೆ ಮತ್ತೇ ಮುಂದೂಡಿಕೆ
ಮೈಸೂರು

ಸಂಪುಟ ವಿಸ್ತರಣೆ ಮತ್ತೇ ಮುಂದೂಡಿಕೆ

October 8, 2018

ಬೆಂಗಳೂರು: `ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು’ ಎಂಬ ಗಾದೆ ಮಾತಿದೆ. ಹಾಗೇ ಸಂಪುಟ ವಿಸ್ತರಣೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಭಾರೀ ತಲೆ ನೋವಾಗಿ ಪರಿಣಮಿಸಿದ್ದು, ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ನೆಪದಲ್ಲಿ ಸಂಪುಟ ವಿಸ್ತರಣೆ ದಿನಾಂಕವನ್ನು ಮುಂದೂಡುವ ಮೂಲಕ ಕಾಂಗ್ರೆಸ್ ನಾಯಕರು ಬೀಸೋ ದೊಣ್ಣೆ ತಪ್ಪಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂ ತೆಯೇ ಸಂಪುಟದಲ್ಲಿ ಸ್ಥಾನ ದೊರೆಯದೇ ಇರುವ ಹಿರಿಯ ಶಾಸಕರು ಬಂಡಾಯ ಮೈತ್ರಿ ಸರ್ಕಾರಕ್ಕೆ ತೀವ್ರ ತಲೆ ನೋವಾಗಿ ಪರಿಣಮಿಸಿತ್ತು. ಹಾಗೂ-ಹೀಗೂ ಖಾಲಿ ಉಳಿದಿರುವ ಸಚಿವ ಸ್ಥಾನ ಗಳನ್ನು ಭರ್ತಿ ಮಾಡುವ ಕಸರತ್ತೂ ನಡೆದಿತ್ತು.

ಅ.3ರ ನಂತರ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕಾತಿ ನಡೆಯಲಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಅದರನ್ವಯ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಿ ಕೊಳ್ಳಲಾಗಿತ್ತು. ಸಂಪುಟ ವಿಸ್ತರಣೆ ನಂತರವೂ ಬಂಡಾಯದ ಕೂಗು ಕೇಳಿ ಬರಬಹುದು ಎಂಬ ಆತಂಕ ಕಾಂಗ್ರೆಸ್ ಮುಖಂಡರಲ್ಲಿ ಇದ್ದೇ ಇತ್ತು. ಈ ನಡುವೆ ಚುನಾವಣಾ ಆಯೋಗವು ರಾಜ್ಯದಲ್ಲಿ ಖಾಲಿ ಇರುವ 3 ಲೋಕಸಭಾ ಕ್ಷೇತ್ರಗಳಿಗೆ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದೆ. ಇದೇ ನೆಪದಲ್ಲಿ ಸಂಪುಟ ವಿಸ್ತರಣೆ ಮುಂದೂಡುವ ಮೂಲಕ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬಿ.ಸಿ.ಪಾಟೀಲ್ ಆಕ್ರೋಶ: ಪದೇ ಪದೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿರುವುದ ರಿಂದ ಕೆರಳಿದ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಶಾಸಕರಿಗೆ ಮಾಡುತ್ತಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ರಾಜ್ಯದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಮುಗಿಯುವವರೆಗೆ ಸಂಪುಟ ವಿಸ್ತರಣೆ ಮಾಡದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಿ.ಸಿ.ಪಾಟೀಲ್ ಅವರು ಇಂದು ಟ್ವೀಟ್ ಮೂಲಕ ತೀವ್ರ ಅಸಮಧಾನ ಹೊರ ಹಾಕಿದ್ದಾರೆ.

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಿರುವ ಕ್ರಮ ಶಾಸಕರನ್ನು ಅವಮಾನ ಮಾಡಿದ ಹಾಗೆ, ಪ್ರಜಾಪ್ರಭುತ್ವವನ್ನು ಹತ್ಯೆಗೈದ ಹಾಗೆ, ಪಕ್ಷದ ಹೆಸರಿನಲ್ಲಿ ಈಗ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ಹಿಡಿಯಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ಪಕ್ಷದ ವಿರುದ್ದ ಟೀಕೆ ಮಾಡಿದ್ದಾರೆ. ಬಿ.ಸಿ.ಪಾಟೀಲ್ ಅವರು ತಮ್ಮ ಟ್ವೀಟ್‍ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಟ್ಯಾಗ್ ಮಾಡಿ ಶಾಕ್ ನೀಡಿದ್ದಾರೆ.

ರಾಹುಲ್ ಜತೆ ಚರ್ಚಿಸಿಲ್ಲ:`ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಅವರ ಜೊತೆ ಚರ್ಚೆಯೂ ನಡೆಸಿಲ್ಲ. ಆದರೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂ ದಿಗೆ ಸಮಾಲೋಚಿಸಿ ಶೀಘ್ರ ಸಂಪುಟ ವಿಸ್ತರಣೆ, ನಿಗಮ- ಮಂಡಳಿಗಳ ನೇಮಕ ಮಾಡುವಂತೆ ಸಲಹೆ ನೀಡ ಲಾಗಿದೆ’ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.

ಬೆಂಗಳೂರಿನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,“ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಗೆ ಶನಿವಾರವಷ್ಟೇ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಕಾಂಗ್ರೆಸ್ -ಜೆಡಿಎಸ್ ನಡುವಿನ ಚುನಾವಣಾ ಮೈತ್ರಿ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಅದಕ್ಕೆ ಒಂದೆರಡು ದಿನ ಸಮಯಾವಕಾಶ ಬೇಕಾಗಿದೆ” ಎಂದರು. “ಮಂಡ್ಯ ಲೋಕಸಭಾ ಕ್ಷೇತ್ರ ಸೇರಿದಂತೆ 2 ವಿಧಾನಸಭಾ ಮತ್ತು 3 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮ ವಾಗಿಲ್ಲ. ಒಂದೆರಡು ದಿನಗಳ ನಂತರ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ” ಎಂದು ಹೇಳಿದರು.

Translate »