ಸರ್ಕಾರ ಉಳಿಸಲು ಮೈತ್ರಿ ಮುಖಂಡರಿಗೆ ದಾರಿ ಕಾಣದಾಗಿದೆ
ಮೈಸೂರು

ಸರ್ಕಾರ ಉಳಿಸಲು ಮೈತ್ರಿ ಮುಖಂಡರಿಗೆ ದಾರಿ ಕಾಣದಾಗಿದೆ

July 8, 2019

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‍ನ 14 ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಕಂಟಕದಿಂದ ಪಾರಾಗುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಉಭಯ ಪಕ್ಷ ಗಳ ಮುಖಂಡರು ಇಂದು ರಾತ್ರಿ ಸುಮಾರು 4 ಗಂಟೆ ಗಳ ಕಾಲ ಚರ್ಚೆ ನಡೆಸಿದರಾದರೂ, ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗದೇ, ನಾಳೆಗೆ (ಜು.8) ಚರ್ಚೆಯನ್ನು ಮುಂದೂಡಿದ್ದಾರೆ.

ವಿದೇಶ ಪ್ರವಾಸದಿಂದ ಇಂದು ಸಂಜೆ ಬೆಂಗಳೂ ರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ ನಂತರ ರಾತ್ರಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಸರ್ಕಾರ ಉಳಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಕಾಂಗ್ರೆಸ್ ಉಸ್ತು ವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಗೃಹ ಸಚಿವ ಎಂ.ಬಿ.ಪಾಟೀಲ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಲೋಕೋ ಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಹಿರಿಯ ಮುಖಂಡ ರಾದ ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ. ಪಾಟೀಲ್ ಮುಂತಾದವರು ಸುದೀರ್ಘ ಚರ್ಚೆ ನಡೆಸಿದರು.

ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅತೃಪ್ತರನ್ನು ಸಮಾಧಾನಪಡಿಸಲು ಉಭಯ ಪಕ್ಷಗಳಿಂದ ತಲಾ ಐವರು ಸಚಿವರಿಂದ ರಾಜೀನಾಮೆ ಕೊಡಿಸಿ, ಆ ಸ್ಥಾನ ಗಳನ್ನು ಅತೃಪ್ತರಿಗೆ ನೀಡುವುದು, ಸಚಿವರ ಸಾಮೂ ಹಿಕ ರಾಜೀನಾಮೆ ಪಡೆದು, ಅತೃಪ್ತರನ್ನು ಒಳಗೊಂಡಂತೆ ಹೊಸದಾಗಿ ಸಂಪುಟ ರಚಿಸುವುದು, ಕೊನೆಯ ಅಸ್ತ್ರ ವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬದಲಾಯಿಸುವುದು, ಮುಂತಾದ ಸೂತ್ರಗಳ ಬಗ್ಗೆ ಚರ್ಚೆ ನಡೆಯಿತಾದರೂ, ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ನಾಳೆಯೂ ಕೂಡ ಕೆಲ ಸಚಿವರೂ ಸೇರಿದಂತೆ ಶಾಸಕರು ರಾಜೀನಾಮೆ ನೀಡಲಿ ದ್ದಾರೆ ಎಂಬ ಮಾಹಿತಿ ಇದ್ದು, ಮೊದಲು ಅದನ್ನು ತಡೆಯಬೇಕು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ನಮ್ಮ ಪಕ್ಷದ ಶಾಸಕರು ರಾಜೀನಾಮೆ ಕೊಡದಂತೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಪಕ್ಷದ ಶಾಸಕರ ಬಗ್ಗೆ ನೀವು ಗಮನ ಹರಿಸಿ ಎಂದು ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದಾರೆ. ಅಲ್ಲದೇ ನಿಮ್ಮ ಆಪ್ತರಾಗಿರುವ ಶಾಸಕರನ್ನು ಮುಂಬೈನಿಂದ ನೀವು ಕರೆತನ್ನಿ ನಮ್ಮ ಮೂವರು ಶಾಸಕರನ್ನು ನಾವು ಕರೆತರುತ್ತೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಹೇಳಿದರು ಎನ್ನಲಾಗಿದೆ. ಸಭೆ ಆರಂಭವಾಗುತ್ತಿದ್ದಂತೆಯೇ ಹೆಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಹೇಳಲಾಗಿದ್ದು, ಈ ವೇಳೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದ್ದು, ವೇಣುಗೋಪಾಲ್ ಅವರು ಇಬ್ಬರನ್ನೂ ಸಮಾಧಾನ ಪಡಿಸಿದರು ಎಂದು ಹೇಳಲಾಗಿದೆ.

ನೀವು ಒಂದು ಕಡೆ ಸರ್ಕಾರಕ್ಕೆ ಬೆಂಬಲ ಕೊಡುತ್ತೀರಿ. ಮತ್ತೊಂದು ಕಡೆ ನಿಮ್ಮ ಆಪ್ತ ಶಾಸಕರನ್ನು ಎತ್ತಿ ಕಟ್ಟಿ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ನೇರವಾಗಿ ಸಿದ್ದರಾಮಯ್ಯ ವಿರುದ್ಧ ಹರಿ ಹಾಯ್ದಿದ್ದಾರೆ. ನಿಮ್ಮ ಆಪ್ತ ಶಾಸಕರೇ ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿದ್ದಾರೆ. ಅವರನ್ನು ನೀವು ಸಂಭಾಳಿಸಬಹುದಿತ್ತಲ್ಲಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದಾಗ ಸಿದ್ದರಾಮಯ್ಯ, ಅವರು ನನ್ನ ಆಪ್ತರು ಎಂಬುದು ನಿಜ. ಆದರೆ ಈಗ ಅವರ್ಯಾರೂ ನನ್ನ ಮಾತು ಕೇಳುತ್ತಿಲ್ಲವಲ್ಲಾ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂದಿನ ಈ ಪರಿಸ್ಥಿತಿಗೆ ನೀವೇ (ಮುಖ್ಯಮಂತ್ರಿ) ಕಾರಣ ಎಂದು ಬೊಟ್ಟು ಮಾಡಿದ ಸಿದ್ದರಾಮಯ್ಯ, ಬಹುತೇಕ ಶಾಸಕರು ನಿಮ್ಮ ಮೇಲೆ ಅಸಮಾಧಾನಗೊಂಡಿದ್ದಾರೆ. ಅವರನ್ನು ನೀವು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಮೇಶ್ ಜಾರಕಿ ಹೊಳಿ ಅವರ ಜೊತೆ ಮಾತನಾಡಿ, ಸಮಾಧಾನಪಡಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, `ಆಯ್ತು ಬಿಡಿ, ಈಗಲೂ ಕೂಡ ಅವರ ಜೊತೆ ನಾನು ಮಾತನಾಡುತ್ತೇನೆ. ನೀವು ಅವರನ್ನು ಕರೆಸಿ’ ಎಂದು ಕುಮಾರಸ್ವಾಮಿ ಕಟುವಾಗಿ ಹೇಳಿದ್ದಲ್ಲದೇ ಆಪ್ತ ಶಾಸಕರನ್ನು ಬಿಟ್ಟು ಸರ್ಕಾರ ಉರುಳಿಸಲು ನೋಡುತ್ತಿದ್ದೀರಿ ಎಂದಾಗ, ಕೆರಳಿದ ಸಿದ್ದರಾಮಯ್ಯ ಸಭೆಯಿಂದಲೇ ಹೊರ ಬರಲು ಎದ್ದು ನಿಂತಿದ್ದಾರೆ. ಆಗ ಅವರನ್ನು ಇತರ ಮುಖಂ ಡರು ಸಮಾಧಾನಪಡಿಸಿದರು ಎನ್ನಲಾಗಿದೆ. ಮುಖ್ಯಮಂತ್ರಿಯನ್ನೇ ಬದಲಿಸಬೇಕಾದ ಪರಿಸ್ಥಿತಿ ಒದಗಿದರೆ, ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬಹುದು ಎಂಬ ನಿಟ್ಟಿನಲ್ಲಿ ಚರ್ಚೆ ನಡೆದಿದ್ದು, ಸಭೆಯ ನಡುವೆ ಖರ್ಗೆ ಅವರ ಜೊತೆ ದೇವೇಗೌಡ ಮತ್ತು ವೇಣುಗೋಪಾಲ್ ಪ್ರತ್ಯೇಕವಾಗಿ ಚರ್ಚೆ ನಡೆಸಿದರು ಎನ್ನಲಾಗಿದೆ.

ರಾಮಲಿಂಗಾ ರೆಡ್ಡಿ ಅವರನ್ನು ಸಮಾಧಾನಪಡಿಸಿದರೆ, ಎಲ್ಲವೂ ಸರಿಯಾಗುತ್ತದೆ ಎಂದು ದೇವೇಗೌಡರು ಹೇಳಿದ್ದು, ಅದಕ್ಕೆ ಪ್ರಯತ್ನಿಸುವಂತೆ ತಿಳಿಸಿದ್ದಾರೆ. ಸಭೆಯ ನಡುವೆಯೇ ರಾಮಲಿಂಗಾ ರೆಡ್ಡಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಖರ್ಗೆ ಅವರು, ಮನವೊಲಿಸಲು ಪ್ರಯತ್ನಿಸಿ ವಿಫಲರಾದರು ಎನ್ನಲಾಗಿದೆ.

ನಾಳೆ ಬೆಳಿಗ್ಗೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಶಾಸಕರ ಉಪಾಹಾರ ಕೂಟ ಏರ್ಪಡಿಸಿದ್ದು, ಆ ವೇಳೆ ಉಳಿದ ಶಾಸಕರು ರಾಜೀನಾಮೆ ನೀಡದಂತೆ ಮನವೊಲಿಸಲಾಗುತ್ತದೆ. ಅಲ್ಲದೇ ಸಚಿವರು ಸಾಮೂಹಿಕ ರಾಜೀನಾಮೆಯ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿದೆ.

Translate »