ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ತೆರೆದ ಬಸ್‍ನಲ್ಲಿ ಸಂಚರಿಸಿ ಮೈಸೂರು ನಗರದ ಅಂದ-ಚೆಂದವನ್ನು ಕಣ್ತುಂಬಿ ಕೊಳ್ಳಬಹುದು. ಜೊತೆಗೆ 10 ಐಷಾರಾಮಿ ಬಸ್‍ಗಳು ನಗರದ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣ ಬೆಳೆಸಲಿದ್ದು, ಇದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ತಮ್ಮ ವಾಹನಗಳ ಪಾರ್ಕಿಂಗ್ ಕಿರಿಕಿರಿ ಇಲ್ಲದೆ ಮೈಸೂರಿನ ರಸ್ತೆಗಳಲ್ಲಿ ಸುತ್ತಾಡುವ ಜೊತೆಗೆ ರಮಣೀಯ ತಾಣಗಳಲ್ಲಿ ವಿಹರಿಸಬಹುದಾಗಿದೆ.
ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ), ಪ್ರವಾಸೋದ್ಯಮ ಇಲಾಖೆ ವತಿ ಯಿಂದ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಸಹ ಯೋಗದಲ್ಲಿ ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದ್ದು, ತೆರೆದ ಬಸ್‍ವೊಂದರ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಗಿದ್ದು, ನಗರದ ಪ್ರೇಕ್ಷ ಣೀಯ ತಾಣಗಳಿಗೆ ತೆರಳುವ 10 ಬಸ್‍ಗಳಿಗೆ ಅ.10 ರಂದು ಚಾಲನೆ ನೀಡಲಾಗುತ್ತಿದೆ. ಈ ಬಸ್‍ಗಳ ಪ್ರಯಾಣಕ್ಕೆ `ಹಾಪ್ ಆನ್-ಹಾಪ್ ಆಫ್’ ಶೀರ್ಷಿಕೆ ನೀಡಲಾಗಿದೆ. ಈ ಎರಡು ಬಗೆಯ ಪ್ರಯಾಣ ಸೇವೆಗಳು ಅ.20ರವರೆಗೆ ಲಭ್ಯವಿರಲಿವೆ. ಈ ಬಾರಿಯ ದಸರಾದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಈ ವ್ಯವಸ್ಥೆಯನ್ನು ಸತತವಾಗಿ ಮುಂದು ವರೆಸಲು ಕೆಎಸ್‍ಟಿಡಿಸಿ ಉದ್ದೇಶಿಸಿದೆ.
ಓಪನ್ ಬಸ್‍ಗೆ ಚಾಲನೆ: ನಾಳೆಯಿಂದ ನಗರದಲ್ಲಿ ಓಪನ್ ಬಸ್ ಸಂಚಾರ ಆರಂಭವಾಗಲಿದ್ದು, ಇಂದು ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಆವರಣದಲ್ಲಿ ಓಪನ್ ಬಸ್ ಸಂಚಾರಕ್ಕೆ ಚಾಲನೆ ನೀಡುವ ಮೂಲಕ ಈ 2 ಬಗೆಯ ಪ್ರಯಾಣ ಸೇವೆಗಳಿಗೆ ಚಾಲನೆ ದೊರೆಯಿತು. ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇ ಶಕ ಕುಮಾರ್ ಪುಷ್ಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಜೊತೆಯಾಗಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇದಕ್ಕೂ ಮುನ್ನ ಹೋಟೆಲ್‍ನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಬಿಎಂ ಟಿಸಿ ಬಳಿಯಿದ್ದ ತೆರೆದ ಬಸ್‍ವೊಂದು (ಕಾವೇರಿ ಬಸ್) ದಸರಾ ಅಂಗವಾಗಿ ಮೈಸೂರಿನಲ್ಲಿ ಸಂಚ ರಿಸಲಿದೆ. ಇದು 32 ಆಸನಗಳ ವ್ಯವಸ್ಥೆ ಹೊಂದಿದ್ದು, ಮೈಸೂರು ಪೇಟ ಧರಿಸಿದ ಪ್ರವಾಸಿ ಮಾರ್ಗದರ್ಶಕ ರೊಬ್ಬರು ಬಸ್‍ನಲ್ಲಿ ಸಂಚರಿಸುವವರಿಗೆ ಮೈಸೂ ರಿನ ಪಾರಂಪರಿಕ ಕಟ್ಟಡಗಳು ಹಾಗೂ ರಸ್ತೆಗಳ ವಿಶೇಷತೆಗಳನ್ನು ತಿಳಿಸಿಕೊಡಲಿದ್ದಾರೆ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಪ್ರಯಾಣಿಕರು ಸೇವೆ ಪಡೆಯ ಬಹುದು. ಈ ಓಪನ್ ಬಸ್ ಮೈಸೂರು ನಗರ ಬಸ್ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದ್ದು, ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡುವ ಜೊತೆಗೆ ಸ್ಥಳದಲ್ಲಿ ಟಿಕೆಟ್ ಪಡೆದು ಪ್ರಯಾಣ ಬೆಳೆಸಬಹುದು ಎಂದು ವಿವರಿಸಿದರು.
ದೀಪಾಲಂಕಾರ ದರ್ಶನಕ್ಕೂ ಬಸ್ ಸಂಚಾರ: ದಸರಾ ಮಹೋತ್ಸವದಲ್ಲಿ ದೀಪಾಲಂಕಾರದಿಂದ ಮೈಸೂರು ಅರಮನೆ ಸೇರಿದಂತೆ ನಗರ ಕಂಗೊಳಿಸಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಸಕ್ತರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಓಪನ್ ಬಸ್ ಹಾಗೂ `ಹಾಪ್ ಆನ್-ಹಾಪ್ ಆಫ್’ ಬಸ್ ಗಳಲ್ಲಿ ಒಂದು ಬಸ್ ಅನ್ನು ರಾತ್ರಿ 7ರಿಂದ 10ರವರೆಗೆ `ದೀಪಾಲಂಕಾರ ದರ್ಶನ’ಕ್ಕೆ ಪ್ರಯಾಣ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.
`ಹಾಪ್ ಆನ್-ಹಾಪ್ ಆಫ್’ ಬಸ್‍ಗಳು: ಮೈಸೂರು ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು `ಹಾಪ್ ಆನ್-ಹಾಪ್ ಆಫ್’ ಎಂಬ ಶೀರ್ಷಿಕೆಯಲ್ಲಿ 10 ಬಸ್‍ಗಳು ಸಂಚಾರ ಆರಂ ಭಿಸಲಿವೆ. ಇದಕ್ಕಾಗಿ ಕೆಎಸ್‍ಆರ್‍ಟಿಸಿ ವತಿಯಿಂದ 10 ಹವಾನಿಯಂತ್ರಿತ ಪರಿಸರ ಸ್ನೇಹಿ ವೋಲ್ವೋ ಬಸ್‍ಗಳನ್ನು ಬಳಸಿಕೊಳ್ಳಲಾಗುವುದು ಎಂದು ಕುಮಾರ್ ಪುಷ್ಕರ್ ತಿಳಿಸಿದರು. ಮೈಸೂರು ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು, ಉಪನಿರ್ದೇಶಕ ಜನಾರ್ಧನ್ ಮತ್ತಿತರರು ಹಾಜರಿದ್ದರು.