ಸಿದ್ದರಾಮಯ್ಯ ಸಿಎಂ ಆದರೆ ಜೆಡಿಎಸ್ ಬೆಂಬಲ ಇಲ್ಲ: ಹೆಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ
ಮೈಸೂರು

ಸಿದ್ದರಾಮಯ್ಯ ಸಿಎಂ ಆದರೆ ಜೆಡಿಎಸ್ ಬೆಂಬಲ ಇಲ್ಲ: ಹೆಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ

July 8, 2019

ಬೆಂಗಳೂರು: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದಾದಲ್ಲಿ ಕಾಂಗ್ರೆಸ್‍ಗೆ ನೀಡಿದ ಬೆಂಬಲ ವಾಪಾಸ್ ಪಡೆಯಲಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ 5 ವರ್ಷ ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆ ಅಧಿಕಾರ ಕೊಟ್ಟರೆ ಮಾತ್ರ ಬೆಂಬಲ ನೀಡುತ್ತೇವೆ ಹೊರತು ಸಿದ್ದರಾಮಯ್ಯ ಸಿಎಂ ಆದರೆ ಬೆಂಬಲಿಸಲು ಸಿದ್ಧವಿಲ್ಲ ಎಂದು ದೇವೇಗೌಡ ಖಡಕ್ ಮಾತು ಗಳಲ್ಲಿ ಕೈ ನಾಯಕರಿಗೆ ಎಚ್ಚರಿಸಿದ್ದಾರೆ. ಪದ್ಮನಾಭ ನಗರದ ಎಚ್.ಡಿ.ದೇವೇಗೌಡ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ನಂತರ ಮಾತನಾಡಿದ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ವಿರುದ್ಧ ಹರಿಹಾಯ್ದಿದ್ದಾರೆ.

ಕೆಲವು ಅತೃಪ್ತ ಶಾಸಕರು ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ ಎಂದು ಡಿಕೆಶಿ ಸೂಚಿಸಿದ ಬೆನ್ನಲ್ಲೇ ಗೌಡರು ಸ್ಪಷ್ಟ ಮಾತುಗಳಿಂದ ಅದನ್ನು ನಿರಾಕರಿಸಿದ್ದಾರೆ.”ಸಿದ್ದರಾಮಯ್ಯ ಬೆಂಬಲಿಗರೇ ರಾಜೀನಾಮೆ ನೀಡಿದ್ದಾರೆ. ಅವರ ಮುಖಾಂತರ ಸಿದ್ದರಾಮಯ್ಯನವರೇ ಈ ಬೇಡಿಕೆ ಇಡುತ್ತಿದ್ದಾರೆ. ಆದರೆ ಇದಕ್ಕೆ ನಮ್ಮ ಪಕ್ಷ ಒಪ್ಪಲ್ಲ. ನಾಲ್ಕಾರು ಶಾಸಕರು ಹೇಳಿದಾಕ್ಷಣ ಸಿಎಂ ಮಾಡುವುದಕ್ಕೆ ಆಗುವುದಿಲ್ಲ ಎಂದು ದೇವೇಗೌಡ ಗುಡುಗಿದ್ದಾರೆ.

ಖರ್ಗೆಗೂ ಬೇಡ ಸಿಎಂ ಪಟ್ಟ: ಇನ್ನು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಸಹ ಸಿಎಂ ಆಗುವುದು ಬೇಡ ಎಂದು ದೇವೇಗೌಡರು ಸೂಚಿಸಿದ್ದಾರೆ ಎನ್ನಲಾಗಿದೆ. ದಲಿತ ಸಿಎಂ ಮಾಡಲು ಕಾಂಗ್ರೆಸ್ ಇದುವರೆಗೂ ಮುಂದಾಗಿಲ್ಲ. ಈಗ ನಾವು ಏಕೆ ಮಾಡಬೇಕು? ಮುಖ್ಯಮಂತ್ರಿ ಸ್ಥಾನ ಬದಲಿಸಲು ಮುಂದಾದರೆ ನಾವು ಬೆಂಬಲ ವಾಪಾಸ್ ಪಡೆಯುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆಂದು ವರದಿಯಾಗಿದೆ.

Translate »